ಜ.10 ರೊಳಗೆ ಸೊಪ್ಪಿನ ವ್ಯವಹಾರ ಎಪಿಎಂಸಿಗೆ ಸ್ಥಳಾಂತರಿಸಿ : ಜಿಲ್ಲಾಧಿಕಾರಿ

ಜ.10 ರೊಳಗೆ ಸೊಪ್ಪಿನ ವ್ಯವಹಾರ ಎಪಿಎಂಸಿಗೆ ಸ್ಥಳಾಂತರಿಸಿ : ಜಿಲ್ಲಾಧಿಕಾರಿ

ಡಿ.22ರೊಳಗೆ  ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸುವ ಭರವಸೆ

ದಾವಣಗೆರೆ, ಡಿ.12- ಬರುವ ಜನವರಿ 10ರೊಳಗೆ ಸೊಪ್ಪಿನ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ಮಹಾನಗರ ಪಾಲಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೊಪ್ಪಿನ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಹನಗಳ ದಟ್ಟಣೆ, ನಿಲುಗಡೆ ಸಮಸ್ಯೆ ಹೆಚ್ಚಾಗಿರುವ ಕಾರಣ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಡಿ.22ರೊಳಗಾಗಿ ಸೊಪ್ಪಿನ ವ್ಯಾಪಾರಿಗಳು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರವಾಗಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಮಂಡಿಪೇಟೆ, ಚೌಕಿಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದೆ. ಅಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಡುವುದರಿಂದ ಸ್ವಚ್ಛತೆಗೆ ಸಮಸ್ಯೆಯಾಗಿದೆ. ವ್ಯಾಪಾರಸ್ಥರಿಗೂ ಅಲ್ಲಿ ಶೌಚಾಲಯ, ಮೂಲಸೌಲಭ್ಯ ಇಲ್ಲದೇ ಇರುವುದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಸೊಪ್ಪಿನ ಮಾರುಕಟ್ಟೆಯನ್ನು ಸ್ಥಳಾಂತರಿಸುವುದು ಅನಿವಾರ್ಯ ಎಂದರು.

ಸೊಪ್ಪಿನ ವ್ಯಾಪಾರ ರಾತ್ರಿ 3ಗಂಟೆಯಿಂದ ಶುರುವಾಗಿ 8ಗಂಟೆಯೊಳಗೆ ಮುಗಿಯುವುದರಿಂದ ಸಂಚಾರಕ್ಕೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದು ತಿಳಿಯುತ್ತಿಲ್ಲ. ಎಪಿಎಂಸಿಗೆ ಸ್ಥಳಾಂತರವಾದರೆ ನಸುಕಿನಜಾವ ವ್ಯಾಪಾರಸ್ಥರು ಅಲ್ಲಿಗೆ ಹೋಗಲು ಕಷ್ಟವಾಗುತ್ತದೆ. ಆಟೋದವರಿಗೆ ಹಣ ನೀಡಬೇಕಾಗುತ್ತದೆಎಂದು ವ್ಯಾಪಾರಿ ಪರಶುರಾಮ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ,  ಮಂಡಿಪೇಟೆಯಿಂದ ಎಪಿಎಂಸಿ ಕೇವಲ 2.6ಕಿ.ಮೀ. ದೂರವಿದ್ದು, ಗರಿಷ್ಠ 20 ನಿಮಿಷದ ನಡಿಗೆ ಸಾಕಾಗುತ್ತದೆ. ರಸ್ತೆಯಲ್ಲಿನ ವ್ಯಾಪಾರ ಸಂಚಾರಕ್ಕೂ, ಸ್ವಚ್ಛತೆಗೂ ತೊಂದರೆಯಾಗುತ್ತದೆ. ಆದ್ದರಿಂದ  ಸ್ಥಳಾಂತರಕ್ಕೆ ಮುಂದಾಗುವಂತೆ ಹೇಳಿದರು.

ಎಪಿಎಂಸಿಯಿಂದ ಮಳಿಗೆ ಪಡೆದು ಬಾಡಿಗೆ ಕಟ್ಟುತ್ತಿದ್ದೇವೆ. ಆದರೆ, ಅಲ್ಲಿ ಪೂರ್ಣ ಪ್ರಮಾಣದಲ್ಲಿ  ವ್ಯಾಪಾರ ಆಗುತ್ತಿಲ್ಲ. ಸ್ಥಳಾಂತರಗೊಳ್ಳಬೇಕು ಎಂದು ಎಪಿಎಂಸಿಯಲ್ಲಿ ಮಳಿಗೆ ಪಡೆದಿರುವ ವೆಂಕಟೇಶ್ ಹೇಳಿದಾಗ, ಶೀಘ್ರ ಸ್ಥಳಾಂತರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.

ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಹಳೆಯ ಪರವಾನಗಿ  ಮೊದಲ ಆದ್ಯತೆ ನೀಡಲಾಗುವುದು. ಯಾರಿಗೆ ಪರವಾನಗಿ ಬೇಕೋ ಅವರು ಹೊಸದಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು. ವ್ಯಾಪಾರಸ್ಥರಿಗೆ ಮಳಿಗೆ ಬಾಡಿಗೆಗೆ ಹೊರೆಯಾಗದಂತೆ ಅನುಕೂಲ ಮಾಡಿ ಕೊಡಲಾಗುವುದು  ಎಂದು ಜಿಲ್ಲಾಧಿಕಾರಿ ಹೇಳಿದರು.

ಹೈಸ್ಕೂಲ್ ಮೈದಾನದಲ್ಲಿ ಈಗಿರುವ ತಾತ್ಕಾಲಿಕ ಬಸ್‌ನಿಲ್ದಾಣದ ಕಟ್ಟಡ ತೆರವುಗೊಳಿಸಲಾಗುವುದು. ನಂತರ ವಿಶೇಷ ದಿನಗಳಂದು ಮಾತ್ರ ಮೈದಾನದ ಒಂದು ಭಾಗದಲ್ಲಿ ಹೂ, ಹಣ್ಣು ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು. ಬಡಾವಣೆಗಳಲ್ಲಿ ಉಪಮಾರುಕಟ್ಟೆ ನಿರ್ಮಾಣ, ರೈತರ ಸಂತೆ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಹೊಸ ಜಾಗಕ್ಕೆ  ಹೊಂದಿಕೊಳ್ಳುವುದು ಆರಂಭದಲ್ಲಿ ಕಷ್ಟವಾದರೂ ನಂತರ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಸ್ಥಳಾಂತರಿಸುವುದರಿಂದ ವಾಹನ ನಿಲುಗಡೆ, ಸಂಚಾರಿ ವಾಹನ ದಟ್ಟಣೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಪಾಲಿಕೆ ಮೇಯರ್ ಕೆ. ಚಮನ್‌ಸಾಬ್ ಮಾತನಾಡಿ, ಭವಿಷ್ಯದ ದೃಷ್ಟಿಯಿಂದಲೂ ಸೊಪ್ಪಿನ ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರಿಸುತ್ತಿರುವುದು ಸೂಕ್ತ. ರಿಂಗ್‌ರೋಡ್ ಬಳಿ ಎರಡೂವರೆ ಎಕರೆ ಜಾಗೆ ಇದ್ದು ಮಾರುಕಟ್ಟೆ  ನಿರ್ಮಾಣಕ್ಕೆ ಯೋಜನೆ ರೂಪಿಸಬಹುದು ಎಂದು ಸಲಹೆ ನೀಡಿದರು.

ಉಪ ಮಹಾಪೌರ ಸೋಗಿ ಶಾಂತಕುಮಾರ್, ಸದಸ್ಯರುಗಳಾದ ಪ್ರಸನ್ನಕುಮಾರ್, ಗಡಿಗುಡಾಳ್ ಮಂಜುನಾಥ್, ಆಶಾ ಉಮೇಶ್, ಉದಯಕುಮಾರ್ ಇತರರು ಸಭೆಯಲ್ಲಿದ್ದರು.

error: Content is protected !!