ನ್ಯಾ. ಎಚ್.ಕೆ. ರೇಷ್ಮಾ
ಜಗಳೂರು, ಡಿ. 5- ವಿಜ್ಞಾನ ಹಾಗೂ ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದೆ. ’ಕೃತಕ ಬುದ್ದಿಮತ್ತೆ’ ಯನ್ನು ನ್ಯಾಯಾಂಗ ಕ್ಷೇತ್ರದಲ್ಲಿ ಸೃಜನಾತ್ಮಕವಾಗಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತಿಸಬೇಕಿದೆ ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಚ್.ಕೆ. ರೇಷ್ಮಾ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ವಕೀಲರು ತಮ್ಮ ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚು ಓದಿರುವ ನಾವುಗಳೇ ಬುದ್ದಿವಂತರು ಎನ್ನುವ ಅಹಂ ಯಾರಿಗೂ ಬೇಡ. ನಮಗಿಂತಲೂ ಹೆಚ್ಚು ತಿಳಿದವರು, ಜ್ಞಾನಿಗಳೂ ಇದ್ದಾರೆ. ಯಾವುದೇ ವ್ಯಕ್ತಿಯ ನಡತೆ ಮತ್ತು ಸಂಸ್ಕಾರ ಆ ವ್ಯಕ್ತಿಯ ಯಶಸ್ಸನ್ನು ನಿರ್ಧರಿಸುತ್ತದೆ. ಹಿರಿಯ ವಕೀಲರು ಹಾಗೂ ಕಿರಿಯ ವಕೀಲರ ನಡುವೆ ಪರಸ್ಪರ ಗೌರವ ಹಾಗೂ ಮಾರ್ಗದರ್ಶನ ಮುಖ್ಯವಾಗಬೇಕು ಎಂದು ಅವರು ಹೇಳಿದರು.
ಸಿವಿಲ್ ಮತ್ತು ಜೆ.ಎಂ.ಎಫ್. ನ್ಯಾಯಾಲಯದ ನ್ಯಾಯಾಧೀಶ ಆರ್. ಚೇತನ್ ಮಾತನಾಡಿ, ವಕೀಲ ವೃತ್ತಿ ಜಗತ್ತಿನಲ್ಲೇ ನೋಬಲ್ ವೃತ್ತಿ ಎಂದು ಮನ್ನಣೆ ಗಳಿಸಿದೆ. ಯುವ ವಕೀಲರು ತಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯಬೇಕಿದ್ದಲ್ಲಿ ಕಠಿಣ ಪರಿಶ್ರಮ ಮತ್ತು ಆಳವಾದ ಅಧ್ಯಯನ ಮುಖ್ಯವಾಗುತ್ತದೆ. ವಕೀಲ ವೃತ್ತಿಯಲ್ಲಿ ಆರಂಭದಲ್ಲಿ ಪರಿಶ್ರಮ ಪಟ್ಟಲ್ಲಿ ಎರಡನೇ ಹಂತದಲ್ಲಿ ಹಣ ಮತ್ತು ಗೌರವ ತಾನಾಗೇ ಹುಡುಕಿಕೊಂಡು ಬರುತ್ತದೆ. ವೃತ್ತಿಯಲ್ಲಿ ಕೇವಲ ಹಣ ಮುಖ್ಯವಲ್ಲ. ಪ್ರತಿಯೊಬ್ಬರೂ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಿರಿಯ ವಕೀಲರ ಸಮುದಾಯದಲ್ಲಿ ಇಂದಿನ ದಿನಗಳಲ್ಲಿ ಓದಿನ ಹವ್ಯಾಸ ಕಡಿಮೆಯಾಗುತ್ತಿರು ವುದು ವಿಪರ್ಯಾಸ. ಯುವ ವಕೀಲರು ನ್ಯಾಯಾಧೀಶರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದನ್ನು ಕರಗತ ಮಾಡಿಕೊಳ್ಳಬೇಕು. ಒಂದು ವೇಳೆ ಪರೀಕ್ಷೆ ಯಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗದಿ ದ್ದರೂ ಸಹ ಮುಂದಿನ ದಿನಗಳಲ್ಲಿ ವೃತ್ತಿಗೆ ಸಹಾಯಕವಾಗುತ್ತದೆ. ಓದು ಎಂದಿಗೂ ವ್ಯರ್ಥವಲ್ಲ ಎಂದರು.
25 ವರ್ಷಕ್ಕೂ ಹೆಚ್ಚು ಅವಧಿಯಿಂದ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ 22 ವಕೀಲರಿಗೆ ಇಂದು ಸಂಘದಿಂದ ಗೌರವಿಸ ಲಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಎ.ಕೆ. ಪರಶುರಾಮಪ್ಪ, ಗೌರವಾಧ್ಯಕ್ಷ ಜಿ.ಎಸ್. ಪ್ರಕಾಶ್, ಸಹಾಯಕ ಸರ್ಕಾರಿ ವಕೀಲ ಮಂಜುನಾಥ್, ಹಿರಿಯ ವಕೀಲರಾದ ಕೆ.ಎನ್. ಪರಮೇಶ್ವರಪ್ಪ, ಟಿ.ಸ್ವಾಮಿ, ಕೆ.ಎಂ. ಬಸವರಾಜಪ್ಪ, ವೈ.ಹನುಮಂತಪ್ಪ, ಡಿ.ಪ್ರಕಾಶ್, ಡಿ. ಶ್ರೀನಿವಾಸ್, ಎಚ್. ಬಸವರಾಜಪ್ಪ, ಇ.ಓಂಕಾರಪ್ಪ, ಎಸ್.ಹಾಲಪ್ಪ, ಆರ್. ಓಬಳೇಶ್, ಎನ್.ಜಿ. ಮಾದಪ್ಪ, ಎಸ್.ಐ. ಕುಂಬಾರ್, ಶರಣಪ್ಪ, ಕೆ.ವಿ. ರುದ್ರೇಶ್, ಪಿ.ವಿ. ಕರಿಬಸವ ಸ್ವಾಮಿ ಇದ್ದರು.