ಜನರಲ್ಲಿ ಓದುವ ಸಂಸ್ಕೃತಿ ಬಿತ್ತುತ್ತಾ ಬಂದಿರುವ ನಾಡಿನ ಪ್ರತಿಷ್ಠಿತ, ದೇಶದ ಅತೀ ದೊಡ್ಡಪುಸ್ತಕ ಭಂಡಾರ ‘ಸಪ್ನ ಬುಕ್ ಹೌಸ್’ನ 23ನೇ ಶಾಖೆಯನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿ ರುವುದು ಸ್ವಾಗತಾರ್ಹ. ಇಂತಹ ಪುಸ್ತಕದ ಅಂಗಡಿಗಳು, ಗ್ರಂಥಾಲಯಗಳು, ಉದ್ಯಾನವ ನಗಳು ಹೆಚ್ಚಿಗೆಯಾಗಬೇಕು. ಇವು ನಿಜವಾದ ದೇವಾಲಯಗಳು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬಹಳ ಹಿಂದೆಯೇ `ಜನರು ದೇವಸ್ಥಾನಗಳಿಗೆ ಸರದಿ ನಿಲ್ಲುವುದನ್ನು ಬಿಟ್ಟು ಗ್ರಂಥಾಲಯ, ಪುಸ್ತಕಾಲಯಗಳಿಗೆ ಸರದಿ ನಿಲ್ಲಬೇಕು’ ಎಂದಿದ್ದರು. ಆಗ ಮಾತ್ರ ಅವರಲ್ಲಿ ವಿಚಾರಶಕ್ತಿ ಹೆಚ್ಚಾಗಿ ಮೌಢ್ಯಗಳು ದೂರವಾಗು ತ್ತವೆ. ಜನರಲ್ಲಿ ವೈಚಾರಿಕತೆ, ಮಾನವೀಯತೆ ಬೆಳೆದು ಸರ್ವೋದಯ ಉಂಟಾಗುತ್ತದೆ. ಬಾರ್‌ಗಳು, ಪೊಲೀಸ್ ಸ್ಟೇಷನ್, ಕೋರ್ಟ್‌ಗಳು ಇವುಗಳು ಸ್ವಾಗತಾರ್ಹವಲ್ಲ. ಪುಸ್ತಕಾಲಯಗಳು, ಗ್ರಂಥಾಲಯಗಳು, ಸ್ನೇಹ, ಪ್ರೀತಿ, ಕರುಣೆ, ಮೈತ್ರಿ ಇವುಗಳು ಮಾತ್ರ ಸರ್ವೋದಯಕ್ಕೆ ನಾಂದಿ ಹಾಡಬಲ್ಲವು.
ಇತ್ತೀಚಿನ ಸೋಶಿಯಲ್ ಮೀಡಿಯಾಗಳಿಂದಾಗಿ ಪುಸ್ತಕೋದ್ಯಮ ಬಹಳ ಬಿಕ್ಕಟ್ಟನ್ನು ಎದುರಿಸುತ್ತಿದೆ. ಓದುಗರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಆದರೂ ಪುಸ್ತಕಗಳ ಪ್ರಕಟಣೆ ಕಡಿಮೆಯಾಗಿಲ್ಲ.
ಕೇವಲ ದೊಡ್ಡ ದೊಡ್ಡ ನಗರಗಳಲ್ಲಿ ಪುಸ್ತಕಾಲಯಗಳಿವೆ. ದಾವಣಗೆರೆಯಲ್ಲಿ ನವಕರ್ನಾಟಕ ಪುಸ್ತಕದ ಅಂಗಡಿ ಮಾತ್ರ ಇತ್ತು. ಅದರ ಜೊತೆಗೆ ಈಗ ಸಪ್ನ ಬುಕ್ ಹೌಸ್ ಪ್ರಾರಂಭವಾಗಿರುವುದು ದಾವಣಗೆರೆ ನಗರದ ಜನತೆ ಸಂತಸಪಡಬೇಕಾದ ವಿಷಯ. ವಿದ್ಯಾನಗರಿ ಎಂದೇ ಪ್ರಸಿದ್ದಿಯಾಗಿರುವ ನಮ್ಮ ದಾವಣಗೆರೆಗೆ ಇಂತಹ ಪುಸ್ತಕ ಭಂಡಾರದ ಸಂಸ್ಥೆಯ ಅಗತ್ಯವಿತ್ತು. ಪುಸ್ತಕ ಪ್ರಿಯರೆಲ್ಲರ ಕನಸು ನನಸಾಗಿದೆ.
ಒಂದು ಪುಸ್ತಕವನ್ನು ಮನೆಗೆ ತಂದರೆ ಒಬ್ಬ ಅತ್ಯುತ್ತಮ ಸ್ನೇಹಿತನನ್ನು ಮನೆಗೆ ಕರೆತಂದಂತೆ. ಬಾಲಗಂಗಾಧರ ತಿಲಕ್ ರವರು `ನಾನು ನರಕದಲ್ಲಿದ್ದಾಗಲೂ ಒಳ್ಳೆಯ ಪುಸ್ತಕಗಳನ್ನೇ ಸ್ವಾಗತಿಸುತ್ತೇನೆ. ಅವು ಇದ್ದಲ್ಲಿ ಸ್ವರ್ಗ ತಂತಾನೇ ಹುಟ್ಟುತ್ತದೆ’. ರವೀಂದ್ರನಾಥ ಠಾಕೂರ್ ರವರು `ಬದುಕನ್ನು ಬೆಳಗಿಸಲು ಪುಸ್ತಕಗಳೇ ದಾರಿದೀಪ’. ಸ್ವಾಮಿ ವಿವೇಕಾನಂದರು `ಪುಸ್ತಕಗಳು ಒಳ್ಳೆಯವಾಗಿದ್ದರೆ ಅವು ಇಡೀ ಸಮಾಜಕ್ಕೆ ಒಳ್ಳೆಯದನ್ನು ಮಾಡಬಲ್ಲವು. ಹಾಗಾಗಿ ನೀನು ಬರೆಯುವುದಿದ್ದರೆ ಒಳ್ಳೆಯದನ್ನೇ ಬರೆ’ ಎಂದಿದ್ದಾರೆ. ಈ ಮಾತುಗಳಲ್ಲಿ ಪುಸ್ತಕದ ಮಹತ್ವವನ್ನು ತಿಳಿಯಬಹುದಾಗಿದೆ.
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.