ಹಿಮೋಫಿಲಿಯಾ ಪೀಡಿತರಿಗೂ ಗುರುತಿನ ಚೀಟಿ ನೀಡಬೇಕು

ಹಿಮೋಫಿಲಿಯಾ ಪೀಡಿತರಿಗೂ ಗುರುತಿನ ಚೀಟಿ ನೀಡಬೇಕು

ಬಾಪೂಜಿ ಮಕ್ಕಳ ಆಸ್ಪತ್ರೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಡಾ. ಸುರೇಶ್ ಹನಗವಾಡಿ ಸಲಹೆ

ದಾವಣಗೆರೆ, ಡಿ.16-  ಹಿಮೋಫಿಲಿಯಾ ರೋಗ ಬಂದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಜೊತೆಗೆ ಆತ್ಮಸ್ಥೆರ್ಯ ಬಹಳ ಮುಖ್ಯವಾಗಿದೆ ಅಲ್ಲದೇ ಇವರಿಗೂ  ವಿಕಲಚೇತನರಂತೆ ಗುರುತಿನ ಚೀಟಿ ನೀಡುವ ವ್ಯವಸ್ಥೆ  ಆಗಬೇಕು ಎಂದು  ಹಿಮೋ ಫಿಲಿಯಾ ತಜ್ಞ ವೈದ್ಯ ಡಾ. ಸುರೇಶ್ ಹನಗವಾಡಿ ಸಲಹೆ ನೀಡಿದರು.  

ನಗರದ ಬಾಪೂಜಿ  ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳ ಲಾಗಿದ್ದ  ವಿವೇಕ್ ಪೋಷಕರ ಆರೋಗ್ಯ ಕಾರ್ಯಾ ಗಾರದಲ್ಲಿ ಅವರು ಉಪನ್ಯಾಸ ನೀಡಿದರು.

ಹಿಮೋಫಿಲಿಯಾ ಮಗು ಜನಿಸಿದಾಗ ಪೋಷಕರು ಗಾಬರಿಗೊಳಗಾಗುವುದು ಸಹಜ. ಅದರಲ್ಲೂ   ಜೀವನ ಪರ್ಯ೦ತ ನರಳಬೇಕಾ ದಂತಹ ಅನಿವಾರ್ಯತೆ ಇದೆ  ಎ೦ದು ತಿಳಿದಾಗ ಆಘಾತಕ್ಕೊಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕರಿಗೆ ಕುಟುಂಬ ವರ್ಗದವರಿಗೆ ಸೂಕ್ತ ಮಾರ್ಗದರ್ಶನ ಅತ್ಯವಶ್ಯಕ.  ಅಲ್ಲದೇ ತಮ್ಮ ಮಗುವನ್ನು ಇತರೆ ಮಕ್ಕಳಂತೆ ಬೆಳೆಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಸಾಧ್ಯ ಎಂಬ ಆತ್ಮಸ್ಥೆರ್ಯ ತುಂಬುವುದು ವೈದ್ಯರ ಆದ್ಯ ಕರ್ತವ್ಯ ವಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯು ಕಳೆದ 28 ವರ್ಷಗಳಿಂದ  ಪುನರ್ವಸತಿ ಶಿಬಿರಗಳನ್ನು ಅಯೋಜಿಸಿ,  ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಜೀವನ ಶೈಲಿ ಉತ್ತಮ ಪಡಿಸಿಕೊಂಡು ಹಿಮೋಫಿಲಿಯಾ ವ್ಯತಿರಿಕ್ತ ಪರಿಣಾಮಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದನ್ನು ತಿಳಿಸುತ್ತ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕೆಲಸವನ್ನು ಮಾಡುತ್ತಾ ಬಂದಿದೆ. 

ಹಿಮೋಫಿಲಿಯಾ ಮಗು ಉತ್ತಮ ಶಿಕ್ಷಣ ಹೊಂದುವುದು. ಅತ್ಯವಶ್ಯಕ.  ಬಹು ವೆಚ್ಚದಾಯಕ ಚಿಕಿತ್ಸೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಮತ್ತು ಪದೇ ಪದೇ ಆಗುವ ರಕ್ತಸ್ರಾವಗಳಿಂದಾಗಿ ಕಷ್ಟಕರ ಕೆಲಸಗಳನ್ನು  ಮಾಡಲಾಗುವುದಿಲ್ಲ, ಸಮಾಜದಲ್ಲಿ ಅವರ ಜೀವನ  ಶೈಲಿಗೆ ಹೊಂದು ವಂತಹ ಉತ್ತಮ ಮೇಲು ಸ್ತರದ ಉದ್ಯೋಗಗಳಲ್ಲಿ ನೆಲೆಗೊಳ್ಳುವುದು ಸೂಕ್ತ.   

ಪೋಷಕರು ತಮ್ಮ ಹಿಮೋಫಿಲಿಯಾ ಮಗುವನ್ನು ಶಾಲೆಗೆ,  ಕಾಲೇಜಿಗೆ ಸೇರಿಸಿದಾಗ,  ಶಿಕ್ಷಕರು ಶಿಸ್ತಿನ ನೆಪದಲ್ಲಿ ಶಿಕ್ಷಿಸುತ್ತಾರೋ ಏನೋ ಎಂಬ ಆತಂಕದಲ್ಲಿರು ತ್ತಾರೆ, ಆದ್ದರಿಂದ ಇಂತಹ ಮಕ್ಕಳಿಗೆ ಪೂರಕ ವಾತಾವರಣ  ಕಲ್ಪಿಸಬೇಕು  ಇದು  ಶಾಲಾ ಅಡಳಿತ ಅಥವಾ ಸರ್ಕಾರಗಳ ಜವಾಬ್ದಾರಿ ಕೂಡಾ ಆಗಿರುತ್ತದೆ. 

ಇಂತಹ ಮಕ್ಕಳ ರಕ್ತದಲ್ಲಿ ಕೇವಲ ಹೆಪ್ಪುಗಟ್ಟುವ ಪ್ರೋಟೀನಿನ ಕೊರತೆಯಾಗಿರುತ್ತದೆಯೇ ವಿನಹ ಬುದ್ಧಿಮತ್ತೆಯಲ್ಲಿ ಮತ್ತು ಜಾಣ್ಮೆಯಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಆದ್ದರಿಂದ, ಅವರ ಆರೋಗ್ಯದ ದೃಷ್ಟಿಯಿಂದ ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಎಲ್ಲಾ ಮಕ್ಕಳಂತೆ ಪರಿಗಣಿಸಿದಲ್ಲಿ, ಅವರು ವಿದ್ಯಾಭ್ಯಾಸದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಮಕ್ಕಳಿಗೆ ಇಂತಹ ತೊಂದರೆ ಇದೆ ಎಂದು ಮಗುವನ್ನು ಸಂಪೂಣ೯ ಪ್ರತ್ಯೇಕಿಸುವುದು, ವಿಶೇಷ ಸ್ಥಾನಮಾನ ಕೊಡುವುದೂ ಕೂಡ ಒಳ್ಳೆಯದಲ್ಲ. ಬೆಳೆಯುತ್ತಿರುವ ಮಗುವಿನ ಮನಸ್ಸಿನ ಮೇಲೆ ಇದು ಪರಿಣಾಮ ಬೀರಿ ಅವರ ಬೆಳವಣಿಗೆಯಲ್ಲಿ     ಸಮಸ್ಯೆಗೊ ಳಗಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು  ತಿಳಿಸಿದರು.

ಹಿಮೊಫಿಲಿಯಾ ಮಗುವು   ರಕ್ತ ಸ್ರಾವವಾದಾಗ ಸ್ನಾಯುಗಳಲ್ಲಿ ವಿಪರೀತ ನೋವು ಮತ್ತು ನಡೆದಾಡಲಾಗದ ಪರಿಸ್ಥಿತಿಗೆ ಒಳಗಾಗುವುದು ಅಂತಹ ಸಂದರ್ಭದಲ್ಲಿ   ಕಾಲೇಜಿಗೆ ಹಾಜರಾಗುವುದು ಅಸಾಧ್ಯ. ಇದು ಜೀವನ ಪರ್ಯಂತದ ತೊಂದರೆಯಾಗಿರುವುದರಿಂದ,  ಹಾಜರಾತಿ ಕಡಿಮೆ ಎಂಬ ಒಂದೇ ಕಾರಣಕ್ಕೆ ಪರೀಕ್ಷೆಗೆ ಅವಕಾಶ ನೀಡದಿದ್ದಲ್ಲಿ ಅಂತಹ ವಿದ್ಯಾರ್ಥಿಗಳ  ಭವಿಷ್ಯ ಡೋಲಾಯಮಾನ ವಾಗುತ್ತದೆ. ಮಾನಸಿಕವಾಗಿಯೂ ಜರ್ಜರಿತವಾ ಗುವುದಲ್ಲದೇ, ಪೋಷಕರು ಅಸಹಾಯಕವಾಗ ಬೇಕಾಗುತ್ತದೆ   ಆದ್ದರಿಂದ ಇಂತಹ ವಿದ್ಯಾರ್ಥಿಗಳಿಗೆ ಸಮಾಜ, ಸರ್ಕಾರ ಮತ್ತು ಶಿಕ್ಷಕ ಸಮುದಾಯದ ಬೆಂಬಲ ಅತ್ಯಗತ್ಯವಾಗಿದೆ ಎಂದರು. 

ಹಾಗಾಗಿ ಹಿಮೋಫಿಲಿಯಾ ಹೊಂದಿದ  ವಿದ್ಯಾರ್ಥಿಗಳಿಗೆ    ಹಾಜರಾತಿಯಲ್ಲಿ ವಿಶೇಷ ಕಾಳಜಿ,  ವಿನಾಯಿತಿ,  ಹಾಜರಾಗಲು ಸಾಧ್ಯವಿಲ್ಲದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಆಯೋಜಿಸು ವುದು, ಹಾಜರಾತಿ ಕಡಿಮೆ ಇದ್ದ ಸಂದರ್ಭದಲ್ಲಿ  ವಿದ್ಯಾರ್ಥಿಯ ವೈದ್ಯಕೀಯ ಚಿಕಿತ್ಸೆ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಪರೀಕ್ಷೆಗೆ ಹಾಜರಾಗಲು ಅವಕಾಶ  ನೀಡುವುದು  ಮತ್ತು   ದೈಹಿಕ ಶಿಕ್ಷಕರಿಗೆ ಮಗುವಿನ ಆರೋಗ್ಯ ಸಮಸ್ಯೆಯ ಮಾಹಿತಿ ನೀಡಿ ಕೆಲವು ಕ್ರೀಡೆಗಳಲ್ಲಿ ಪಾಲ್ಗೊಳ್ಳದಿರುವಂತೆ ನೋಡಿಕೊಳ್ಳುವುದು ಸೂಕ್ತ ಎಂದು ಡಾ. ಸುರೇಶ್ ಹನಗವಾಡಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆ ನಿರ್ದೆಶಕ ಡಾ.ಜಿ. ಗುರುಪ್ರಸಾದ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಮೂಗನಗೌಡ ಪಾಟೀಲ್, ಡಾ. ಕೌಜಲಗಿ, ಡಾ. ಮೃತ್ಯುಂಜಯ, ಡಾ.ರಮೇಶ್‌, ಡಾ. ರೇವಪ್ಪ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ ಮತ್ತು ಇತರರು ಹಾಜರಿದ್ದರು.

error: Content is protected !!