ಅಕ್ಟೋಬರ್ ಮಳೆಗೆ 1095 ಹೆಕ್ಟೇರ್ ಬೆಳೆ ನಷ್ಟ, ಸರ್ಕಾರಕ್ಕೆ ಜಿಲ್ಲಾಡಳಿತದ ವರದಿ
ಜಿಲ್ಲೆಯಲ್ಲಿ ಭಾನುವಾರ ರಾತ್ರಿ 9.2 ಮಿ.ಮೀ. ಮಳೆ
ಭಾನುವಾರ ರಾತ್ರಿ ಜಿಲ್ಲೆಯಲ್ಲಿ 9.2 ಮಿ.ಮೀ. ಮಳೆಯಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 13.4, ದಾವಣಗೆರೆ 13.8, ಹರಿಹರ 4.9, ಹೊನ್ನಾಳಿ 1.7, ಜಗಳೂರು 8.6 ಹಾಗೂ ನ್ಯಾಮತಿಯಲ್ಲಿ 1.6ಮಿ.ಮೀ. ಮಳೆಯಾಗಿದೆ.
ಕಳೆದ ಅಕ್ಟೋಬರ್ 1ರಿಂದ ಡಿಸೆಂಬರ್ 9ರವರೆಗೆ 300 ಮಿ.ಮೀ. ಮಳೆಯಾಗಿದೆ.
ದಾವಣಗೆರೆ, ಡಿ. 9 – ಇನ್ನೇನು ಭತ್ತ ಕೊಯ್ಲಿಗೆ ಬಂದಿದೆ. ಕೊಯ್ಲು ಯಂತ್ರಕ್ಕೋ ಅಥವಾ ಕೂಲಿ ಕಾರ್ಮಿಕರಿಗೋ ಹೇಳಿಯಾಗಿದೆ. ಇನ್ನು ನಿಶ್ಚಿಂತೆ ಎನ್ನುವಾಗಲೇ ಅಕಾಲಿಕ ಮಳೆ ರೈತರ ಹೃದಯ ಬಡಿತ ಹೆಚ್ಚಿಸುತ್ತಿದೆ. ಆಕಾಶ ಕಪ್ಪಾಗುತ್ತಲೇ ರೈತನ ಮೊಗದಲ್ಲೂ ಆತಂಕದ ಕಾರ್ಮೋಡ ಆವರಿಸುತ್ತದೆ.
ಕಳೆದ ತಿಂಗಳಷ್ಟೇ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದು ಮೆಕ್ಕೆಜೋಳ, ಭತ್ತಕ್ಕೆ ಹಾನಿಯುಂಟಾಗಿತ್ತು. ನಾಲ್ಕೈದು ದಿನಗಳ ಕೆಳಗೆ ಫೆಂಗಾಲ್ ಚಂಡ ಮಾರುತದಿಂದ ಒಂದಿಷ್ಟು ಮಳೆ ಸುರಿಯಿತು. ಈಗ ಮತ್ತೆ ಚಂಡಮಾರುತ ಮಳೆ ಹೊತ್ತು ತಂದಿದೆ. ಕೈಗೆ ಬಂದ ತುತ್ತು ಇನ್ನೇನು ಬಾಯಿಗೆ ಬರಬೇಕು ಎನ್ನುವಷ್ಟರಲ್ಲಿ ಮಳೆ ಆಟ ಮತ್ತೆ ಶುರುವಾಗಿದೆ.
ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿದೆ. ಕೊಳೆದೊಂದು ತಿಂಗಳಿನಿಂದಲೂ ಭತ್ತದ ಕೊಯ್ಲು ನಡೆಯುತ್ತಿದೆ. ಹಲವರು ಮಾರಾಟವನ್ನೂ ಮಾಡಿಯಾಗಿದೆ. ಆದರೆ ಕೊಯ್ಲಾಗದೆ ಉಳಿದಿರುವ ಭತ್ತ ಮಳೆಗೆ ಆಹುತಿಯಾಗುವ ಆತಂಕವಿದೆ.
ಕೊಯ್ಲು ವಿಳಂಬವಾದರೆ ಕಾಳು ಉದುರುವ ಸಾಧ್ಯತೆ ಹೆಚ್ಚು. ಕಟಾವು ಮುಂದೂಡಿದರೆ ಜೋರು ಮಳೆಯ ಭಯ. ಸದ್ಯದ ಪರಿಸ್ಥಿತಿಯಲ್ಲಿ ಅನ್ನದಾತ ಸಂದಿಗ್ಧ ಸ್ಥಿತಿಯಲ್ಲಿದ್ದಾನೆ.
ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಬಹುತೇಕ ಕಟಾವು ಮುಕ್ತಾಯವಾಗಿದೆ. ಆದರೆ ಮರೆಯಾದ ಸೂರ್ಯನಡಿ ಕಾಳು ಒಣಗಿಸುವುದು ಕಷ್ಟವಾಗಿದೆ. ಇದರಿಂದ ತೇವಾಂಶದ ಕಡಿಮೆಯಾದ ನೆಪದಲ್ಲಿ ಬೆಲೆಯೂ ಕಡಿಮೆಯಾಗುವ ಆತಂಕ ರೈತರಲ್ಲಿದೆ.
ಕಳೆದ ತಿಂಗಳ ಮಳೆಗೆ 1095 ಹೆಕ್ಕೇರ್ ಬೆಳೆ ಹಾನಿ: ಕಳೆದ ಅಕ್ಟೋಬರ್ ಮಾಸದಲ್ಲಿ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 1094.36 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ.
ಈ ಪೈಕಿ 1013 ಹೆಕ್ಟೇರ್ ಕೃಷಿ ಬೆಳೆಯಾದರೆ, 8061 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಬರದ ನಾಡು ಜಗಳೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಅಂದರೆ 617.16 ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ಹಾನಿಯಾಗಿದೆ.
ಉಳಿದಂತೆ ಹೊನ್ನಾಳಿ ತಾಲ್ಲೂಕಿನನಲ್ಲಿ 319.2 ಹೆಕ್ಟೇರ್, ದಾವಣಗೆರೆ ತಾಲೂಕಿನಲ್ಲಿ 78.46 ಹೆಕ್ಟೇರ್, ಹರಿಹರ ತಾಲೂಕಿನಲ್ಲಿ 57.24 ಹೆಕ್ಟೇರ್, ಚನ್ನಗಿರಿ ತಾಲೂಕಿನಲ್ಲಿ 20.55 ಹೆಕ್ಟೇರ್, ನ್ಯಾಮತಿ ತಾಲೂಕಿನಲ್ಲಿ 1.75 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. 849 ಹೆ. ಮೆಕ್ಕೆಜೋಳ ಮಳೆಗೆ ಆಹುತಿಯಾಗಿದೆ. ಉಳಿದಂತೆ 65.35 ಹೆ. ಭತ್ತ, 5 ಹೆ. ಸೂರ್ಯಕಾಂತಿ, 10 ಹೆ.ಕಡಲೆ, 44.40 ಹೆ.ರಾಗಿ, 20 ಹೆ.ಬೆಂಗಾಲ್‌ಕಡ್ಲೆ, 20 ಹೆ. ಶೇಂಗಾ, 5.10 ಹೆ.ಬಾಳೆ, 0.54 ಹೆ.ತೆಂಗು, 1.20 ಹೆ. ಅಡಕೆ, 2.35 ಹೆ.ಪಪ್ಪಾಯ, 1.10 ಹೆ. ಸವತೆಕಾಯಿ, 1.10 ಹೆ.ಮೆಣಸು, 61.56 ಹೆ.ಈರುಳ್ಳಿ, 3.86 ಹೆ. ಟೊಮೆಟೋ, 0.40 ಹೆ. ಬದನೆಕಾಯಿ, 0.45 ಹೆ. ಹೂವು ಹಾಗೂ 2.75 ಹೆ. ಇತರೆ ಬೆಳೆ ಮಳೆಯಿಂದ ಹಾನಿಗೊಳಗಿದೆ.
ಹೊನ್ನಾಳಿ ತಾಲೂಕಿನಲ್ಲಿ 318 ಹೆಕ್ಕೇರ್, ಹರಿಹರ ತಾಲೂಕಿನಲ್ಲಿ 38 ಹೆಕ್ಕೇರ್, ದಾವಣಗೆರೆ ತಾಲೂಕಿನಲ್ಲಿ 20 ಹೆಕ್ಕೇರ್ ಹಾಗೂ ಚನ್ನಗಿರಿ ತಾಲೂಕಿನಲ್ಲಿ 13 ಹೆಕ್ಕೇರ್ ಪ್ರದೇಶದ ಮೆಕ್ಕೆಜೋಳ ಹಾನಿಗೊಳಗಾಗಿದೆ.
ದಾವಣಗೆರೆ ತಾಲ್ಲೂನಲ್ಲಿ ಭತ್ತ ಬೆಳೆ ಅತಿ ಹೆಚ್ಚು ಅಂದರೆ 41.80ಹೆ. ಹಾನಿಗೊಳಗಾಗಿದೆ. ಹರಿಹರ ತಾಲೂಕಿನಲ್ಲಿ 15 ಹೆ., ಹೊನ್ನಾಳಿ ತಾಲ್ಲೂಕಿನಲ್ಲಿ 1ಹೆ., ಚನ್ನಗಿರಿ ತಾಲೂಕಿನಲ್ಲಿ 7.55 ಹೆ.ಭತ್ತ ಮಳೆಯಿಂದ ಹಾಳಾಗಿದೆ.