ಕನ್ನಡಪರ ಹೋರಾಟಗಾರರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ
ದಾವಣಗೆರೆ, ಡಿ. 22- ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಧಕ್ಕೆಯಾಗುತ್ತಿದ್ದು, ಕನ್ನಡ ಪರ ಹೋರಾಟಗಾರರು ಗಡಿಭಾಗದಲ್ಲಿ ಹೋರಾಟ ನಡೆಸಲು ಮುಂದಾಗಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಶನಿವಾರ ಸಂಜೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ 3ನೇ ವರ್ಷದ ಕನ್ನಡ ಹಬ್ಬ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸಾಹಿತಿಗಳು, ಕವಿಗಳು ಎಲ್ಲರನ್ನೂ ಒಳಗೊಂಡ ಸಮೃದ್ಧಿಯ ನಾಡು ಈ ಕನ್ನಡ ನಾಡು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವು ದರಿಂದಲೇ ಈ ನಾಡು ಸಮೃದ್ಧವಾಗಿದೆ ಎಂದರು.
ಅಚ್ಚ ಕನ್ನಡ ಮಾತನಾಡುವ ಜಿಲ್ಲೆ ದಾವಣಗೆರೆ ಮಾತ್ರ. ನಾವು ಯಾರ ಭಾಷೆಗೂ ದಾಸ್ಯರಾಗಿಲ್ಲ ಎಂದು ಬಸವಂತಪ್ಪ ಹೇಳಿದರು.
ಹೊರ ದೇಶದಿಂದ ಬರುವ ಉದ್ಯಮಿಗಳು ತಮ್ಮ ಕಂಪನಿಗಳಲ್ಲಿ ಶೇ.80ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಕೊಡಬೇಕೆಂಬ ಷರತ್ತನ್ನು ಸರ್ಕಾರ ವಿಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಕನ್ನಡದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಿರಿ. ನಿಮ್ಮ ಆದ್ಯತೆ ಕನ್ನಡಕ್ಕೇ ಇರಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಕನ್ನಡ ಪ್ರೇಮ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ, ಜವಾಬ್ದಾರಿಯುತ ಕನ್ನಡಿಗರಾಗಬೇಕು. ಆಗ ಮಾತ್ರ ಕನ್ನಡ ಉಳಿದು, ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕನ್ನಡದಲ್ಲಿಯೇ ವ್ಯವಹರಿಸಬೇಕು. ಕನ್ನಡದಲ್ಲಿಯೇ ಸಹಿ ಮಾಡಬೇಕು. ಪತ್ರ ವ್ಯವಹಾರ ಕನ್ನಡದಲ್ಲಿಯೇ ಇರಬೇಕು. ನಾಡು-ನುಡಿ, ನೆಲ, ಜಲದ ಸಂರಕ್ಷಣೆಗೆ ಬದ್ಧರಾಗಿರಬೇಕು. ಈ ಜವಾಬ್ದಾರಿ ನಮಗೆಲ್ಲರಿಗೂ ಅಗತ್ಯವಿದೆ ಎಂದರು.
ಕನ್ನಡದಲ್ಲಿ ಓದಿದವರಿಗೆ ಉದ್ಯೋಗಕ್ಕೆ ಒತ್ತು ಕೊಡಬೇಕು. ಇಂಗ್ಲೀಷ್ ಕಲಿತರೆ ಮಾತ್ರ ಉದ್ಯೋಗ, ಇಂಗ್ಲೀಷ್‌ನಿಂದಲೇ ಬದುಕು ಉದ್ಧಾರ ಎಂಬ ಭ್ರಮೆ ಹಲವರಲ್ಲಿದೆ. ಅದರಿಂದ ಹೊರ ಬರಬೇಕಿದೆ ಎಂದರು.
ಪಾಲಿಕೆ ಮೇಯರ್ ಕೆ.ಚಮನ್ ಸಾಬ್, ವಾಸುದೇವ ರಾಯ್ಕರ್, ಶಿವಗಂಗಾ ಶ್ರೀನಿವಾಸ್, ಆಲೂರು ಲಿಂಗರಾಜ್, ಶಾಮನೂರು ಕಣ್ಣಾಳ್ ಅಂಜಿನಪ್ಪ, ರವೀಂದ್ರ ಬಾಬು ಕೆ.ಹೆಚ್., ರಘುನಾಥ್, ಸಂತೋಶ್ ಎಸ್., ಆನಂದ್ ಜಾಧವ್, ಲೋಕಿಕೆರೆ ನಾಗರಾಜ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ್ ಇತರರಿದ್ದರು. ಸಮಗ್ರ ಕರವೇ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ.ಅವಿನಾಶ್ (ಅಭಿ) ಅಧ್ಯಕ್ಷತೆ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಅಯೂಬ್ ಖಾನ್ ನಿರೂಪಿಸಿದರು.