ಪಂಚಮಸಾಲಿ : ಮೀಸಲಾತಿ ಹೋರಾಟದಲ್ಲಿ ದೃತಿಗೆಡದೆ ಪಾಲ್ಗೊಳ್ಳಿ

ಪಂಚಮಸಾಲಿ : ಮೀಸಲಾತಿ ಹೋರಾಟದಲ್ಲಿ ದೃತಿಗೆಡದೆ ಪಾಲ್ಗೊಳ್ಳಿ

ಪಂಚಮಸಾಲಿ ಮೀಸಲಾತಿಗಾಗಿ ಡಿ.10ರಂದು ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್

ದಾವಣಗೆರೆ, ನ.4- ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ವೀರಶೈವ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರಗಳಿಂದ ನಮಗೆ ನ್ಯಾಯ ದೊರಕಿಲ್ಲ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಮ್ಮ ನಿವಾಸದಲ್ಲಿ ಇಂದು ನಡೆದ ಇದೇ ದಿನಾಂಕ 10 ರಂದು ಬೆಳಗಾವಿ ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರರು 150 ವರ್ಷಗಳ ಸುದೀರ್ಘ ಹೋರಾಟ ಮಾಡಿದ್ದರಿಂದಲೇ ನಮಗೆ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು. ಅದರಂತೆ ನಾವು ಕೂಡ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿಸಲು ನಿರಂತರ ಹೋರಾಟ ಮಾಡಿದರೆ ಮಾತ್ರ ಸಾಧ್ಯ. ಸಮಾಜದ ಮುಖಂಡರು ದೃತಿಗೆಡದೇ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದರು.

1994 ರಿಂದಲೇ ಸಮಾಜದ ಮುಖಂಡರು ಹೋರಾಟ ಆರಂಭಿಸಿದ್ದಾರೆ. ಆದರೆ ಇದುವರೆಗೂ ನ್ಯಾಯ ಸಿಗದಿರುವುದು ಬೇಸರದ ಸಂಗತಿಯಾಗಿದೆ. ಸಮಾಜದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪೀಠ ಬಿಟ್ಟು ಇಡೀ ರಾಜ್ಯ ಸುತ್ತುವ ಜೊತೆಗೆ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶ್ರೀಗಳ ಹೋರಾಟಕ್ಕೆ ಬೆಂಬಲವಾಗಿ ನಾವೆಲ್ಲರೂ ನಿಂತಾಗ ಮಾತ್ರ ಮತ್ತಷ್ಟು ಬಲ ಬರಲಿದೆ. ಡಿ. 10 ರಂದು ಬೆಳಗಾವಿಯಲ್ಲಿ ನಡೆಯುವ ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಅನೇಕ ಪೀಠಗಳಿದ್ದು, ನೀವು ಯಾವ ಪೀಠಕ್ಕಾದರೂ ನಡೆದುಕೊಳ್ಳಿ. ಸಮಾಜದ ಸಂಘಟನೆ ಅಂತಾ ಬಂದಾಗ ಒಟ್ಟಾಗಿ ಶ್ರೀಗಳ ಹೋರಾಟಕ್ಕೆ ಕೈಜೋಡಿಸಿದರೆ ಸಮಾಜ ಸಂಘಟನೆಗೆ ಶಕ್ತಿ ಬರುತ್ತದೆ. ಸರ್ಕಾರದ ಗಮನಸೆಳೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ 2ಎ ಮೀಸಲಾತಿ ಹೋರಾಟ ಕೇವಲ ಹೋರಾಟವಾಗಿ ಉಳಿಯುತ್ತದೆ. ಈಗಲಾದರೂ ಜಾಗೃತರಾಗಿ ಹೋರಾಟಗಳಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ವಿವಿಧ ಹಂತದ ಹೋರಾಟಗಳನ್ನು ನಡೆಸುತ್ತಾ ಬರಲಾಗಿದೆ. ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಹೋರಾಟಕ್ಕೆ ಹೊಸ ತಿರುವು ನೀಡಿದ್ದಾರೆ. 

ಸಮಾಜದ ಹಿತಕ್ಕಾಗಿ ಯಾವೊಬ್ಬ ಸ್ವಾಮೀಜಿ ಕೂಡ ಈ ರೀತಿ ದಿಟ್ಟ ನಿಲುವನ್ನು ತೆಗೆದುಕೊಂಡಿಲ್ಲ. ಇಂತಹ ಸ್ವಾಮೀಜಿ ನಮ್ಮ ಸಮಾಜಕ್ಕೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ಸಮಾಜದ ಯುವ ಮುಖಂಡ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಸ್ವಾಮೀಜಿಯವರು ಏಳನೇ ಹಂತದ ಹೋರಾಟ ಮಾಡಿದರೂ ಸರ್ಕಾರಗಳು 2 ಎ ಮೀಸಲಾತಿ ನೀಡಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಇದೀಗ ಡಿ. 10 ರಂದು ಬೆಳಗಾವಿ ಸುವರ್ಣಸೌಧ ಟ್ರ್ಯಾಕ್ಟರ್ ಮುತ್ತಿಗೆ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ನಮ್ಮವರೇ ನಮ್ಮ ಹೋರಾಟವನ್ನು ಹತ್ತಿಕ್ಕುವಲ್ಲಿ ಮುಂದಾಗಿದ್ದಾರೆ. ಇಂತವರ ಬಗ್ಗೆ ಎಚ್ಚರ ವಹಿಸಬೇಕು. ಗ್ರಾಮೀಣ ಭಾಗದಿಂದ ಟ್ರ್ಯಾಕ್ಟರ್ ತರುವ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಈಗಾಗಲೇ 200 ಕ್ಕೂ ಹೆಚ್ಚು ರೈತರು ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.

ಟ್ರ್ಯಾಕ್ಟರ್ ಸರ್ವಿಸ್ ಮಾಡಿಸಿಕೊಳ್ಳುವ ಜೊತೆಗೆ ಚಾಲನಾ ಪರವಾನಿಗೆ,  ಇನ್ಷೂರೆನ್ಸ್ ಪತ್ರಗಳನ್ನು ತರಬೇಕು. ಎಷ್ಟೇ ಟ್ರ್ಯಾಕ್ಟರ್ ಬಂದರೂ ಸಹ ನಾನೂ ಡಿಸೇಲ್ ಹಾಕಿಸುತ್ತೇನೆ ಎಂದು ತಿಳಿಸಿದರು.

ಬೆಳಗಾವಿ ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ಭಾಗವಹಿಸುವ ಸಮಾಜ ಬಾಂಧವರಿಗಾಗಿ ಎರಡು ಬಸ್‌ಗಳ ವ್ಯವಸ್ಥೆ ಮಾಡಿಸುವುದಾಗಿ ಸಮಾಜದ ಮುಖಂಡ ಮಹಾಂತೇಶ್ ಒಣರೊಟ್ಟಿ ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರುಗಳಾದ ಮೋತಿ ಟಿ. ಶಂಕರಪ್ಪ, ವಕೀಲ ಯೋಗೇಶ್, ಮಿಟ್ಲಕಟ್ಟೆ ಚಂದ್ರಣ್ಣ, ಚಂದ್ರಶೇಖರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. 

error: Content is protected !!