ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ
ದಾವಣಗೆರೆ, ಡಿ.18- ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಭಾಗ್ಯವಂತರು. ಏಕೆಂದರೆ ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪಕರು ಗಳಿದ್ದಾರೆ ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ಹೇಳಿದರು.
ಅವರಿಂದು ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ವಿದ್ಯಾರ್ಥಿಗಳಿಗೆ ಏರ್ಪಾಡಾಗಿದ್ದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಉತ್ತಮ ಗುಣಮಟ್ಟದ ಅಧ್ಯಾ ಪಕ ವರ್ಗದೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಸಹ ಈಗ ಉತ್ತಮವಾಗಿವೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಎಂದೂ ಕೀಳರಿಮೆ ಇರಬಾರದು. ಬುದ್ಧಿವಂತ ವಿದ್ಯಾರ್ಥಿ ಗಳನ್ನೇ ಆಯ್ದುಕೊಂಡು ಶೈಕ್ಷಣಿಕ ಸಾಧನೆ ತೋರಿಸುವುದು ದೊಡ್ಡದಲ್ಲ, ಸರ್ಕಾರಿ ಶಾಲಾ – ಕಾಲೇಜುಗಳು ಸಾಮಾನ್ಯ ವಿದ್ಯಾರ್ಥಿಗಳನ್ನೂ ಸಹ ಸೇರಿಸಿಕೊಂಡು ಸಾಧನೆ ಮಾಡಬೇಕಾಗಿರುವುದು ಸವಾಲು ಎಂದರಲ್ಲದೇ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಮರ್ಥ್ಯವೆಂಬುದು ಇದ್ದೇ ಇರುತ್ತದೆ. ಅಂದಂದಿನ ಪಾಠ ಪ್ರವಚನಗಳನ್ನು ಅಂದಂದೆ ಅರ್ಥ ಮಾಡಿಕೊಂಡಲ್ಲಿ ಪರೀಕ್ಷೆಗಾಗಿ ಪ್ರತ್ಯೇಕವಾಗಿ ಓದುವ ಅವಶ್ಯಕತೆಯೂ ಬರುವುದಿಲ್ಲ, ಪರೀಕ್ಷೆಯು ಭಯವನ್ನೂ ಉಂಟುಮಾಡುವುದಿಲ್ಲ, ಸಂತೋಷದಿಂದ ಪರೀಕ್ಷೆ ಎದುರಿಸಬಹುದು ಎಂಬುದನ್ನು ಉದಾಹರಣೆಗಳ ಸಹಿತ ಮಂಜುನಾಥ್ ವಿವರಿಸಿದರು.
ರಾಜ್ಯದ ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಸುಮಾರು 8 ಲಕ್ಷ 60 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡು ಅದರಲ್ಲಿ 6 ಲಕ್ಷ 31 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದರೆ. ಪಿಯುಸಿಯಲ್ಲಿ 6,90,000 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡು 5,52,000 ವಿದ್ಯಾರ್ಥಿಗಳು ಉತ್ತೀರ್ಣರಾಗಿ ದ್ದಾರೆ. ಉತ್ತೀರ್ಣತೆಯ ಪ್ರಮಾಣ ಈ ವರ್ಷ ಇನ್ನು ಹೆಚ್ಚಾಗಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿಯ ಶೃತಿ ಹಾಗೂ ಧರ್ಮರಾಜ್ ಉಪಸ್ಥಿತಿಯಲ್ಲಿ ಶಾಲೆಯ ಪ್ರಾಚಾರ್ಯರಾದ ಬಿ.ಕೆ.ಮಂಜುಳಾರವರ ಅಧ್ಯಕ್ಷತೆಯಲ್ಲಿ ಅಧ್ಯಾಪಕ ವರ್ಗದ ಶಿಲ್ಪಾಚಾರ್ ಹಾಗೂ ಸೌಮ್ಯ ನಿರೂಪಿಸಿದರೆ, ಉಪಪ್ರಾಚಾರ್ಯ ಬೀರಪ್ಪ ಪ್ರಾಸ್ತಾವಿಕ ನುಡಿಗಳ ನಾಡಿದರು. ಭೀಮಪ್ಪ ವಂದನೆಗಳನ್ನು ಸಮರ್ಪಿಸಿದರು.