ದಾವಣಗೆರೆ, ಡಿ.23- ನಗರದ ಕೆ.ಬಿ. ಬಡಾವಣೆಯ ಅಜ್ಜಂಪುರ ಶೆಟ್ರು ಕಾಂಪೌಂಡ್ನ ಓಂ ಶ್ರೀ ಮಂಜುನಾಥ ಸ್ವಾಮಿ ನಿವಾಸದಲ್ಲಿ ನಾಡಿದ್ದು ದಿನಾಂಕ 25ರ ಬುಧವಾರ ಬೆಳಿಗ್ಗೆ 11.25ಕ್ಕೆ 25ನೇ ವರ್ಷದ `ಅಕ್ಕಿ ಸಮರ್ಪಣೆ ಹಾಗೂ ಮಂಜುನಾಥ ಸ್ವಾಮಿ ಪೂಜಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೊನ್ನಾಳಿ ಬಾಬಣ್ಣ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದಿನ ನಿತ್ಯ ನಡೆಯಲಿರುವ ಅನ್ನ ಸಂತರ್ಪಣೆಗೆ 108 ಕ್ವಿಂಟಾಲ್ ಅಕ್ಕಿಯನ್ನು ಅಣಬೇರು ಮಂಜಣ್ಣ ಮತ್ತು ಕುಟುಂಬಸ್ಥರು ನೀಡಲಿದ್ದಾರೆ ಎಂದು ಹೇಳಿದರು.
ಅಂದು ಮಧ್ಯಾಹ್ನ 3.42ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಅಧಿಕಾರಿಗಳು ಮತ್ತು ಶಾಸಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇಲ್ಲಿನ ಭಕ್ತರು ಹಾಗೂ ಅಣಬೇರು ಮಂಜಣ್ಣ ಅವರ ಕುಟುಂಬದಿಂದ ಒಟ್ಟ 250ರಿಂದ 300 ಕ್ವಿಂಟಾಲ್ ಅಕ್ಕಿ ಶ್ರೀ ಕ್ಷೇತ್ರಕ್ಕೆ ಕಳುಹಿಸುತ್ತಿದ್ದೇವೆ ಎಂದ ಅವರು, ಅಂದು ಮಧ್ಯಾಹ್ನ ಪೂಜಾ ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ್, ಅಣಬೇರು ಮಂಜಣ್ಣ, ಜಿ. ಮಂಜುನಾಥ ಪಟೇಲ್, ಶಿವಕುಮಾರ್, ಜಿಗಳಿ ಪ್ರಕಾಶ್ ಇದ್ದರು.