ಡಿಸೆಂಬರ್ 3 ರಂದು ಪ್ರತಿವರ್ಷ ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ದಿನವನ್ನೇ ವಕೀಲರ ದಿನಾಚರಣೆಯನ್ನಾಗಿ ಆಚರಿಸುವ ಮಹತ್ವವೇನು ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ ಬರುವುದು ಸಹಜ.
ಅದಕ್ಕೆ ಕಾರಣ ಡಾ. ರಾಜೇಂದ್ರ ಪ್ರಸಾದ್. ಈ ದೇಶದಲ್ಲಿ ಕಾನೂನು ಕ್ಷೇತ್ರಕ್ಕೆ ತನ್ನದೇ ಆದ ಅಮೂಲ್ಯವಾದ ಸೇವೆಯ ಕೊಡುಗೆ ನೀಡಿದ್ದಾರೆ. ಪ್ರಸಾದ್‌ರವರು 1884ರ ಡಿಸೆಂಬರ್ 3ರಂದು ಬಿಹಾರದಲ್ಲಿ ಜನಿಸಿರುತ್ತಾರೆ. 1934 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಸ್ವತಂತ್ರ ಭಾರತದ ಮೊದಲ ರಾಷ್ಟ್ರ ಅಧ್ಯಕ್ಷರು ಆಗಿದ್ದ ಇವರು ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ನಂತರ ಭಾರತ ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ ತಮ್ಮದೇ ಆದ ಸೇವೆಯನ್ನು ಶ್ರೇಷ್ಠ, ಆದರ್ಶ, ಪ್ರಾಮಾಣಿಕ ಮತ್ತು ಪರೋಪಕಾರಿ ವಕೀಲರಾಗಿ ಕಕ್ಷಿದಾರರಿಗೆ ಪ್ರತ್ಯಕ್ಷ ದೇವರಾಗಿ ನೈತಿಕವಾಗಿ ತಮ್ಮ ನ್ಯಾಯವಾದಿ ವೃತ್ತಿಯನ್ನು ಈ ದೇಶಕ್ಕೆ ಸಲ್ಲಿಸಿದ ಮಹಾನ್ ದೇಶಭಕ್ತ, ಧರ್ಮಭಕ್ತ ಕಾನೂನು ಭಕ್ತ, ಕಾನೂನು ರಕ್ಷಿತಾ ವ್ಯಕ್ತಿಯಾಗಿ ಭಾರತ ದೇಶಕ್ಕೆ ಸೇವೆ ಸಲ್ಲಿಸಿ, ಅವರೊಬ್ಬ ವ್ಯಕ್ತಿಯಾಗದೆ ಶಕ್ತಿಯಾಗಿ ಭಾರತದ ಕಾರ್ಯಾಂಗ ವ್ಯವಸ್ಥೆಯ ಮುಖ್ಯಸ್ಥರಾಗಿ ಅದ್ಭುತ ಸೇವೆಯನ್ನು ನೀಡಿದ ಧೀಮಂತ ನಾಯಕ.
ಅಂತಹ ದೇಶಭಕ್ತನ ದಿನಾಚರಣೆಯನ್ನು ಈ ದಿನದಂದು ಆಚರಿಸುತ್ತಿರುವುದು ನಮ್ಮೆಲ್ಲ ವಕೀಲ ಸಮೂಹಕ್ಕೆ ಪ್ರೇರಣೆ ನೀಡುವ ಪ್ರೋತ್ಸಾಹದಾಯಕ ಸಮ್ಮಿಲನದ ಸಂಕೇತವಾಗಿದೆ. ಆದ್ದರಿಂದ ನಾವು ಸಹ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ನಮಗೆ ಜೀವನ ಜ್ಯೋತಿಯಾಗಿರುತ್ತದೆ ಪ್ರಸಾದ್ ರವರು ಸ್ವಾತಂತ್ರ ಹೋರಾಟ ಮತ್ತು ಚಳುವಳಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರು. ಭಾರತ ದೇಶ ಕಂಡ ಅಪರೂಪದ ನ್ಯಾಯವಾದಿ ಮತ್ತು ಸಮಾಜ ಸೇವಕರಾಗಿದ್ದರು.
1962ರಲ್ಲಿ ಅವರ ಈ ಸೇವೆಯನ್ನು ಭಾರತ ಸರ್ಕಾರ ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ದುರ್ದೈವ ಸಂಗತಿ ಎಂದರೆ ಅದಾದ ಕೆಲವೇ ದಿನಗಳಲ್ಲಿ 1963ರ ಫೆಬ್ರವರಿಯಲ್ಲಿ ಡಾ. ರಾಜೇಂದ್ರ ಪ್ರಸಾದ್ ನಿಧನರಾದರು. ಗಾಂಧೀಜಿಯ ಜೊತೆಯಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುತ್ತಿದ್ದ ಪ್ರಸಾದ್ ಅವರನ್ನು ಕುರಿತು ಗಾಂಧೀಜಿ ಒಂದು ಮಾತನ್ನಾಡಿದರು. ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ಒಬ್ಬ ವ್ಯಕ್ತಿ ಇದ್ದಾನೆ ಅವರೇ ಪ್ರಸಾದ್ ಅವರು ಎಂದು ಗಾಂಧೀಜಿ ಆಡಿದ ಮಾತು ಅವರ ವ್ಯಕ್ತಿತ್ವ, ವಿಶ್ವಾಸಕ್ಕೆ ಸಾಕ್ಷಿಯಾಗಿದ್ದವು.
ಹಾಗೆಂದ ಮಾತ್ರಕ್ಕೆ ಪ್ರಸಾದವರು ಗಾಂಧೀಜಿಯವರ ವ್ಯಕ್ತಿ ಪೂಜಕರಾಗಿದ್ದರು ಎಂದರ್ಥವಲ್ಲ. ವೈಚಾರಿಕ ಭಿನ್ನಾಭಿಪ್ರಾಯ ಬಂದಾಗ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪ್ರಸಾದ್ ಅವರು ಎಂದಿಗೂ ಹಿಂಜರಿಯುತ್ತಿರಲಿಲ್ಲ ಯಾವಾಗಲೂ ತಮ್ಮ ಸ್ವಾಭಿಮಾನವನ್ನು ಬಿಟ್ಟು ಬಾಳುತ್ತಿರಲಿಲ್ಲ. ತಮ್ಮ ನ್ಯಾಯವಾದಿ ವೃತ್ತಿಯಲ್ಲಿಯು ಸಹ ಪ್ರಾಮಾಣಿಕರಾಗಿ, ಸಮಾಜಮುಖಿಯಾಗಿ, ಬಡವರ ಹಿತ ಚಿಂತಕರಾಗಿ ಆದರ್ಶ ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟು ವೃತ್ತಿ ಶ್ರೇಷ್ಠತೆಯನ್ನು ಮೆರೆದವರು ಪ್ರಸಾದ್ ಅವರು.
ಅವರ ತತ್ವ ಆದರ್ಶಗಳು ನ್ಯಾಯವಾದಿಗಳಿಗೆ ಇಂದಿಗೂ ಪ್ರೇರಣೆ, ಪ್ರೋತ್ಸಾಹ ಮತ್ತು ಕ್ರಿಯಾಶೀಲತೆ ನೀಡುವುದರಲ್ಲಿ ಎರಡು ಮಾತಿಲ್ಲ. ನಾವು ನ್ಯಾಯವಾದಿಗಳು ನಮ್ಮೆಲ್ಲರ ವೃತ್ತಿಯ ಹುಟ್ಟು ಹಬ್ಬವನ್ನಾಗಿ ಸಂಭ್ರಮದಿಂದ ಆಚರಿಸಿಕೊಳ್ಳುವುದರೊಂದಿಗೆ ನಮ್ಮದೇ ಆದ ವೃತ್ತಿಯ ಗೌರವ ಘನತೆಯನ್ನು ಎತ್ತಿ ಹಿಡಿಯುವ ಡಿಸೆಂಬರ್ 3ರ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನಾಚರಣೆಯನ್ನು ನಮ್ಮ ವಕೀಲರ ದಿನಾಚರಣೆಯನ್ನಾಗಿ ಆಚರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿರುತ್ತದೆ.
ಹಾಗೆಯೇ ಇದೊಂದು ಸಂಭ್ರಮದ ದಿನವೂ ಆಗಿರುತ್ತದೆ. ನ್ಯಾಯವಾದಿಯಾಗಿ ಕಕ್ಷಿದಾರರಿಗೆ ಪ್ರಾಮಾಣಿಕವಾಗಿ, ನೈತಿಕವಾಗಿ ನ್ಯಾಯವನ್ನು ಕೊಡಿಸುವ ಜೊತೆಗೆ ನಾವು ಸರ್ವಸ್ಪರ್ಶಿಯಾಗಿ, ಸಮಾಜ ಸುಧಾರಕರಾಗಿ, ಸಮಾಜ ಪರಿವರ್ತಕರಾಗಿ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ಅರಿವನ್ನು ಮತ್ತು ನೆರವನ್ನು ಕೊಡುವುದು ನಮ್ಮ ಜವಾಬ್ದಾರಿ ವೃತ್ತಿಯ ಒಂದು ಭಾಗ. ನಮ್ಮ ಸೇವೆ ನಾವು ಮಾಡುವ ನಿಸ್ವಾರ್ಥ ಕೆಲವು ಕಾರ್ಯಗಳಿಂದಲೇ ನಾವು ಧೀಮಂತ ವ್ಯಕ್ತಿ, ದೇಶಭಕ್ತ ಪ್ರಸಾದ್ ಅವರ ನೆನಪನ್ನು, ಆದರ್ಶವನ್ನು ಪಾಲಿಸಿದಂತೆ ಆಗುತ್ತದೆ.
ಮೂಲತಃ ವಕೀಲ ವೃತ್ತಿ ಸೇವಾವೃತ್ತಿ ಎಂದು ಈ ಸಮಾಜದಲ್ಲಿ ಹೆಸರನ್ನು ಪಡೆದಿದೆ. ವೃತ್ತಿ ಹೆಸರಿಗೆ ತಕ್ಕಂತೆ ನಾವು ಸದಾ ವಕೀಲ ವೃತ್ತಿ ಒಂದು ಸೇವಾ ವೃತ್ತಿ ಸಮಾಜ ಪರಿವರ್ತನೆಯ, ಸಮಾಜ ಸುಧಾರಣೆಯ, ದೇಶದ ಕಣ್ಣುಗಳಾಗಿ ವೃತ್ತಿ ಗೌರವವನ್ನು ಕಾಪಾಡಿಕೊಂಡು ನಾವು ನಮ್ಮ ಜೀವನವನ್ನು ಸಾರ್ಥಕತೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ನ್ಯಾಯಾಂಗ ಕ್ಷೇತ್ರದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಒಟ್ಟಾರೆ ಎಲ್ಲಾ ಕ್ಷೇತ್ರದಲ್ಲಿ ವಕೀಲರುಗಳು ಮುಂಚೂಣಿಯ ಲ್ಲಿರುತ್ತಿದ್ದರು. ಶಾಸನ ಸಭೆಗಳಲ್ಲಿ ಹೆಚ್ಚಿನ ಪ್ರತಿನಿಧಿಗಳು ವಕೀಲರೇ ಆಗಿರುತ್ತಿದ್ದರು. ಅಂದು ವಕೀಲ ವೃತ್ತಿ ಒಂದು ಶ್ರೀಮಂತ ವೃತ್ತಿ ಗೌರವದ ವ್ಯಕ್ತಿಗಳು ಮಾತ್ರ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಸಾಮಾನ್ಯ ವ್ಯಕ್ತಿಗಳು ವೃತ್ತಿಯನ್ನು ನಿರ್ವಹಿಸುತ್ತಾ ವೃತ್ತಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ.
ಭಾರತ ದೇಶದ ಶಾಸಕಾಂಗ ಅಥವಾ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಭಾರತದ ನ್ಯಾಯವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು ಶಾಸನ ರಚನೆಯಲ್ಲಿ ನ್ಯಾಯವಾದಿಗಳು ಹೆಚ್ಚಿನ ಪಾತ್ರವನ್ನು ನಿರ್ವಹಿಸಿ ಕಾನೂನಿನ ಪವಿತ್ರತೆಯನ್ನು ಕಾಪಾಡುತ್ತಿದ್ದರು ಎಂದಿಗೂ ಆ ವೃತ್ತಿಗೆ ತನ್ನದೇ ಆದ ಮಹತ್ವ ತನ್ನತನ ಇದ್ದು ದೇಶದ ಅಂಕು-ಡೊಂಕುಗಳ ಕಾನೂನು ತಿದ್ದುಪಡಿಯಲ್ಲಿ ನ್ಯಾಯವಾದಿಗಳ ಪಾತ್ರ ಶ್ರೇಷ್ಠವಾಗಿರುತ್ತದೆ.
ಆದ್ದರಿಂದ ನ್ಯಾಯವಾದಿಗಳನ್ನು ರಾಜಕೀಯ ಪಕ್ಷಗಳು ನ್ಯಾಯವಾದಿಗಳಿಗೆ ತಮ್ಮ ತಮ್ಮ ಪಕ್ಷಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಿ ರಾಷ್ಟ್ರ ಮತ್ತು ರಾಜ್ಯ ಶಾಸನ ರಚನೆಗಳಲ್ಲಿ ಸೇವೆಯನ್ನು ಸಲ್ಲಿಸಲು ಅವಕಾಶಗಳನ್ನು ನೀಡಬೇಕು. ಇತ್ತೀಚಿನ ದಿನಗಳಲ್ಲಿ ವಕೀಲರುಗಳಿಗೆ ಅವಕಾಶವನ್ನು ನೀಡದೇ ಶಾಸನ ರಚನೆಯ ಸಂದರ್ಭದಲ್ಲಿ ಪ್ರಾಶಸ್ತ್ಯ ನೀಡಿ ಅವಕಾಶವನ್ನು ನೀಡಿದರೆ ಪ್ರಸಾದ್ ಅವರು ಈ ರಾಷ್ಟ್ರಕ್ಕೆ ಕೊಟ್ಟ ಸೇವೆಯನ್ನು ನೆನಪಿಸಿಕೊಂಡು ಅವರಿಗೆ ಗೌರವ ಕೊಡಬೇಕೆಂದು ಈ ದಿನ ನಮ್ಮ ಒತ್ತಾಸೆ ಇರುತ್ತದೆ.
ವಕೀಲರ ದಿನಾಚರಣೆಯ ಈ ಸಂದರ್ಭದಲ್ಲಿ ನನ್ನ ಒಂದು ಮನವಿ ಸರ್ಕಾರಗಳಿಗೆ ಮತ್ತು ಸರ್ಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಸುವುದೇನೆಂದರೆ, ಈ ದೇಶದಲ್ಲಿ 1952 ರಿಂದ ಇಲ್ಲಿಯವರೆಗೆ ಎಂದಿಗೂ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೂ ಪ್ರಶಸ್ತಿಗಳನ್ನು ಸಮಾಜ ಸೇವೆ, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ವಿಜ್ಞಾನ ಕ್ಷೇತ್ರ, ಪರಿಸರ ಕ್ಷೇತ್ರ, ಮತ್ತಿತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದೆ. ಅದನ್ನು ನಾವು ಗೌರವಪೂರ್ಣವಾಗಿ ಸ್ವಾಗತಿಸುತ್ತೇವೆ. ಆದರೆ, ದೇಶದ ಎಲ್ಲಾ ಕ್ಷೇತ್ರಗಳಂತೆ ಅತ್ಯಮೂಲ್ಯವಾದ ಕಾನೂನು ಕ್ಷೇತ್ರವನ್ನು ಯಾವ ಸರ್ಕಾರದ ಯಾವುದೆ ಇಲಾಖೆಗಳು ಗೌರವ ಪ್ರಶಸ್ತಿಗಾಗಿ ವಕೀಲರ ಸೇವೆಯನ್ನು ಪರಿಗಣಿಸದೇ ಇರುವುದು ಒಂದು ಬೇಸರದ ಸಂಗತಿ.
ವಕೀಲರ ದಿನಾಚರಣೆಯ ಸಂದರ್ಭದಲ್ಲಿ ನನ್ನ ದೊಂದು ಮನವಿ ಏನೆಂದರೆ, ಕಾನೂನು ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ನ್ಯಾಯವಾದಿಗಳಿಗೆ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ವಿಶೇಷವಾಗಿ ಕಾನೂನು ಕ್ಷೇತ್ರದಲ್ಲಿ ಹೆಚ್ಚು ಸೇವೆ ಸಲ್ಲಿಸಿದ ನ್ಯಾಯವಾದಿಗಳಿಗೆ ಪ್ರತಿವರ್ಷ ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನಾಚರಣೆಗೆ ಅವರು ನೀಡಿದ ಸೇವೆಗೆ ಒಂದು ಗೌರವನ್ನು ಸಲ್ಲಿಸಿ ವಕೀಲರ ವೃತ್ತಿಯನ್ನು ಪ್ರೋತ್ಸಾಹದಾಯಕವಾಗಿ ಮಾಡಲೆಂದು ಆಶಿಸುತ್ತಾ, ವಕೀಲರ ವೃತ್ತಿಯನ್ನು ಅಂದರೆ ಕಾನೂನು ಕ್ಷೇತ್ರವನ್ನು ಗೌರವದಿಂದ ಕಾಣುವಂತೆ ಸರ್ಕಾರದ ಕಣ್ಣುಗಳು ಮನಸ್ಸುಗಳು ಹೃದಯಗಳು ತೆರೆಯಲೆಂದು ಈ ದಿನದಂದು ಆಶಿಸುತ್ತಾ ನಮ್ಮೆಲ್ಲ ವಕೀಲ ವೃತ್ತಿ ಬಾಂಧವರಿಗೆ ವಕೀಲರ ದಿನಾಚರಣೆ ಶುಭಾಶಯಗಳನ್ನು ಸಲ್ಲಿಸುತ್ತೇನೆ.
– ವೈ.ಮಂಜಪ್ಪ ಕಾಕನೂರು, ಹಿರಿಯ ನ್ಯಾಯವಾದಿಗಳು, ಜಿಲ್ಲಾ ಸರ್ಕಾರಿ ನಿವೃತ್ತ ನ್ಯಾಯವಾದಿ, ದಾವಣಗೆರೆ.