ಜಿಪಂ ಕಚೇರಿ ಮುಂದೆ ಗ್ರಾಪಂ ನೌಕರರ ಧರಣಿ

ಜಿಪಂ ಕಚೇರಿ ಮುಂದೆ ಗ್ರಾಪಂ ನೌಕರರ ಧರಣಿ

ದಾವಣಗೆರೆ, ಡಿ.18- ಗ್ರಾ.ಪಂ ನೌಕರರ 19 ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘವು ಬಧವಾರ ಜಿಲ್ಲಾ ಪಂಚಾಯತಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿತು.

ಜಿ.ಪಂ ಆವರಣಕ್ಕೆ ಜಮಾಯಿಸಿದ ಜಿಲ್ಲೆಯ ಗ್ರಾ.ಪಂ ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ಜತೆಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಧರಣಿ ನಿರತರು, ಕರವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರ ನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.

ವಸೂಲಾತಿಯ ಶೇ.40ರ ಅನುದಾನದಲ್ಲಿ ವೇತನ ಹಾಗೂ ಕಂದಾಯ ಉಪಕರಗಳನ್ನು ಪ್ರತಿ ತಿಂಗಳು ಪಾವತಿಸಲು ಅನುಕೂಲವಾಗುವಂತೆ ಪ್ರತ್ಯೇಕ ಖಾತೆ ತೆರೆಯಲು ಗ್ರಾಮ ಪಂಚಾಯಿತಿ ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಕನಿಷ್ಠ ವೇತನ 31 ಸಾವಿರ ನಿಗಧಿ ಪಡಿಸಬೇಕು, ನೌಕರಿ ವೇಳೆ ಮರಣ ಅಥವಾ ನಿವೃತ್ತಿ ಹೊಂದಿದರೆ ಪ್ರತಿ ತಿಂಗಳು ಕನಿಷ್ಠ 6 ಸಾವಿರ ರೂ. ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂದರು.

ನೌಕರರಿಗೆ ವರ್ಗಾವಣೆಗೆ ಅವಕಾಶ, ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸುವುದು, ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಿಸುವುದು ಮತ್ತು ಐಪಿಡಿ ಸಾಳಪ್ಪ ವರದಿಯಂತೆ ಸ್ವಚ್ಚತಾಗಾರರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈಬಿಟ್ಟು ನಿರ್ದಿಷ್ಟ ಕೆಲಸ ನಿಗಧಿಪಡಿಸಬೇಕು. ನೌಕರರು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆ ವೆಚ್ಚ ಭರಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇ-ಹಾಜರಾತಿ ಲೋಪದೋಷಗಳನ್ನು ಪಂಚತಂತ್ರದಲ್ಲಿ ಸರಿಪಡಿಸುವರೆಗೆ ಸಿಬ್ಬಂದಿಗಳಿಗೆ ಪೂರ್ಣ ವೇತನ ಪಾವತಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಮನವಿ ಮಾಡಿದರು.

 ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್‌.ಸಿ. ಶ್ರೀನಿವಾಸಾಚಾರ್‌, ಗೌರವಾಧ್ಯಕ್ಷ ಕೆ.ಹೆಚ್‌. ಆನಂದರಾಜ್‌, ಪ್ರಧಾನ ಕಾರ್ಯದರ್ಶಿ ಜಿ.ಎಸ್‌ ಬಸವರಾಜ್‌, ಖಜಾಂಚಿ ಪಿ. ಚಂದ್ರಪ್ಪ, ಕೆ. ಪ್ರಸಾದ್‌, ನ್ಯಾಮತಿ ರಾಜೇಶ್ವರಿ, ಲೋಕೆಶಪ್ಪ, ಓಂಕಾರಪ್ಪ ಇತರರು ಇದ್ದರು.

error: Content is protected !!