ಮೈಕೊರೆವ ಚಳಿಗೆ ತತ್ತರಿಸಿದ ಬೆಣ್ಣೆನಗರಿ

ಮೈಕೊರೆವ ಚಳಿಗೆ ತತ್ತರಿಸಿದ ಬೆಣ್ಣೆನಗರಿ

ಬೆಚ್ಚನೆ ಉಡುಪುಗಳಿಗೆ ಡಿಮ್ಯಾಂಡ್‌, ತುಂಬಿದ ಟೀ-ಕಾಫಿ ಅಂಗಡಿ ಅಂಗಳ 

ದಾವಣಗೆರೆ, ಡಿ.18- ಚಳಿ ಚಳಿ ತಾಳೆನು ಈ ಚಳಿಯ, ಆಹಾ… ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಚಳಿಯ ತೀವ್ರತೆ ಹೆಚ್ಚಾಗಿದ್ದರಿಂದ ಎಲ್ಲರ ಬಾಯಲ್ಲೂ ಚಳಿಯ ಗುಣಗಾನ ಶುರುವಾಗಿದೆ.

ಸೂರ್ಯ ಉದಯಿಸುವ ಮೊದಲೇ ಏಳುತ್ತಿದ್ದ ಜನ, ಬೆಳಗ್ಗೆ ಎಂಟಾದರೂ ಆಹಾ ಚಳಿ ಎಂದು ಮಲಗಿರುತ್ತಾರೆ. ಇನ್ನೂ ಕೆಲ ಜನರನ್ನು ಸೂರ್ಯನ ಕಿರಣಗಳೇ ಬೆನ್ನು ತಟ್ಟಿ ಎಬ್ಬಿಸುತ್ತಿದೆ.

ಜಿಲ್ಲೆಯ ಜನ ಚಳಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಸ್ವೆಟರ್‌, ಟೋಪಿ, ಸ್ಕಾರ್ಪ್‌ ಧರಿಸಿಯೇ ಹೊರ ಬರುವಂತಾಗಿದೆ. ಬೆಳಗು ಮುಂಜಾನೆ 5 ಗಂಟೆಗೆ ನಾಗರಿಕರಿಗೆ ಸೇವೆ ನೀಡುವ ಹಾಲು-ತರಕಾರಿ ಮಾರಾಟಗಾರರು, ಪೇಪರ್‌ ವಿತರಕರು ಮತ್ತು ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಭೀಕರ ಚಳಿಗೆ ತಡಬಡಿಸುತ್ತಿದ್ದಾರೆ.

ನೇಸರನ ಆಸರೆಯಲ್ಲಿ ಹಗಲು ಕಳೆಯುವ ಜನ, ಮುಸ್ಸಂಜೆ ವೇಳೆಗೆ ಚಳಿಯ ತಾಪಕ್ಕೆ ಮುದುಡುತ್ತಿದ್ದಾರೆ. ಕೆಲಸ ಮುಗಿಸಿ ಸಂಜೆ ಸ್ನೇಹಿತರೊಡನೆ ತುಸು ಮೋಜು, ಮಸ್ತಿ ಮಾಡುತ್ತಿದ್ದ ಅಡ್ಡೆಗಳೂ ಸಹ ರಾತ್ರಿ 8ಕ್ಕೆ ಖಾಲಿಯಾಗಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ. ನವೆಂಬರ್‌ ತಿಂಗಳಲ್ಲಿ ಚಳಿ ಬೇಗನೆ ಶುರುವಾಯಿತು ಎನ್ನುವಷ್ಟರಲ್ಲಿ ಕೆಲವು ದಿನ ಥಂಡಿ ಸಾಧಾರಣವಾಗಿತ್ತು. ಆದರೀಗ ಶೀತ ಗಾಳಿಯ ಪ್ರಖರತೆ ಕಳೆದೆಂಟು ದಿನಗಳಿಂದ ಹೆಚ್ಚಾಗಿದೆ. ಈ ಕುರಿತು ಹವಾಮಾನ ಇಲಾಖೆಯೂ ಸಹ ರಾಜ್ಯದಲ್ಲಿ ವಾಡಿಕೆಗಿಂದ 2-4ಡಿಗ್ರಿ ಶೆಲ್ಸಿಯಸ್‌ ತಾಪಮಾನ ಕಡಿಮೆ ಆಗಲಿದೆ ಎಂದು ಎಚ್ಚರಿಕೆ ನೀಡಿದೆ.

ಕಳೆದ ಒಂದು ವಾರದಲ್ಲಿ ಚಳಿರಾಯ ದಾಖಲೆ ಬರೆಯಲು ಹೊರಟಿದ್ದಾನೆ. ಮಂಗಳವಾರದಂದು ಗರಿಷ್ಠ 28, ಕನಿಷ್ಠ 14 ಡಿಗ್ರಿ ಶೆಲ್ಸಿಯಸ್‌ ತಾಪಮಾನ ಕುಸಿದಿದ್ದರಿಂದ ಜಿಲ್ಲೆಯ ಜನ ಬೆಚ್ಚನೆಯ ಉಡುಪಿನಲ್ಲೂ ನಡುಗುವಂತಾಗಿದೆ.

ಶೀತದ ವಾತಾವರಣದಿಂದ ರಕ್ಷಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದು, ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಲು ಮುಂದಾಗುತ್ತಿದ್ದಾರೆ. ಇನ್ನು ಬೆಳಗ್ಗೆ-ಸಂಜೆ ವಾಯು ವಿಹಾರಕ್ಕೆ ತೆರಳುವ ಹಿರಿಯ ನಾಗರಿಕರು ಮತ್ತು ಯುವ ಸಮೂಹ ಮನೆಯ ಹೊರಕ್ಕೆ ಕಾಲಿಡಲು ಹಿಂಜರಿಯುತ್ತಿದ್ದಾರೆ.

ಅಧಿಕ ಚಳಿಯಿಂದಾಗಿ ಜಿಲ್ಲೆಯ ಜನ ನೆಗಡಿ, ಕೆಮ್ಮು, ಕಫ ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಇದು ಡಿಸೆಂಬರ್‌ ತಿಂಗಳಾದ್ದರಿಂದ ಚಳಿಯ ತೀವ್ರತೆ ಹೆಚ್ಚಾಗಿದೆ. ಬರುವ ಸಂಕ್ರಾಂತಿ ಹಬ್ಬ ಕಳೆದ ಬಳಿಕ ಚಳಿಯ ಅಬ್ಬರ ಕಡಿಮೆ ಆಗಲಿದೆ. ಶಿವರಾತ್ರಿ ಸಮೀಪಿಸುತ್ತಿದ್ದಂತೆ ಚಳಿ, ಬಿಸಿಯಾಗಲಿದೆ.

ಟೀ-ಕಾಫಿ ಅಂಗಡಿ ಮುಂದೆ ಜನವೋ ಜನ: ಬಹುತೇಕ ಜನ, ಈ ಚಳಿಗೆ ಬಿಸಿ-ಬಿಸಿ ಕರಿದ ತಿಂಡಿಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ದಿನವಿಡೀ ಟೀ, ಕಾಫಿ, ಮಿರ್ಚಿ, ಬೊಂಡಾ, ಪಕೋಡಾ ಮತ್ತು ಮಂಡಕ್ಕಿ ಸೇರಿದಂತೆ ಕರಿದ ತಿಂಡಿಗಳಿಗೆ ಡಿಮ್ಯಾಂಡ್ ಹೆಚ್ಚಿದೆ.

ಸಂಜೆ ಹೊತ್ತು ಕರಿದ ತಿಂಡಿಗಳನ್ನು ಹುಡುಕಿಕೊಂಡು ಹೋಗಿ ತಿನ್ನುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಟೀ-ಕಾಫಿ ಅಂಗಡಿಗಳ ಅಂಗಳ ತುಂಬಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ : ಬೆಚ್ಚಗಿನ ಬಟ್ಟೆ ಧರಿಸಬೇಕು, ಬಿಸಿಯಾದ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು, ಶೀತಕಾರಿ ಆಹಾರ ಸೇವಿಸಬಾರದು, ಶುಚಿತ್ವ ಕಾಪಾಡಿಕೊಳ್ಳಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ಜತೆಗೆ ಕುಡಿಯಲು ಶುದ್ಧ ನೀರು ಬಳಸಬೇಕೆಂದು ನಾಗರಿಕರಿಗೆ ಸಲಹೆ ನೀಡಿದೆ.

– ಸುನೀಲ್‌ ಹರಿಹರ, [email protected]

error: Content is protected !!