ಗುರುವಿನ ಕೃಪೆಯಿಂದ ಮೋಕ್ಷ ಸಾಧನೆ

ಗುರುವಿನ ಕೃಪೆಯಿಂದ ಮೋಕ್ಷ ಸಾಧನೆ

ಯಲವಟ್ಟಿ : ಸತ್ಸಂಗ ಕಾರ್ಯಕ್ರಮದಲ್ಲಿ ಯೋಗಾನಂದ ಸ್ವಾಮೀಜಿ ಅಭಿಮತ

ಮಲೇಬೆನ್ನೂರು, ಡಿ. 2- ಗುರುವಿನ ಮನಸ್ಸನ್ನು ಭಕ್ತಿ-ಭಾವದಿಂದ ಮಾತ್ರ ಗೆಲ್ಲಲು ಸಾಧ್ಯ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.

ಅವರು ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಛಟ್ಟಿ ಅಮವಾಸ್ಯೆ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗುರುವಿನ ಶಕ್ತಿಯನ್ನು ಯಾರಿಂದಲೂ ತಿಳಿಯಲು ಸಾಧ್ಯವಾಗಿಲ್ಲ. ಅದಕ್ಕಾಗಿ ಹಿರಿ ಯರು ಹರ ಮುನಿದರೂ ಗುರು ಕಾಯ್ವ ನೆಂದು ಹೇಳುತ್ತಾರೆ. ಅಂತಹ ಗುರುವಿನ ಕೃಪೆ ಆಗಬೇಕಾದರೆ ನಾವು ಪರಿಪಕ್ವವಾಗಿರಬೇಕು. ಗುರುವಿನ ಕೃಪೆಯಿಂದ ಮೋಕ್ಷ ಸಾಧನೆಯಾಗುತ್ತದೆ. ಆದ್ದರಿಂದ ಬದುಕಿನಲ್ಲಿ ಅರಿತು ನಡೆಯುವ ಚಿಂತನೆ ಮಾಡಿ  ಎಂದು ಸ್ವಾಮೀಜಿ ಭಕ್ತರಿಗೆ ತಿಳಿಸಿದರು.

21 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದದ್ದು ಎಂದು ಶರಣರು – ಸಂತರು ಹೇಳಿದ್ದಾರೆ. ಪುಣ್ಯ-ಪಾಪಗಳ ಮಿಶ್ರಣದಿಂದ ಮನುಷ್ಯ ಜನ್ಮ ಪ್ರಾಪ್ತಿಯಾಗಿದ್ದು, ಅಂತಹ ಶ್ರೇಷ್ಠ ಜನ್ಮವನ್ನು ನಾವು ಸಾರ್ಥಕ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಾದರೆ ಇಂತಹ ಸತ್ಸಂಗಗಳನ್ನು ಕೇಳಿ ತಿಳಿದುಕೊಳ್ಳಿ ಎಂದ ಯೋಗಾನಂದ ಸ್ವಾಮೀಜಿ ಹೇಳಿದರು.

ಅಧ್ಯಾತ್ಮಿಕ ಚಿಂತಕ ಸಿರಿಗೆರೆ ಸಿದ್ದೇಶ್ ಮಾತನಾಡಿ, ಸತ್ಸಂಗದಿಂದ ಮನುಷ್ಯ ಕ್ರಿಯಾಶೀಲ ಹಾಗೂ ಜಾಗೃತನಾಗಲು ಅವಕಾಶವಿದ್ದು, ಆತ್ಮ ಜಾಗೃತಿಯಿಂದ ಅನುಸಂಧಾನ ಸಾಧ್ಯ ಎಂದರು.

ನಮ್ಮಲ್ಲಿರುವ ಬಯಕೆಗಳಿಂದ ನಮ್ಮ ನೆಮ್ಮದಿಗೆ ಧಕ್ಕೆ ಆಗಲಿದೆ. ನಮ್ಮ ಭೌತಿಕ ಕ್ರಿಯೆಗಳನ್ನು ಪರಾಮರ್ಶೆ ಮಾಡಲು ಮತ್ತು ಸತ್ಯವಾದ ವಸ್ತುವಿನ ಚಿಂತನೆ ಮಾಡಲು ಸತ್ಸಂಗಗಳಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದ ಸಿದ್ದೇಶ್ ಅವರು, ಭಕ್ತಿಯ ಭಾವವನ್ನು ನಮ್ಮ ಮನಸ್ಸಿನಲ್ಲಿ ಹೆಚ್ಚಿಸಿಕೊಳ್ಳಬೇಕೆಂದರು.

ಸಹಕಾರ ಸಂಘಗಳ ನಿವೃತ್ತ ಲೆಕ್ಕ ಪರಿಶೋಧಕ ನಾಗರಾಜ್ ಸಿ. ಕುರುವತ್ತಿ ಮತ್ತು ಶ್ರೀಮತಿ ರೂಪಾ ನಾಗರಾಜ್ ಅವರು ಈ ದಿನದ ದಾಸೋಹಿಗಳಾಗಿದ್ದರು.

ಈ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಂ. ಸದಾನಂದ ಮತ್ತು ತಾ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಎನ್. ಹಳ್ಳಿ ನಾಗೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಡಿ. ಯೋಮಕೇಶ್ವರಪ್ಪ, ಜಿ. ಮಂಜುನಾಥ್ ಪಟೇಲ್, ಜಿ. ಆನಂದಪ್ಪ, ನಿವೃತ್ತ ಶಿಕ್ಷಕರಾದ ಜಿ. ಬಸಪ್ಪ, ಡಿ. ರವೀಂದ್ರಪ್ಪ, ಜಿ.ಆರ್. ನಾಗರಾಜ್, ಕೆ.ಎನ್. ಹಳ್ಳಿ ತಿಪ್ಪೇಸ್ವಾಮಿ, ಮಾಗಾನಹಳ್ಳಿ ವಾಸುದೇವಮೂರ್ತಿ, ಹೆಚ್.ಎಂ. ಸದಾಶಿವ, ಹೊಳೆಸಿರಿಗೆರೆಯ ಕುಂದೂರು ಮಂಜಪ್ಪ, ನಂಜಪ್ಪ, ಪತ್ರಕರ್ತ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಕುಂಬಳೂರು ಕುಬೇರಪ್ಪ ಭಕ್ತಿ ಗೀತೆ ಹಾಡಿದರು. ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿ, ವಂದಿಸಿದರು. ಜಿಗಳಿ ಮತ್ತು ಯಲವಟ್ಟಿ ಭಜನಾ ಸಂಘ ದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!