ಅಸ್ಪೃಶ್ಯತೆಯ ನೋವುಂಡವರಿಗೆ ಒಳ ಮೀಸಲಾತಿ ಜಾರಿಗೊಳಿಸಲಿ

ಅಸ್ಪೃಶ್ಯತೆಯ ನೋವುಂಡವರಿಗೆ ಒಳ ಮೀಸಲಾತಿ ಜಾರಿಗೊಳಿಸಲಿ

ಮಾದಿಗ-ಛಲವಾದಿ ಸಮಾಜದ ಸಮಾವೇಶದಲ್ಲಿ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ

30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಕೈಲಿ ಉಪವಾಸ ಸತ್ಯಾಗ್ರಹ ಆಗಲ್ಲ. ಸರ್ಕಾರದಲ್ಲಿ ಪರ-ವಿರೋಧ ಚರ್ಚೆಗಳಿವೆ. ಅವೆಲ್ಲವನ್ನು ತೀರ್ಮಾನಿಸಿಕೊಂಡು ತದನಂತರ ಹೋರಾಟದ ಬಗ್ಗೆ ಚಿಂತಿಸೋಣ.

– ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀ 

ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ.

– ಬಿ.ಹೆಚ್‌. ವೀರಭದ್ರಪ್ಪ

ದಾವಣಗೆರೆ, ಡಿ.15- ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮರ್ಥರು, ನಿರ್ಗತಿಕರು ಹಾಗೂ ಅಸ್ಪೃಶ್ಯತೆಯಿಂದ ನೋವುಂಡವರಿಗೆ ನ್ಯಾಯ ಒದಗಿಸಲು ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರು ಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.

ಇಲ್ಲಿನ ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟಿನಿಂದ ನಗರದ ಪಾಲಿಕೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರು ರಾಮದಾಸರ 66ನೇ ಹಾಗೂ ಕೊಂಡಯ್ಯ ಸ್ವಾಮಿಗಳ 18ನೇ ಪುಣ್ಯಾರಾಧನೆ, 33ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಸಮಾಜದ ಮುಖ್ಯವಾಹಿನಿಗೆ ಬಂದವರು ಈ ಬಗ್ಗೆ ಚರ್ಚಿಸಿ-ಗೊಂದಲ ಮಾಡದೇ, ಜಾತಿ ವ್ಯವಸ್ಥೆಯಿಂದ ಬಳಲಿದ ಸಮುದಾಯಗಳು ಸಮಾಜದಲ್ಲಿ ಹೇಗೆ ಮುಂದೆ ಬರಬೇಕು ಎಂಬುದರ ಬಗ್ಗೆ ಮುಂದುವರೆದ ಎಲ್ಲಾ ಮಠಾಧೀಶರು ಮತ್ತು ಪ್ರಜ್ಞಾವಂತರು ಚಿಂತಿಸಬೇಕಿದೆ ಎಂದರು.

ಇಲ್ಲಿ ಒಬ್ಬರ ಹಕ್ಕನ್ನು ಮತ್ತೊಬ್ಬರು ಕಸಿದುಕೊಳ್ಳು ವಂತದ್ದಿಲ್ಲ. ಯಾವ ಸಮುದಾಯಕ್ಕೆ, ಯಾವ ಸಂದರ್ಭದಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮೀಸಲಾತಿ ನಿಗದಿ ಆಗಿರುತ್ತದೋ, ಅಷ್ಟು ಮೀಸಲಾತಿಯನ್ನು ಆ ಸಮುದಾಯಗಳಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಈ ಸಾಮೂಹಿಕ ವಿವಾಹದಲ್ಲಿ ಮದುವೆ ಆಗುತ್ತಿರುವವರು ಯಾರೂ ಆರ್ಥಿಕವಾಗಿ ಶಕ್ತರಾಗಿಲ್ಲ. ಇಂತಹ ನೂರಾರು ಕುಟುಂಬಗಳು ಆರ್ಥಿಕವಾಗಿ ಪ್ರಬಲರಾಗಿ ಸಮಾಜದ ಮುನ್ನೆಲೆಗೆ ಬರಲು ಒಳ ಮೀಸಲಾತಿಯ ಅವಶ್ಯವಿದೆ ಎಂದರು.

ಮಾಜಿ ಸಚಿವ ಅಲ್ಕೋಡ್‌ ಹನುಮಂತಪ್ಪ ಮಾತನಾಡಿ, ಸಮಪಾಲು, ಸಮಬಾಳು ಎಂಬುದಕ್ಕೆ ಅರ್ಥವೇ ಇಲ್ಲದಂತಾಗಿದೆ. ಚಿತ್ರದುರ್ಗದ ಸಮಾವೇಶ ದಲ್ಲಿ ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಬಳಿಕ ಒಳ ಮೀಸಲಾತಿ ಜಾರಿ ಮಾಡುತ್ತೇನೆ ಎಂಬ ಭರವಸೆ ಹುಸಿಯಾಗಿದೆ ಎಂದು ಹೇಳಿದರು.

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಶ್ರೀಗಳ ಮೇಲೂ ಹಲ್ಲೆ ಮಾಡಿರುವುದು ಖಂಡನೀಯ. ದೇಶದಲ್ಲೇ ಈ ಘಟನೆ ಇದೆ ಮೊದಲು ಎಂದ ಅವರು, ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಅಧಿಕಾರ  ಬಹಳ ದಿನ ಇರುವುದಿಲ್ಲ ಎಂದು ಎಚ್ಚರಿಸಿದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾಂಪತ್ಯದಲ್ಲಿ ಸಿರಿ-ಸಂಪತ್ತೆ  ಮುಖ್ಯವಲ್ಲ, ದಂಪತಿಗಳ ಮನಸ್ಸು ಒಂದಾಗಿರಬೇಕು ಮತ್ತು ಸತಿ-ಪತಿಗಳಲ್ಲಿ ಪ್ರೀತಿ ಇರಬೇಕು. ಯಾವುದೇ ಕಷ್ಟ-ತೊಂದರೆ ಬಂದರೂ ಅದನ್ನು ತಾಳ್ಮೆಯಿಂದ ನಿಭಾಯಿಸಿದರೆ ದಂಪತಿಗಳು ಸುಖಮಯ ಜೀವನ ನಡೆಸಬಹುದು ಎಂದು ಆಶಿಸಿದರು.

ಸಾಮೂಹಿಕ ವಿವಾಹದಲ್ಲಿ 13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ಗಾಂಧಿನಗರದಿಂದ ಮೆರವಣಿಗೆ ಮೂಲಕ ವಧು-ವರರು ವೇದಿಕೆಗೆ ಆಗಮಿಸಿದರು.

ಈ ವೇಳೆ ಟ್ರಸ್ಟಿನ ಅಧ್ಯಕ್ಷ ಬಿ.ಹೆಚ್‌. ವೀರಭದ್ರಪ್ಪ, ರಾಜ್ಯ ಪೌರಕಾರ್ಮಿಕ ಸಂಘದ ಕಾರ್ಯಾಧ್ಯಕ್ಷ ಎಲ್‌.ಎಂ ಹನುಮಂತಪ್ಪ, ಪಾಲಿಕೆ ಮೇಯರ್‌ ಕೆ. ಚಮನ್‌ ಸಾಬ್‌, ಉಪ ಮೇಯರ್‌ ಸೋಗಿ ಶಾಂತಕುಮಾರ್‌, ಮಾಜಿ ಶಾಸಕ ಎಸ್‌. ರಾಮಪ್ಪ, ಸಮಾಜದ ಮುಖಂಡ ರವಿನಾರಾಯಣ್, ಎನ್‌.ರುದ್ರಮುನಿ, ಎನ್‌.ಜಿ. ಪುಟ್ಟಸ್ವಾಮಿ, ಹೆಗ್ಗೆರೆ ರಂಗಪ್ಪ, ಶೇಖರಪ್ಪ, ಮಾದಿಗ ಮತ್ತು ಛಲವಾದಿ ಸಮಾಜದ ಮುಖಂಡರು ಇದ್ದರು.

error: Content is protected !!