ದಾವಣಗೆರೆ, ಡಿ.8- ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ಒದಗಿಸುವ ಸಂದರ್ಭದಲ್ಲಿ ಹಣ ವಸೂಲಿ ಮಾಡುವುದು ಮತ್ತು ಸೌಲಭ್ಯ ತಲುಪಿಸಲು ವಿಳಂಬ ಮಾಡುವುದು ನನ್ನ ಗಮನಕ್ಕೆ ಬಂದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಂಗವಿಕಲರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ 23 ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು.
ವಿವಿಧ ಯೋಜನೆಗಳ ಮೂಲಕ ಸರ್ಕಾರ ಕೋಟ್ಯಂತರ ರೂ.ಗಳನ್ನು ನಾಗರಿಕರಿಗಾಗಿ ವ್ಯಯ ಮಾಡುತ್ತದೆ. ಈ ನಿಟ್ಟಿನಲ್ಲಿ ವಿಕಲಚೇತನರಿಗೆ ಪಿಂಚಣಿ, ವೃದ್ಧರಿಗೆ ವೃದ್ಧಾಪ್ಯ ವೇತನ, ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಹಾಗೂ ಸಾಲ ಸೌಲಭ್ಯ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡುವಂತೆ ಸೂಚಿಸಿದರು.
ಸರ್ಕಾರಿ ಸೌಲಭ್ಯ ಕಲ್ಪಿಸಲು ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ರೀತಿ ಆಗದಂತೆ ಅಧಿಕಾರಿಗಳು ಸೌಲಭ್ಯ ಕಲ್ಪಿಸಬೇಕೆಂದು ತಾಕೀತು ಮಾಡಿದರು.
ಈ ವೇಳೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಕೆ.ಪ್ರಕಾಶ್, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ. ತಿಪ್ಪಣ್ಣ ಕತ್ತಲಗೆರೆ, ಆನಗೋಡು ಕರಿಬಸಪ್ಪ, ದಾಗಿನಕಟ್ಟೆ ಚಂದ್ರಣ್ಣ, ಮರಿಯಮ್ಮನಹಳ್ಳಿ ಅಂಜಿನಪ್ಪ, ಕಾಂಗ್ರೆಸ್ ಮುಖಂಡರು ಹಾಗೂ ಫಲಾನುಭವಿಗಳಿದ್ದರು.