ಕುಂದಾಪುರ ತಂಡ ಪ್ರಥಮ ಸ್ಥಾನ, ಬೆಂಗಳೂರು ತಂಡ ರನ್ನರ್ ಆಫ್
ದಾವಣಗೆರೆ, ಡಿ. 2 – ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿನ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಐದು ದಿನಗಳ ಕ್ರಿಕೆಟ್ ಹಬ್ಬಕ್ಕೆ ಸೋಮವಾರ ಬೆಳಗಿನ ಜಾವ 5 ಗಂಟೆಗೆ ತೆರೆ ಬಿದ್ದಿದೆ.
ಸೋಮವಾರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರು ಪ್ರಕೃತಿ ನ್ಯಾಶ್ ಮತ್ತು ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡದ ಮಧ್ಯ ನಡೆದ ಪಂದ್ಯದಲ್ಲಿ ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡ ಗೆಲುವು ಸಾಧಿಸುವ ಮೂಲಕ 5,00,555 ನಗದು ಮತ್ತು ಆಕರ್ಷಕ ಟ್ರೋಪಿಯನ್ನು ಪಡೆಯಿತು. ಕುಂದಾಪುರದ ಜಾನ್ಸನ್ ನಿಕ್ಷಿತ್ ವಿರುದ್ಧ ಸೋಲನ್ನುಭವಿಸಿದ ಬೆಂಗಳೂರು ಪ್ರಕೃತಿ ನ್ಯಾಶ್ ತಂಡವು 3,00,555 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು.
ಟಾಸ್ ಗೆದ್ದು ಫಿಲ್ಡಿಂಗಿಗೆ ಇಳಿದ ಬೆಂಗಳೂರು ಪ್ರಕೃತಿ ನ್ಯಾಶ್ ತಂಡವು ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡ ವನ್ನು ನಾಲ್ಕು ವಿಕೆಟ್ ಪಡೆದು 63 ರನ್ ಗೆ ಕಟ್ಟಿ ಹಾಕುವಲ್ಲಿ ಯಶಸ್ವಿ ಆಯಿತು. ಇದನ್ನು ಬೆನ್ನಟ್ಟಿದ ಬೆಂಗಳೂರು ಪ್ರಕೃತಿ ನ್ಯಾಶ್ ಆಟಗಾರರು ಆರಂಭದಲ್ಲಿ ಉತ್ತಮ ಆಟಗಾರರ ವಿಕೆಟ್ ಕಳೆದುಕೊಂಡು ಆಘಾತಕಾರಿ ಸ್ಥಿತಿಯಲ್ಲಿ ಕಂಡುಬಂದು 63 ರನ್ ಗಳಿಸಲು ಸಾಧ್ಯವಾಗದೇ 45 ರನ್‍ಗಳನ್ನು ಮಾತ್ರ ಗಳಿಸಿ ರನ್ನರ್ ಆಫ್ ಆಯಿತು.
ಸೆಮಿಫೈನಲ್ ತಲುಪಿದ್ದ ನಂಜನಗೂಡು ಇಲೆವೆನ್ಸ್ ಮತ್ತು ಉಡುಪಿಯ ಪಾಂಚಜನ್ಯ ತಂಡಗಳು ಕ್ರಮವಾಗಿ 3 ಮತ್ತು 4ನೇ ಬಹುಮಾನ ಪಡೆದುಕೊಂಡವು. ಬೆಂಗಳೂರು ಪ್ರಕೃತಿ ನ್ಯಾಶ್ ತಂಡದ ಆಕಾಶ್ ಬೆಸ್ಟ್ ಬ್ಯಾಟ್ಸ್‍ಮನ್, ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡದ ಇಮ್ರಾನ್ ಬೆಸ್ಟ್ ಬೌಲರ್ ಮತ್ತು ಕುಂದಾಪುರದ ಜಾನ್ಸನ್ ನಿಕ್ಷಿತ್ ತಂಡದ ಹರಿ ಮ್ಯಾನ್ ಆಫ್‍ದ ಸಿರೀಸ್, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಈ ಪಂದ್ಯವನ್ನು ಸುಮಾರು 25 ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ವೀಕ್ಷಿಸಿದರು. ಮದನ್ ಮಡಿಕೇರಿ ತಂಡದವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದರೆ, ವಿನಯ್ ವಿದ್ಯಾಧರ ಮತ್ತು ಶಿವನಾರಾಯಣ ಐತಾಳ್ ಕೋಟಾ ಇವರು ವೀಕ್ಷಕ ವಿವರಣೆ ನೀಡಿದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಆಯೋಜಕ ಅಧ್ಯಕ್ಷರೂ ಆದ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಉದ್ಯಮಿಯೂ ಆಗಿರುವ ದಾನಿ ಶಿವಗಂಗಾ ಶ್ರೀನಿವಾಸ್, ಹಿರಿಯ ಕ್ರೀಡಾಪಟುಗಳಾದ ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ಮುಖಂಡರಾದ ಬಿ.ಕೆ. ಪರಶುರಾಮ್, ರವಿಕುಮಾರ್ ಗಾಂಧಿ, ಪಿ.ಸಿ. ರಾಮನಾಥ್ ಸೇರಿದಂತೆ ಕ್ರೀಡಾಭಿಮಾನಿಗಳು ಹಾಜರಿದ್ದರು.