ದಾವಣಗೆರೆ, ಡಿ. 23- ಬಹುತೇಕ ರಾಷ್ಟ್ರಗಳು ಭಯೋತ್ಪಾದನೆ ಹಾಗೂ ಶಸ್ತ್ರಾಸ್ತ್ರಗಳ ಬಲದಿಂದ ಜಗತ್ತನ್ನು ಆಳಲು ಇಚ್ಛಿಸಿದರೆ ಭಾರತವು ಶಾಂತಿ ಮತ್ತು ಜ್ಞಾನದ ಬಲದಿಂದ ಜಗತ್ತನ್ನು ಆಳ ಬಯಸುತ್ತದೆ. ಒಳ್ಳೆಯ ನಡೆ, ನುಡಿ, ಕಲೆ, ಸಾಹಿತ್ಯ ಎಲ್ಲಾ ಆಚಾರ ವಿಚಾರಗಳು 12ನೇ ಶತಮಾನದ ಶರಣರಿಂದ ಬಂದಿದ್ದರಿಂದ ಇದೇ ಶರಣ ಸಂಸ್ಕೃತಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜು ಅಭಿಪ್ರಾಯ ಪಟ್ಟರು.
ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ನಗರ ಘಟಕ ಮತ್ತು ನಗರದ ಮಾಂಟೆಸೊರಿ ಕಾನ್ವೆಂಟ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಯುವ ಜನಾಂಗದ ಮೇಲೆ ಶರಣ ಸಾಹಿತ್ಯದ ಪ್ರಭಾವ’ ವಿಷಯ ಕುರಿತು ಅವರು ಮಾತನಾಡಿದರು.
ಕಾಯಕದಲ್ಲಿ ನಿರತನಾಗಿರುವುದು ಶರಣ ಸಂಸ್ಕೃತಿಯ ಮೊದಲ ಸೂತ್ರವಾಗಿದ್ದು, ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೂ ಓದು ಬರಹದ ಕಾಯಕದಲ್ಲಿ ತೊಡಗಿರಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಂಟೆ ಸೊರಿ ಕಾನ್ವೆಂಟ್ ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಎಸ್.ಎಂ ಮಲ್ಲಮ್ಮ ಮಾತನಾಡಿ, ಹಲ ವಾರು ಶರಣರ ವಚನಗಳನ್ನು ವ್ಯಾಖ್ಯಾನಿಸಿ, ಮಕ್ಕ ಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಶರಣ ಸಂಸ್ಕೃತಿಯ ಅರಿವನ್ನು ಮೂಡಿಸಬೇಕೆಂದು ಹೇಳಿದರು.
ಈ ಸಮಾರಂಭದಲ್ಲಿ ದತ್ತಿ ದಾನಿಗಳಾದ ಮಲ್ಲಿಗೆರೆ ಮಠದ ಮನೆತನದ ಶ್ರೀಮತಿ ಎಂ. ನೀಲಾಂಬಿಕೆ ಡಾ. ಎಂ. ಈಶ್ವರ ಶರ್ಮ ಅವರನ್ನು ಸನ್ಮಾನಿಸಲಾಯಿತು ಹಾಗೂ ವಚನ ಬರಹ ಮತ್ತು ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶ್ರೀಮತಿ ವನಜಾ ಮಹಾಲಿಂಗಯ್ಯ ಅವರು ದತ್ತಿ ದಾನಿಗಳನ್ನು ಪರಿಚಯಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಗೌರವಾಧ್ಯಕ್ಷ ಎಂ. ಎಸ್. ನಾಗರಾಜಪ್ಪ ಅವರು ಶರಣ ಸಾಹಿತ್ಯ ಪರಿಷತ್ತಿನ ಉದ್ದೇಶಗಳನ್ನು ವಿವರಿಸಿದರು.
ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಉಪಾಧ್ಯಕ್ಷ ಬುಳ್ಳಾಪುರದ ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಶ್ರೀಕುಮಾರ್ ಆನೆಕೊಂಡ, ಖಜಾಂಚಿ ಶ್ರೀಮತಿ ಶೈಲಜಾ ಪಾಲಾಕ್ಷಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ಎನ್.ಎಸ್. ರಾಜು ಹಾಗೂ ಹಿರಿಯ ನ್ಯಾಯವಾದಿ ಬಿ.ಎಂ. ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮಕ್ಕಳ ಪ್ರಾರ್ಥನೆ ನಂತರ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿ ಶ್ರೀಮತಿ ಬಿ.ಜಿ. ಲೀಲಾವತಿ ಶೇಖರಪ್ಪ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಮಂಜುಳಾ ವಂದಿಸಿದರು. ರೂಪ ನಿರೂಪಿಸಿದರು.