ಇಸ್ಕಾನ್‌ನ ಚಿನ್ಮಯ್ ಕೃಷ್ಣದಾಸ್ ಬಿಡುಗಡೆಗೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ
ದಾವಣಗೆರೆ, ಜು. 4- ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಹಾಗೂ ಧಾರ್ಮಿಕ ಮುಖಂಡರ ಬಂಧನ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಕೇಸರಿ ಸಾಲು ಧರಿಸಿ ಆಗಮಿಸಿದ್ದ ಪ್ರತಿಭಟನಾಕಾರರು, ಬಾಂಗ್ಲಾದೇಶದ ವಿರುದ್ಧ ಘೋಷಣೆ ಕೂಗಿದರು. ನಂತರ ಗಾಂಧಿ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಿಂದೂಗಳ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು. ಇಸ್ಕಾನ್‌ನ ಚಿನ್ಮಯ್ ಕೃಷ್ಣದಾಸ್ ಅವರನ್ನು ಕೂಡಲೇ ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಡೇಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡನೀಯ. ಇಂತಹ ಕೃತ್ಯಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಹಿಂದೂಗಳು ಸಂಘಟಿತರಾಗಬೇಕು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಭಗವಂತನೂ ನಮ್ಮನ್ನು ರಕ್ಷಿಸಲಾರ. ನಾವೆಲ್ಲಾ ಹಿಂದೂಗಳು ಒಂದೇ ಎಂಬ ಭಾವನೆಯಲ್ಲಿ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.
ಮನೆಯ ಒಳಗೆ ಜಾತಿಗಳ ಬಗ್ಗೆ ಮಾತನಾಡೋಣ. ಆದರೆ ಮನೆಯಿಂದ ಹೊರ ಬಂದಾಗ ನಾವೆಲ್ಲಾ ಹಿಂದೂಗಳು ಒಂದೇ ಎಂಬ ಭಾವ ಇರಬೇಕು ಎಂದ ಶ್ರೀಗಳು, ಕೂಡಲೇ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಬಾಂಗ್ಲಕ್ಕೆ ಎಚ್ಚರಿಕೆ ನೀಡಬೇಕು ಎಂದರು.
ಪ್ರಾಂತ ಸಾಮರಸ್ಯ ಸಹ ಸಂಚಾಲಕ ಗೋ. ರುದ್ರಯ್ಯ ಮಾತನಾಡಿ, ಇಂದು ಬಾಂಗ್ಲಾದೇಶದಲ್ಲಿ ದೌರ್ಜನ್ಯ ನಡೆಯುತ್ತಿದೆ. ಈ ಘಟನೆಗಳು ಮುಂದೆ ಭಾರತದಲ್ಲಿ ನಡೆದರೂ ಆಶ್ಚರ್ಯವಿಲ್ಲ. ಹಿಂದೂಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಇಸ್ಕಾನ್ ದಾವಣಗೆರೆ ಘಟಕದ ಮುಖ್ಯಸ್ಥ ಅವಧೂತ ಚಂದ್ರದಾಸ ಗುರೂಜಿ, ಸಂಘದ ಪ್ರಮುಖರಾದ ರಾಮಚಂದ್ರ ವರುಣಬೈಲು, ಪ್ರವೀಣ್ ಎಬಿವಿಪಿ, ಅರುಣ್ ಗುಡ್ಡದಕೇರೆ, ಯೋಗೇಶ್ ಹೊಸಕೆರೆ, ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಸತೀಶ್ ಪೂಜಾರಿ, ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ರಾಜು, ಎಂ.ದೊಡ್ಡಪ್ಪ, ಬೆಳ್ಳೂಡಿ ಮಂಜುನಾಥ್, ಎಸ್.ಆರ್. ಹೆಗಡೆ, ಕೆ.ಬಿ. ಶಂಕರನಾರಾಯಣ, ಹೆಚ್.ಪಿ. ರಾಜೇಶ್, ರಾಜಶೇಖರ್ ನಾಗಪ್ಪ, ಬಿ.ಜಿ. ಅಜಯ್ ಕುಮಾರ್, ಕೆ.ಎಂ. ಪ್ರಸನ್ನಕುಮಾರ್, ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್, ರಾಜನಹಳ್ಳಿ ಶಿವಕುಮಾರ್, ಸಿದ್ಧಲಿಂಗ ಸ್ವಾಮಿ, ನಂದೀಶ್ ಬಳ್ಳಾರಿ, ಗುರುಬಸವರಾಜ್, ಶಿವಕುಮಾರ್, ಹೆಚ್.ಎನ್. ಶಿವಕುಮಾರ್, ಗೋಪಾಲಗೌಡ್ರು, ವೀರೇಶ್ ಹನಗವಾಡಿ, ವಿಶ್ವಾಸ್ ಇತರರು ವಕೀಲರಾದ ಬಸವರಾಜ್ ಉಚ್ಚಂಗಿದುರ್ಗ, ರಾಘೇಂದ್ರ, ರಂಗಸ್ವಾಮಿ, ನೀಲಕಂಠ ಸ್ವಾಮಿ, ಪ್ರತಿಟನೆಯಲ್ಲಿದ್ದರು.