ಮಕ್ಕಳಿಗೆ ಗಣಿತದ ಮನವರಿಕೆ ಮಾಡಿಕೊಡಿ-ಗಣಿತ ವಿಚಾರ ಸಂಕಿರಣದಲ್ಲಿ ಸುರೇಶ್ ಇಟ್ನಾಳ್

ಮಕ್ಕಳಿಗೆ ಗಣಿತದ ಮನವರಿಕೆ ಮಾಡಿಕೊಡಿ-ಗಣಿತ ವಿಚಾರ ಸಂಕಿರಣದಲ್ಲಿ  ಸುರೇಶ್ ಇಟ್ನಾಳ್

ದಾವಣಗೆರೆ, ಡಿ.23- ನಮ್ಮ ದೈನಂದಿನ ಜೀವನದಲ್ಲಿ ಗಣಿತದ ಅನ್ವಯಗಳನ್ನು ನಾವು ಎಲ್ಲೆಡೆ ಕಾಣಬಹುದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು ಇಂದಿನ ಅವಶ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.

ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಅಕ್ಷರ ಫೌಂಡೇಶನ್ ಸಂಯುಕ್ತಾಶ್ರ ಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಗಣಿತ ವಿಚಾರ ಸಂಕಿರಣದ ಗ್ರಾಮ ಪಂಚಾಯತ್ ಗಣಿತ ಸ್ಪರ್ಧೆಗಳ ಜಿಲ್ಲಾ ವರದಿ ಬಿಡುಗಡೆ ಹಾಗೂ ಶಾಲೆ ಮತ್ತು ಗ್ರಾಮ ಪಂಚಾಯಿತಿಗಳ ಸನ್ಮಾನ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

29 ಇಲಾಖೆಗಳು ನಮ್ಮ ವ್ಯಾಪ್ತಿಗೆ ಬರುತ್ತವೆ, ಅವರುಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಮಕ್ಕಳ ಕಲಿಕೆಯಲ್ಲಿ ಬದಲಾವಣೆ ತರುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಅಂಗನವಾಡಿ ಹಂತದಲ್ಲೇ ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತಂದು ಅವರ ವಿದ್ಯಾಭ್ಯಾಸಕ್ಕೆ ಶಿಕ್ಷಕರು ಹೆಚ್ಚಿನ ಗಮನ ನೀಡಬೇಕು ಎಂದರು.

ಸಮುದಾಯಾಭಿವೃದ್ಧಿ ಹಾಗೂ ಅಕ್ಷರ ಫೌಂಡೇಶನ್ ಮುಖ್ಯಸ್ಥ ಶಂಕರ ನಾರಾಯಣ ಜೆ.ವಿ ಪ್ರಾಸ್ತಾವಿಕವಾಗಿ ಮಾತನಾಡಿ, ಗಣಿತ ಕಲಿಕಾ ಆಂದೋಲನ ಯೋಜನೆಯು ಸುಮಾರು ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಮಕ್ಕಳು ಗಣಿತ ವಿಷಯವನ್ನು ಸರಳವಾಗಿ, ಅನುಭವಾತ್ಮಕವಾಗಿ ಕಲಿಯಲು ಜಿಲ್ಲೆಯ ಪ್ರತಿ ಶಾಲೆಗಳಿಗೆ ಗಣಿತ ಕಿಟ್ ನೀಡುವುದರ ಮೂಲಕ ಅನುಷ್ಠಾನಗೊಂಡಿರುತ್ತದೆ.

ಈ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮುದಾಯ, ಶೈಕ್ಷಣಿಕ ಸ್ವಯಂ ಸೇವಕರು, ಗ್ರಾಮ ಪಂಚಾಯತ್ ಮಟ್ಟದ ಶೈಕ್ಷಣಿಕ ತಂಡದ ನಾಯಕರು ಹಾಗೂ ಅಕ್ಷರ ಫೌಂಡೇಶನ್ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗಳನ್ನು 4ನೇ ತರಗತಿಯಿಂದ 6ನೇ ತರಗತಿಯ ಮಕ್ಕಳಿಗೆ ಒಟ್ಟು 194 ಗ್ರಾಮ ಪಂಚಾಯತಿಗಳಲ್ಲಿ ಮಾಡಲಾಗಿದ್ದು, ಸುಮಾರು 20000 ಮಕ್ಕಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡಿರುತ್ತಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ. ಹಾಗೂ ಅಕ್ಷರ ಫೌಂಡೇಶನ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಇಲಾಖೆಯ ಸಹಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು 2024-25ನೇ ವರ್ಷಕ್ಕೆ 25 ವರ್ಷಗಳು ಪೂರೈಸಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಯ ಜಿಲ್ಲಾ ವರದಿಯನ್ನು ಬಿಡುಗಡೆ ಮಾಡುವುದರ ಮೂಲಕ ಅದರ ಫಲಿತಾಂಶದ ಕುರಿತು ಚರ್ಚಿಸಲಾಯಿತು.

2024-25 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಮಟ್ಟದ ಗಣಿತ ಸ್ಪರ್ಧೆಗಳು ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದ ಜಿಲ್ಲೆಯ 25 ಗ್ರಾಮಗಳಾದ ಹಿಂಡಸಘಟ್ಟ, ನಾಗನೂರು, ಕಂಚಿಗನಹಾಳ್, ವಾಸನ, ಕಂಚುಗಾರನಹಳ್ಳಿ, ಕೋಟೆಹಾಳ್, ಮರಬನಹಳ್ಳಿ, ಕೊಕ್ಕನೂರು, ತ್ಯಾವಣಿಗೆ, ಗುಡ್ಡದ ಬೆನಕನಹಳ್ಳಿ, ದಾಗಿನಕಟ್ಟೆ, ಚಂದ್ರನಹಳ್ಳಿ, ಎನ್.ಕೆ.ಬಡವಾಣೆ, ಎಸ್.ಜಿ.ಹಳ್ಳಿ, ಚಿರಡೋಣಿ, ಹೊಸ ಬೆಳವನೂರು, ಮಲ್ಲಿಗೇನಹಳ್ಳಿ , ಮಿಯಾಪುರ, ನೀತಿಗೆರೆ ,ಕಂಸಾಗಾರ ಹುಚ್ಚಂಗಿಪುರ, ತಣಿಗೆರೆ, ತರಳಬಾಳು ನಗರ, ತುರ್ಚಗಟ್ಟ, ಯಾಲೋದಹಳ್ಳಿ ಸರ್ಕಾರಿ ಕಿರಿಯ – ಹಿರಿಯ ಶಾಲಾ ಶಿಕ್ಷಣ ಇಲಾಖೆಗೆ ಹಾಗೂ  25 ಗ್ರಾಮ ಪಂಚಾಯತಿಗಳಾದ ವಸನಾ, ನಿಲೋಗಲ್ಲು, ಶಿರಮಗೊಂಡನಹಳ್ಳಿ, ತ್ಯಾವಣಿಗೆ, ಕೊಕ್ಕನೂರು, ದಾಗಿನಕಟ್ಟೆ, ಬೆಳವನೂರು, ಲೋಕಿಕೆರೆ, ಕುಕ್ಕುವಾಡ, ಹಳೇಭಟ್ಟಿ, ದಿದ್ದಿಗಿ, ದೊಡ್ಡಬಾತಿ, ಜಿಗಳಿ, ಬಸವನಕೋಟೆ, ಸಂತೆಬೆನ್ನೂರು, ಹೆಬ್ಬಾಳು, ಅರಬಗಟ್ಟೆ, ಆನಗೋಡು, ಎಲೆಬೇತೂರ್, ಹನಗವಾಡಿ, ನಲ್ಲೂರು, ನೇರ್ಲಿಗೆ ಮತ್ತಿ, ಬನ್ನಿಕೋಡು ಗ್ರಾಮ ಪಂಚಾಯತಿ ಇಲಾಖೆಗಳಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ ಕಾರ್ಯದರ್ಶಿ ಎಲ್.ಎ.ಕೃಷ್ಣನಾಯ್ಕ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ ಜಿ,  ಗೀತಾ ಎಸ್. , ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮ ಬೋವಿ, ಬೆಳವನೂರು ಗ್ರಾಮ ಪಂಚಾಯತ್ ಸದಸ್ಯ ಜೆ.ಎಚ್.ಮಾಂತೇಶ, ಅಕ್ಷರ ಫೌಂಡೇಶನ್ ವಿಭಾಗೀಯ ವ್ಯವಸ್ಥಾಪಕರಾದ ಅಂಜಲಿನಾ ಗ್ರೇಗರಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿ.ಡಿ.ಓ., ಇಒ, ಬಿಇಒ, ಬಿಆರ್‍ಸಿ, ಅಧಿಕಾರಿಗಳು ಭಾವಹಿಸಿದ್ದರು.

error: Content is protected !!