ದಾವಣಗೆರೆ, ನ. 3- ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗಳ ಯಶಸ್ವಿನ ಫಲಶೃತಿಗೆ ಇಲ್ಲಿಯವರೆಗೂ ಹತ್ತು ಪ್ರಶಸ್ತಿಗಳು ಲಭಿಸಿವೆ.
ಅದರಲ್ಲೂ ಕಳೆದ ಒಂದು ವರ್ಷದಲ್ಲಿ ನಾಲ್ಕು ಪ್ರಶಸ್ತಿಗಳು ದಾವಣಗೆರೆ ಸ್ಮಾರ್ಟ್ ಸಿಟಿ ಮುಡಿಗೇರಿದ್ದು ಸಂತಸದ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಐಸಿಟಿ ಯೋಜನೆಯ ಯಶಸ್ವಿ ಮೂರು ರಾಷ್ಟ್ರಮಟ್ಟದ ಪ್ರಶಸ್ತಿಗಳಾದ ಐಎಂಎಎಫ್ 2.0 ಸೈಕಲ್ 1, ಪಬ್ಲಿಕ್ ಸೇಫ್ಟಿ ಇನ್ನೋವೇಷನ್, ಬೆಸ್ಟ್ ಸ್ಮಾರ್ಟ್ ಸಿಟಿ ಇನ್ಫ್ರಾಸ್ಟ್ರಕ್ಚರ್ ಲಭಿಸಿದೆ. ಕೆಎಸ್ಆರ್ಟಿಸಿ ಮುಖ್ಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಲ್ಟ್ರಾಟೆಕ್ ಕಂಪನಿಯಿಂದ ಕೊಡಲ್ಪಡುವ ಒಂದು ರಾಜ್ಯಮಟ್ಟದ ಔಟ್ಸ್ಟ್ಯಾಂಡಿಂಗ್ ಕಾಂಕ್ರೀಟ್ ಸ್ಟ್ರಕ್ಚರ್ ಆಫ್ ನಾರ್ಥ್ ಕರ್ನಾಟಕ (ಇನ್ಫಾ ಕೆಟಗೆರಿ) ಪ್ರಶಸ್ತಿ ಲಭಿಸಿರುವುದು ಸ್ಮಾರ್ಟ್ ಸಿಟಿಗೆ ಹೆಮ್ಮೆಯ ವಿಚಾರ ಎಂದರು.
ನಂತರ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಚರ್ಚಿಸಿದ ಸಚಿವರು, ಬಾಕಿ ಉಳಿದ ಕಾಮಗಾರಿ ಗಳನ್ನು ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಸ್ಮಾರ್ಟ್ ಸಿಟಿ ಕಾರ್ಯಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಸ್ವತಂತ್ರ ನಿರ್ದೇಶಕ ಎಂ. ನಾಗರಾಜ್, ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಕೃಷ್ಣಪ್ರಸಾದ್ ಹೆಚ್.ಎನ್., ಡಿಜಿಎಂ -ಐಟಿ ಮಮತಾ, ಜಲವಾಹಿನಿ ಪಿಎಂಸಿ ಟೀಮ್ ಲೀಡ್ ಉಮಾಪತಿ ಹೊಂಬಣ್ಣ ಮತ್ತಿತರರಿದ್ದರು.