ದಾವಣಗೆರೆ ವಿವಿಯಲ್ಲಿ ಹಿರಿಯ ಕಲಾವಿದ ಆರ್.ಟಿ. ಅರುಣಕುಮಾರ್
ದಾವಣಗೆರೆ, ಡಿ.11- ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ಗುರುತಿಸಿ ಕೊಂಡರೆ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ ಎಂದು ಹಿರಿಯ ಕಲಾವಿದ ಆರ್.ಟಿ. ಅರುಣಕುಮಾರ್ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣ ದಲ್ಲಿ ನಿನ್ನೆ ನಡೆದ ಸ್ನಾತಕೋತ್ತರ ವಿದ್ಯಾರ್ಥಿ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳು ಪಠ್ಯದ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಉನ್ನತ ಸಾಧನೆ ಮಾಡಲು ನೆರವಾಗುತ್ತವೆ. ಅಲ್ಲದೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಕ್ರಿಯಾಶೀಲ ಗುಣವನ್ನು ಬೆಳೆಸುತ್ತದೆ. ಕಲೆಯಲ್ಲಿನ ಆಸಕ್ತಿ ನೆಮ್ಮದಿ, ತೃಪ್ತಿ ನೀಡಿ, ಏಕಾಂಗಿತನವನ್ನು ಹೋಗಲಾಡಿಸುವುದು ಎಂದು ಹೇಳಿದರು.
ಕಲಿಯುವ ಪದವಿಯೊಂದೇ ಜೀವನದ ಗುರಿ ಸಾಧನೆಯಲ್ಲ. ಬದುಕಿನ ಪ್ರತಿಯೊಂದು ಕ್ಷಣವನ್ನು ಸಂಭ್ರಮಿಸುವುದು ಮುಖ್ಯವಾಗುತ್ತದೆ. ಅದಕ್ಕೆ ಕಲೆ ಮತ್ತು ಕಲಾಸಕ್ತಿಗಳು ನೆರವಾಗುತ್ತವೆ ಎಂದರು.
ವಿದ್ಯಾರ್ಥಿಗಳು ಕಲಿಯುವ ಸಂದರ್ಭದ ಲ್ಲಿಯೇ ಯಾವುದಾದರೂ ಪಠ್ಯೇತರ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪಾಲ್ಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ನಾನು ಓದಿದ್ದು ಸಿವಿಲ್ ಎಂಜಿನಿಯರಿಂಗ್ ಪದವಿ. ಆದರೆ ಕಲಾಸಕ್ತಿ ನನ್ನನ್ನು ಸಿನಿಮಾ, ರಂಗ ಭೂಮಿ, ಮಿಮಿಕ್ರಿ ಕಲಾವಿದನನ್ನಾಗಿ ಮಾಡಿದೆ. ನಾನು ದೈಹಿಕವಾಗಿ ಕಾಯಿಲೆಯಿಂದ ಬಳಲುತ್ತಿ ದ್ದಾಗಲೂ ಆತ್ಮವಿಶ್ವಾಸ ತುಂಬಿದ್ದು ಕಲೆ. ಕಲೆಗೆ ಬಡವ-ಶ್ರೀಮಂತ, ಗಂಡು-ಹೆಣ್ಣು, ಪಂಡಿತ-ಪಾಮರ ಎಂಬಿತ್ಯಾದಿ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ತೃಪ್ತಿಯಾಗಿಡುವ ಸಾಮರ್ಥ್ಯವಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ ಮಾತನಾಡಿ, ವಿದ್ಯಾರ್ಥಿ ಗಳಿಗೆ ಓದುವುದು ಎಷ್ಟು ಮುಖ್ಯವೋ ಬದುಕಿನ ಕೌಶಲ್ಯಗಳೂ ಅಷ್ಟೇ ಮುಖ್ಯ. ವ್ಯಕ್ತಿ ತನ್ನನ್ನು ತಾನು ಗುರುತಿಸಿಕೊಳ್ಳಲು ಮತ್ತು ಕ್ರಿಯಾಶೀಲವಾಗಿಡಲು ಪಠ್ಯೇತರ ಚಟುವಟಿಕೆಗಳು ಸಹಾಯಕವಾಗಿವೆ ಎಂದರು.
ವಿದ್ಯಾರ್ಥಿ ಕೂಟದ ಅಧ್ಯಕ್ಷ ಪ್ರೊ.ಎಸ್.ಶಿಶುಪಾಲ ಸ್ವಾಗತಿಸಿದರು. ವಿದ್ಯಾರ್ಥಿನಿ ಸೃಜನಾ ಸ್ವಾಗತ ಗೀತೆ ಹಾಡಿದರು. ಉಪಾಧ್ಯಕ್ಷೆ
ಡಾ.ರೇಣುಕಾ ಕಾಪ್ಲೆ ವಂದಿಸಿದರು. ಉಪಾಧ್ಯಕ್ಷ ಡಾ.ಕೆ.ತಿಪ್ಪೇಶ್ ಕಾರ್ಯಕ್ರಮ ನಿರೂಪಿಸಿದರು.