ದಾವಣಗೆರೆ, ಡಿ.23- ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಬೆಳಗಾವಿಯಲ್ಲಿ ಡಿ.26 ಮತ್ತು 27ರಂದು `ಗಾಂಧಿ ಭಾರತ’ ಹೆಸರಿನಡಿ ಎಐಸಿಸಿ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ತಿಳಿಸಿದರು.
ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರ ಡಿ.26 ಮತ್ತು 27ರಂದು ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಇದರ ನೆನಪಿಗಾಗಿ ಮತ್ತೊಮ್ಮೆ ಅಲ್ಲಿ ಅಧಿವೇಶನ ಆಯೋಜಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಡಿ.26ರ ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಕಾರ್ಯಕಾರಿ ಸಮಿತಿ ಸದಸ್ಯರು, ಕೆಪಿಸಿಸಿ ಅಧ್ಯಕ್ಷರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸೇರಿದಂತೆ 150 ಸಂಸದರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪಕ್ಷದ ಬಲವರ್ಧನೆಗೆ ಅಧಿವೇಶನ ಸಹಾಯ ವಾಗಲಿದ್ದು, ಸಭೆಯಲ್ಲಿ ಪಕ್ಷದ ಸಂಘಟನೆ ಹಾಗೂ ಹೋರಾಟ ಸೇರಿದಂತೆ ದೇಶದ ಉನ್ನತಿಗೆ ಸಂಬಂ ಧಿಸಿದ ಮಹತ್ವದ ತೀರ್ಮಾನಗಳನ್ನು ಅಂದು ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಡಿ.27ರ ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಂದಿನ ಸಮಾವೇಶಕ್ಕೆ ಜಿಲ್ಲೆಯಿಂದ ಪಕ್ಷದ ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳು, ಕೆಪಿಸಿಸಿ, ಡಿಸಿಸಿ ಪದಾಧಿಕಾರಿಗಳು, ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ವಿವರಿಸಿದರು.
ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ಆಪಾದನೆ ಮಾಡಿ, ಹೇಳಿಕೆ ನೀಡಿರುವುದು ಖಂಡನೀಯ. ಹಾಗಾಗಿ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ ಅವರು ನೀಡಿದ ಅಂಬೇಡ್ಕರ್ ಕುರಿತಾದ ಹೇಳಿಕೆಯ ಹಿಂದೆ ಆರ್.ಎಸ್.ಎಸ್ ಹಾಗೂ ಪ್ರಧಾನಿ ಮೋದಿ ಅವರ ಕೈವಾಡವಿದೆ ಎಂದು ಆರೋಪಿಸಿದರು. ಕೇಂದ್ರ ಗೃಹ ಸಚಿವರು ತಮ್ಮ ಹುದ್ದೆಗೆ ಕೂಡಲೇ ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿದರು.
ಸದನದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಪಮಾನ ಮಾಡಿದ ಸಿ.ಟಿ ರವಿ ಅವರಿಗೆ ಬುದ್ಧಿ ಹೇಳದ ಬಿಜೆಪಿ ನೈತಿಕವಾಗಿ ಜನರ ಮುಂದೆ ಬೆತ್ತಲೆಯಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೆ.ಎಂ.ಮಂಜುನಾಥ್, ಎಂ.ಕೆ. ಲಿಯಾಖತ್ ಅಲಿ, ನಿಟುವಳ್ಳಿ ಎಸ್. ಪ್ರವೀಣ್ ಕುಮಾರ್, ಬಿ.ಹೆಚ್. ಉದಯ್ ಕುಮಾರ್, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ಗಿರಿಧರ್ ಸಾತಲ್, ಆನಗೋಡು ನಾಗರಾಜ್, ರವಿನಂದನ್ ಇತರರು ಇದ್ದರು.