ಸಿ.ಟಿ. ರವಿ ಹೇಳಿಕೆಗೆ ಸಂಸದರು ಹಾಗೂ ಸಚಿವರಿಂದ ಖಂಡನೆ
ನವದೆಹಲಿ, ಡಿ. 19 – ಪ್ರತಿ ಬಾರಿಯೂ ಕೇಂದ್ರದಲ್ಲಿ ನಡೆಯುವ ಅಧಿವೇಶನ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ ಎನ್.ಡಿ.ಎ ಒಕ್ಕೂಟದವರು ಟಾರ್ಗೆಟ್ ಮಾಡುತ್ತಾ ಬಂದಿದ್ದು, ಈ ಬಾರಿ ಇವರ ವರ್ತನೆ ಅತೀ ರೇಕಕ್ಕೆ ಹೋಗಿದೆ. ರಾಹುಲ್ ಗಾಂಧಿಯವರ ಮೇಲಿನ ಮಹಿಳಾ ಸಂಸದೆಯೊಬ್ಬರ ಆರೋಪ ಸತ್ಯಕ್ಕೆ ದೂರವಾದುದ್ದು ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಸಂಸದರು ಮಾಡಿದ್ದೆ ಪಾಠ, ಆಡಿದ್ದೆ ಆಟ ಎನ್ನುವಂತೆ ಸದನದಲ್ಲಾಗಿದೆ. ಸದನದ ಹೊರ ಭಾಗದಲ್ಲಿ ಇಂಡಿಯಾ ಒಕ್ಕೂಟದ ಸದಸ್ಯರುಗಳಾದ ನಾವುಗಳು ಗೃಹ ಮಂತ್ರಿ ಅಮಿತ್ ಷಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನದ ವಿರುದ್ಧ ಹಾಗೂ ಎನ್.ಡಿ.ಎ ನಿರ್ಧಾರಗಳನ್ನು ವಿರೋಧಿಸಿ ಮಕರ್ ದ್ವಾರ್ ಬಳಿ ಪ್ರತಿಭಟಿಸುತ್ತಿದ್ದೆವು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಘೋಷಣೆಗಳೊಂದಿಗೆ ಪ್ರತಿಭಟಿಸುತ್ತಿರುವಾಗ ಬಿಜೆಪಿಯ ಸಂಸದರು ನಮ್ಮ ಹೋರಾಟವನ್ನು ತಡೆಯಲು ಮುಂದಾದರು. ಇದಲ್ಲದೆ ಎನ್.ಡಿ.ಎ ಒಕ್ಕೂಟದ ಮಹಿಳಾ ಸಂಸದರೊಬ್ಬರು ರಾಹುಲ್ ಗಾಂಧಿಯವರ ಬಗ್ಗೆ ಸುಳ್ಳು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಷಯ. ವಿನಾಃ ಕಾರಣ ರಾಹುಲ್ ಗಾಂಧಿಯವರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಜನತೆಯ ರಕ್ಷಣೆಗಾಗಿ ಆಯ್ಕೆಯಾದ ಸಂಸದೆಯೊಬ್ಬರ ಸುಳ್ಳು ಹೇಳಿಕೆಯಿಂದ ರಾಹುಲ್ ಗಾಂಧಿಯವರ ಮೇಲೆ ಎಫ್.ಐ.ಆರ್. ದಾಖಲಿಸುತ್ತಿರುವುದು ಖಂಡನೀಯ. ಇಂಡಿಯಾ ಒಕ್ಕೂಟದ ಹೋರಾಟವನ್ನು ತಡೆಯಲು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರದ ಗೃಹ ಮಂತ್ರಿಗಳು ಹಾಗೂ ಎನ್.ಡಿ.ಎ ಒಕ್ಕೂಟದವರು ಮಾಡಿರುವ ಷಡ್ಯಂತ್ರ ಇದಾಗಿದೆ ಎಂದು ಡಾ. ಪ್ರಭಾ ಅವರು ದೂರಿದ್ದಾರೆ.
ಸಿಟಿ ರವಿಗೆ ಹೇಳಿಕೆಗೆ ಸಂಸದರು, ಸಚಿವರ ಖಂಡನೆ : ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಗುಡುಗಿದ್ದಾರೆ. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಈ ರೀತಿ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದು ಸರಿಯೇ? You don’t make comments like this on women (ನೀವು ಮಹಿಳೆಯರ ಮೇಲೆ ಈ ರೀತಿಯ ಕಾಮೆಂಟ್ಗಳನ್ನು ಮಾಡಬೇಡಿ) ಎಂದು ಖಾರವಾಗಿ ತಿಳಿಸಿದ್ದಾರೆ. ಸಿಟಿ ರವಿ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸಂಸದರು ಹಾಗೂ ಸಚಿವರು ಆಗ್ರಹಿಸಿದ್ದಾರೆ.