ಡಿಜಿಟಲ್ ಬಂಧನದಿಂದ ಎಚ್ಚರವಾಗಿರಿ..!
ಆನ್‌ಲೈನ್ ಹಗರಣಗಳು ಹೆಚ್ಚು ಅತ್ಯಾಧುನಿಕವಾಗುತ್ತಿವೆ. ವಂಚಕರು ಪೊಲೀಸ್ ವೇಷದಲ್ಲಿ ನಟಿಸಿ, ನಿಮ್ಮನ್ನು ಮೋಸಗೊಳಿಸುತ್ತಾರೆ. ಹಾಗಾಗಿ ಈ ಡಿಜಿಟಲ್ ಬಂಧನ ದಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆ ಯಿಂದ ಇರಬೇಕೆಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಎಸ್‌ಬಿಸಿ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯಲ್ಲಿ ಎಸ್ಪಿ ಉಮಾ ಪ್ರಶಾಂತ್
ದಾವಣಗೆರೆ, ಡಿ.16- ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡು, ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ನಗರದ ಎಸ್.ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಕ್ರೀಡಾ, ಎನ್ನೆಸ್ಸೆಸ್ ಘಟಕ ಹಾಗೂ ರೆಡ್ ಕ್ರಾಸ್ ಘಟಕ ಉದ್ಘಾಟಿಸಿ, ಅವರು ಮಾತನಾಡಿದರು.
ಹೆಚ್ಚಿನ ಓದು ನಮ್ಮಲ್ಲಿನ ಆತ್ಮ ವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ತಿಂಗಳಿಗೆ ಕನಿಷ್ಠ ಒಂದು ಪುಸ್ತಕವನ್ನಾದರೂ ಓದಬೇಕು ಮತ್ತು ವಿದ್ಯಾರ್ಥಿ ದೆಸೆಯಲ್ಲಿಯೇ ಸಾಧಿಸುವ ಬೃಹತ್ ಛಲ ಹೊಂದಬೇಕು ಎಂದು ಹೇಳಿದರು.
ಸಮಯ ಪಾಲನೆ, ಶ್ರಮ ಹಾಗೂ ಆತ್ಮವಿಶ್ವಾಸ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಕಷ್ಟಗಳನ್ನು ಮೆಟ್ಟಿ ನಿಂತು, ಸಾಧನೆಯ ಹಾದಿ ಹಿಡಿಯಬೇಕು ಎಂದರು.
ಒಂದು ಕಾಲದಲ್ಲಿ ಉನ್ನತ ಶಿಕ್ಷಣಕ್ಕೆ ಮಹಿಳೆಯರಿಗೆ ಅವಕಾಶ ಇರಲಿಲ್ಲ. ಆದರೆ ಪ್ರಸಕ್ತ ದಿನಗಳಲ್ಲಿ ಇಂದಿನ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಸ್ವಾತಂತ್ರ್ಯ ನೀಡಿದ್ದಾರೆ. ವಿದ್ಯಾರ್ಥಿಗಳು ಇದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.
ಓದುವ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ಗೋಜಿಗೆ ಹೋಗಬಾರದು. ಅವಶ್ಯಕತೆಗೆ ತಕ್ಕಷ್ಟೇ ಮೊಬೈಲ್ ಬಳಕೆ ಮಾಡಬೇಕು ಮತ್ತು ಸಾಮಾಜಿಕ ಜಾಲತಾಣದಿಂದ ಮಹಿಳೆಯರು ಸುರಕ್ಷಿತವಾಗಿರಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಕೆ. ಷಣ್ಮುಖ ಪ್ರಾಸ್ತಾವಿಕ ಮಾತನಾಡಿ, ಪಠ್ಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ರಾಂಕ್ ಪಡೆದಿದ್ದಾರೆ ಇದರ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತಮ್ಮದೆ ಆದ ಛಾಪು ಮೂಡಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಈ ವೇಳೆ ವಿನಾಯಕ ಎಜ್ಯುಕೇಷನ್ ಟ್ರಸ್ಟಿನ ಎನ್.ಎ. ಮುರುಗೇಶ್, ಅಥಣಿ ಪ್ರಶಾಂತ್, ಡಾ. ಭಾಗ್ಯಶ್ರೀ, ಡಾ. ಮಂಜುನಾಥ್ ಶ್ಯಾಗಲೆ, ಪ್ರೊ. ವಿಶ್ವನಾಥ್, ಸೌಮ್ಯ, ಯಶೋಧ, ಕೊಟ್ರೇಶ್ ಅಣ್ಣಪ್ಪ, ಶಾಲಿನಿ ಇತರರು ಇದ್ದರು.