ದಾವಣಗೆರೆ, ಡಿ. 11 – ಪಿಎಂ ಫೋಷಣ್ ಅಡಿಯಲ್ಲಿ ಅಡುಗೆ ಸಹಾಯಕರಿಗೆ ಗೌರವ ಧನವನ್ನು ನೀಡುತ್ತಿದ್ದು ಇದರಲ್ಲಿ ಕೇಂದ್ರವು 60% ಹಾಗೂ ರಾಜ್ಯವು 40% ಗೌರವ ಧನ ಭರಿಸಬೇಕಾಗಿರುತ್ತದೆ. ಆರಂಭದಲ್ಲಿ ತಿಂಗಳಿಗೆ 1000 ರೂ. ಗೌರವ ಧನ ನೀಡುತ್ತಿದ್ದು. ಇದರಲ್ಲಿ ಕೇಂದ್ರವು ಸರ್ಕಾರದ 600 ರೂ. ಹಾಗೂ ರಾಜ್ಯ ಸರ್ಕಾರ 400 ರೂ. ಸೇರಿರುತ್ತದೆ.
ರಾಜ್ಯ ಸರ್ಕಾರವು ಹಂತ ಹಂತವಾಗಿ ಗೌರವ ಧನ ಹೆಚ್ಚಿಸಿದ್ದು ರಾಜ್ಯ ಸರ್ಕಾರದ ಪಾಲು ಪ್ರಸ್ತುತ 3000 ರೂ. ತಲುಪಿರುತ್ತದೆ. ಆದರೆ ಕೇಂದ್ರ ಸರ್ಕಾರವು ಯೋಜನೆ ಪ್ರಾರಂಭವಾದಗಿನಿಂದಲೂ ಅದೇ 600 ರೂ. ಕೊಡುತ್ತಿದ್ದು, ಯಾವುದೇ ಗೌರವ ಧನ ಹೆಚ್ಚಳ ಮಾಡಿರುವುದಿಲ್ಲ. ಈ ಬಗ್ಗೆ ಹಣದುಬ್ಬರ, ಆರ್ಥಿಕ ಪರಿಸ್ಥಿತಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉದಾಹರಣೆಯೊಂದಿಗೆ ಪ್ರಸ್ತಾಪಿಸಿದ ಸಂಸದರು ಕೇಂದ್ರದ ಶಿಕ್ಷಣ ಇಲಾಖೆಗೆ ಬಿಸಿಯೂಟ ತಯಾರಕರ ಕೇಂದ್ರದ ಪಾಲಿನ ಗೌರವ ಧನ ಹೆಚ್ಚಿಸಿ ನೆಮ್ಮದಿಯ ಜೀವನ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು.