ಅನುದಾನಿತ ಶಿಕ್ಷಕರ ಹಿತಕ್ಕಾಗಿ ಅಧಿವೇಶನದಲ್ಲಿ ದನಿ ಎತ್ತುವೆ

ಅನುದಾನಿತ ಶಿಕ್ಷಕರ ಹಿತಕ್ಕಾಗಿ ಅಧಿವೇಶನದಲ್ಲಿ ದನಿ ಎತ್ತುವೆ

`ವಿಭಾಗೀಯ ಮಟ್ಟದ ಸಮಾವೇಶದಲ್ಲಿ’ ಚನ್ನಗಿರಿ ಶಾಸಕ ಬಸವರಾಜ್‌ ವಿ. ಶಿವಗಂಗಾ ಭರವಸೆ

ದಾವಣಗೆರೆ, ಡಿ.4- ಅನುದಾನಿತ ಪಿಯು ಕಾಲೇಜುಗಳ ಉಪನ್ಯಾಸಕರಿಗೆ ಕಗ್ಗಂಟಾಗಿರುವ ಕಾರ್ಯ ಭಾರ ಸಮಸ್ಯೆ ಹಾಗೂ ಸೇವಾ ವಿಮುಕ್ತಿ ಆದೇಶದಿಂದಾಗು ತ್ತಿರುವ ತೊಂದರೆಯನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಅನುದಾನಿತ ಶಿಕ್ಷಕರ ಹಿತ ಕಾಪಾಡಲಿದ್ದೇನೆ ಎಂದು ಶಾಸಕ ಬಸವರಾಜ್‌ ವಿ. ಶಿವಗಂಗಾ ಭರವಸೆ ನೀಡಿದರು.

ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದಿಂದ ನಗರದ ಅಥಣಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ವಿಭಾಗೀಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಲವು ದಿನಗಳ ಹಿಂದೆ ಅನುದಾನಿತ ನೌಕರರ ತಂಡ ನನ್ನ ಬಳಿ ಬಂದು ತಮ್ಮ ಅಳಲು ತೊಡಿಕೊಂಡಾಗ, ನಾನು ತಕ್ಷಣಕ್ಕೆ ಸಚಿವ ಮಧು ಬಂಗಾರಪ್ಪ ಅವರಿಗೆ ಕರೆ ಮಾಡಿ, ಉಪನ್ಯಾಸಕರಿಗಾಗುವ ತೊಂದರೆ ಬಗ್ಗೆ ತಿಳಿಸಿದ ಕೂಡಲೇ ಅವರು ಮೌಖಿಕವಾಗಿ ಆದೇಶ ಹಿಂಪಡೆದಿದ್ದಾರೆ ಎಂದು ಹೇಳಿದರು.

ಕುಟುಂಬಗಳಿಗೆ ಆಸರೆಯಾಗಿರುವ ಶಿಕ್ಷಕರ ಬದುಕಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದರು.

ಉಪನ್ಯಾಸಕರ ವೇತನದಲ್ಲಿ ವಿಳಂಬ ಆಗುತ್ತಿರುವುದನ್ನು ಸರಿಪಡಿಸುವಂತೆ ತಿಳಿಸಿದ್ದೇನೆ. ಈ ನಿಟ್ಟಿನಲ್ಲಿ ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ವಿದ್ಯಾರ್ಥಿಯಾಗಿ ಅವರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಶಾಸಕರು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಟಿ. ಶ್ರೀನಿವಾಸ್‌ ಮಾತನಾಡಿ, ಕಾರ್ಯಭಾರ ಹಾಗೂ ಸೇವಾ ವಿಮುಕ್ತಿ ಸುತ್ತೋಲೆ ಬಗ್ಗೆ ಆತಂಕ ಪಡಬೇಡಿ. ಈ ಆದೇಶದಿಂದ ಆಗುವ ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು. ಮೇಲ್ಮಟ್ಟದ ಅಧಿಕಾರಿಗಳು ದಿಢೀರನೆ ಆಘಾತಕಾರಿ ಸುತ್ತೋಲೆ ಹೊರಡಿಸುವುದು ಸೂಕ್ತವಲ್ಲ. 

ಆದೇಶದಲ್ಲಿನ ನಿರ್ಧಾರಗಳು ಮಾನವೀಯತೆ ಯಿಂದ ಕೂಡಿರಬೇಕು. ಏಕಾ-ಏಕಿ ಆದೇಶದಲ್ಲಿ ವಿಮುಕ್ತಿಗೊಳಿಸುವಂತಹ ಅಂಶಗಳನ್ನು ಉಲ್ಲೇಖಿಸುವುದು ಸಮಾಜಕ್ಕೆ ಉತ್ತಮ ಸಂದೇಶವಲ್ಲ ಎಂದರು.

ಯಾವುದೇ ಆದೇಶ ಹೊರಡಿಸುವಾಗ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸದಿದ್ದರೆ ಅದು ಕಾರ್ಯಸಿದ್ದಿ ಆಗುವುದಿಲ್ಲ. ಇಂತಹ ಆಘಾತಕಾರಿ ಸುತ್ತೋಲೆ ಹೊರಡಿಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಎಲ್ಲಿ ವ್ಯತ್ಯಾಸ ಹಾಗೂ ತಾರತಮ್ಯಗಳು ಕಂಡು ಬರುತ್ತವೋ ಅಲ್ಲಿ ಕ್ರಾಂತಿ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸುಗಮವಾದ ವಾತಾವರಣ ಸೃಷ್ಟಿಸುವುದು ಉತ್ತಮ ಎಂದರು.

ಇದೇ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಎನ್‌. ಹರೀಶ್‌ ಹಕ್ಕೊತ್ತಾಯಗಳನ್ನು ಮಂಡಿಸುವ ಜತೆಗೆ ಶಾಸಕರಿಗೆ ಮನವಿ ಸಲ್ಲಿಸಿದರು. 

ಸಂಘಟನೆಯ ಕಾರ್ಯಾಧ್ಯಕ್ಷ ಎಂ.ಎಸ್‌. ಆನಂದಕರ್‌, ಪ್ರಧಾನ ಕಾರ್ಯದರ್ಶಿ ಎಂ. ಆನಂದ, ಕೋಶಾಧ್ಯಕ್ಷ ಬಿ.ಎಸ್‌. ಉಮೇಶ್‌, ಪದವಿ ಪೂರ್ವ ಡಿಡಿಪಿ ಎಸ್‌.ಜಿ. ಕರಿಸಿದ್ದಪ್ಪ, ಎಸ್‌.ಆರ್‌. ತಿಪ್ಪೇಸ್ವಾಮಿ, ಬಿ.ಎಲ್‌. ಯಶವಂತ ಕುಮಾರ್‌, ಪಿ.ಎಂ. ಪ್ರದೀಪ್‌ ಕುಮಾರ್, ಎಸ್‌.ಜಿ. ನಾಗರಾಜ್‌, ಎಂ.ಸಿ.ವೈ ಮಂಜುನಾಥ್‌, ಹೆಚ್‌. ಚಂದ್ರಪ್ಪ, ಜೆ. ಶಿವಪ್ಪ, ಲೋಹಿತ್‌ ಇತರರು ಇದ್ದರು.

error: Content is protected !!