ನಾಟಕ ಕಂಪನಿಗಳ ಮಾಲೀಕರ ಸಭೆ
ದಾವಣಗೆರೆ, ಡಿ.5- ವೃತ್ತಿ ರಂಗಭೂಮಿ ರಂಗಾಯಣವನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ವಿವರವಾದ ಚರ್ಚೆ ನಡೆಯುತ್ತಿದೆ. ರಂಗಮಂದಿರ ನಿರ್ಮಾಣದ ಬಳಿಕ ಕಲಾವಿದರಿಗೆ ತರಬೇತಿ ನೀಡಿ ನಾಟಕ ಕಂಪನಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ನಾಟಕ ಕಂಪನಿಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಇದಕ್ಕೂ ಮುನ್ನ, ಅಳಿವಿನ ಅಂಚಿಗೆ ಸಾಗಿರುವ ವೃತ್ತಿ ರಂಗಭೂಮಿಯನ್ನು ಉಳಿಸಲು ರಂಗಾಯಣದ ವತಿಯಿಂದ ಕಲಾವಿದರಿಗೆ ತರಬೇತಿ ನೀಡಿ ನಾಟಕ ಕಂಪನಿಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯೊಂದು ರೂಪುಗೊಳ್ಳಬೇಕು ಎಂದು ನಾಟಕ ಕಂಪನಿಗಳ ಮಾಲೀಕರು ಕೋರಿಕೊಂಡರು.
ವೃತ್ತಿ ರಂಗಭೂಮಿ ಕಲಾವಿದರ ಕೊರತೆ ಎದುರಿಸುತ್ತಿದೆ. ವೃತ್ತಿ ರಂಗಭೂಮಿಗೆ ಪ್ರತ್ಯೇಕವಾಗಿ ಆರಂಭವಾಗಿರುವ ರಂಗಾಯಣ ನೆರವಿಗೆ ಧಾವಿಸುವ ನಿರೀಕ್ಷೆಯಲ್ಲಿದ್ದೇವೆ. ಯುವಸಮೂಹಕ್ಕೆ ನಾಟಕ ತರಬೇತಿ ನೀಡಿ ಸಜ್ಜುಗೊಳಿಸಬೇಕಿದೆ. ನಾಟಕ ಕಂಪನಿಗಳ ಪೋಷಣೆಯ ಜವಾಬ್ದಾರಿಯನ್ನು ರಂಗಾಯಣ ಹೊರಬೇಕಿದೆ ಎಂದು ಮನವಿ ಮಾಡಿದರು.
ವೃತ್ತಿ ರಂಗಭೂಮಿ ರಂಗಾಯಣ ಕಲಾವಿದರಿಗೆ ಕನಿಷ್ಠ ಮೂರು ವರ್ಷ ತರಬೇತಿ ನೀಡಬೇಕು. ಮೊದಲ ವರ್ಷದ ತರಬೇತಿ ಮುಗಿದ ಬಳಿಕ ನಾಟಕ ಕಂಪನಿಗಳಿಗೆ ಕಳುಹಿಸಬೇಕು. ರಂಗ ಪ್ರಯೋಗಗಳ ಮೂಲಕ ಅವರು ಇನ್ನಷ್ಟು ಪರಿಪಕ್ವತೆ ಸಾಧಿಸುವ ಅವಕಾಶ ಕಲ್ಪಿಸಬೇಕು’ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ ಸಲಹೆ ನೀಡಿದರು.
ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿ ಲಭ್ಯ ವಾಗಿರುವ ಭೂಮಿಯಲ್ಲಿ ರೆಪರ್ಟರಿ ಪ್ರಾರಂಭಿಸ ಬೇಕು. ಕಂಪನಿ ನಾಟಕಗಳ ಪರಂಪರೆ ಬಿಂಬಿಸುವ ವಸ್ತುಸಂಗ್ರಹಾಲಯ ಕೂಡ ನಿರ್ಮಿಸಬೇಕು ಎಂದು ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್ ಮಾಸ್ತರ್ ಕೋರಿಕೊಂಡರು.
ವೃತ್ತಿ ರಂಗಭೂಮಿ ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ, ಹರಿಹರ ತಾಲ್ಲೂಕಿನ ಕೊಂಡಜ್ಜಿ ಬಳಿ ರಂಗಾಯಣಕ್ಕೆ 10 ಎಕರೆ ಭೂಮಿ ಮೀಸಲಿದೆ. ವೃತ್ತಿ ರಂಗಭೂಮಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ ನಿರ್ಮಿಸಲಾಗುವುದು ಎಂದರು.
ಸಕ್ಕರಿ ಬಾಳಾಚಾರ್ಯ ಅವರ ಶ್ರೀ ವೀರ ನಾರಾಯಣ ಪ್ರಸಾತ ಕೃತಪುರ ಕರ್ನಾಟಕ ನಾಟಕ ಮಂಡಳಿ ಆರಂಭವಾದ ದಿನವಾದ ನ.14ನ್ನು ವೃತ್ತಿ ರಂಗಭೂಮಿ ದಿನವನ್ನಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಸಭೆ ನಿರ್ಣಯ ಕೈಗೊಂಡಿತು.
ನಾಟಕ ಕಂಪನಿಗಳ ಮಾಲೀಕರಾದ ಪ್ರೇಮಾ ಗುಳೇದಗುಡ್ಡ, ಜ್ಯೋತಿ, ಫಯಾಜ್, ಮಹಾದೇವ್ ಸೇರಿ ಅನೇಕರು ಭಾಗವಹಿಸಿದ್ದರು.