ಕನ್ನಡ ಸಾರಸ್ವತ ಲೋಕಕ್ಕೆ ಕೃಷ್ಣಶರ್ಮರ ಶ್ರೇಷ್ಠ ಕೃತಿಗಳು

ಕನ್ನಡ ಸಾರಸ್ವತ ಲೋಕಕ್ಕೆ ಕೃಷ್ಣಶರ್ಮರ ಶ್ರೇಷ್ಠ ಕೃತಿಗಳು

 ಪ್ರೊ. ರಾಘವೇಂದ್ರ ಪಾಟೀಲ್ ಶ್ಲ್ಯಾಘನೆ

ದಾವಣಗೆರೆ, ಡಿ. 1- ಡಾ. ಬೆಟಗೇರಿ ಕೃಷ್ಣಶರ್ಮ ಅವರು ನವೋದಯ ಕಾಲಘಟ್ಟದ ಶ್ರೇಷ್ಠ ಕವಿಗಳು. ನಾವು ಇಂಗ್ಲಿಷ್ ಸಂಸರ್ಗದಿಂದ ಕಳೆದುಕೊಂಡ ದೇಶೀಯತೆಯನ್ನು ಅವರು ನಮಗೆ ಆ ಕಾಲಘಟ್ಟದಲ್ಲಿ ನೆನಪಿಸಿಕೊಟ್ಟಿದ್ದಾರೆ.  ಅವರು ಆನಂದಕಂದ ಎಂಬ ಅಂಕಿತ ನಾಮದಲ್ಲಿ  ಅನೇಕ ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದು ಪ್ರೊ. ರಾಘವೇಂದ್ರ ಪಾಟೀಲ ತಿಳಿಸಿದರು.

ನಗರದ ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮತ್ತು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್  ಬೆಳಗಾವಿ ಇವರುಗಳ ಸಹಯೋಗದಲ್ಲಿ  ನಡೆದ `ಆನಂದಕಂದರ ನಲ್ವಾಡುಗಳು: ಮಂಥನ ಮತ್ತು ಗಾಯನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆನಂದಕಂದರು ಓದಿದ್ದು ಏಳನೆಯ ತರಗತಿ ಆದರೆ ಅವರ ಸಾಹಿತ್ಯವನ್ನು ಇಂದು ಸ್ನಾತಕೋತ್ತರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಹಳೆಗನ್ನಡ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅನೇಕ ಕೃತಿಗಳನ್ನು ಸಂಪಾದನೆ ಮಾಡುವ ಕಾರ್ಯವೂ ಬೆಟಗೇರಿ ಕೃಷ್ಣಶರ್ಮರಿಂದ ಆಗಿದೆ. ಅವರ ವಿರಹಿಣಿ, ಒಡನಾಡಿ, ನಲ್ವಾಡುಗಳು ಕೃತಿಗಳು ಪ್ರಕೃತಿ ತತ್ವ ಮತ್ತು ಪುರುಷ ತತ್ವವನ್ನು ಹೇಳುತ್ತಾ ಪ್ರೀತಿ, ಪ್ರೇಮ, ದಾಂಪತ್ಯ ಪ್ರಯಾಣವನ್ನು ಸಾದರಪಡಿಸಿದ್ದನ್ನು ಅವುಗಳಲ್ಲಿ ಕಾಣುತ್ತೇವೆ. 

ಮೈಸೂರು ಮಲ್ಲಿಗೆಯಂತೆ ಉತ್ತರ ಕರ್ನಾಟಕದಲ್ಲಿ ಇವರ ನಲ್ವಾಡುಗಳು ಜನಪ್ರಿಯವಾಗಿವೆ. ಅವರು ನಲ್ವಾಡುಗಳಲ್ಲಿ ಕಾಮವೆಂದು ಹೇಳುವ ನುಡಿಯಲ್ಲಿ ಸ್ವೇಚ್ಛಾಚಾರವಿಲ್ಲ. ಅದು ಮನುಷ್ಯನ ಆಂತರಿಕ ಅತ್ಯಂತಿಕ ನೆಲೆ ಆಗಿದೆ. ಅಲ್ಲದೆ  ಬಳಸಿಕೊಂಡ ಭಾಷೆ ಮತ್ತು ಗೇಯತೆಗಳು ಕೂಡ ಅಷ್ಟೇ ಉತ್ಕೃಷ್ಟತೆಯಿಂದ ಕೂಡಿದವುಗಳಾಗಿವೆ ಎಂದು ಹೇಳಿದರು.

ಆನಂದಕಂದರ ನಲ್ವಾಡು ಮಂಥನ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಸಿ.ಕೆ. ನಾವಲಗಿ ಅವರು ಇದ್ದದ್ದನ್ನು ಇದ್ದ ಹಾಗೆ ಹೇಳಿದವರು ಜನಪದರು. ಆ ಗುಣವನ್ನು ನಾವು ಆನಂದಕಂದರಲ್ಲಿ  ಕಾಣುತ್ತೇವೆ. ವಾಚ್ಯಾರ್ಥ ಸೂಚ್ಯಾರ್ಥದಲ್ಲಿ ಎರಡೂ ರೀತಿಯಲ್ಲಿ ಕವಿತೆಗಳನ್ನು ಆನಂದಕಂದರು ಬರೆದಿದ್ದಾರೆ. ಕಾಮದಿಂದ ಪ್ರಾರಂಭವಾಗಿ ಪರಿಪಕ್ವ ಪ್ರಣಯದವರೆಗೂ ನಲ್ವಾಡು ಸಾಗುತ್ತವೆ. ಆದರೆ ಎಲ್ಲಿಯೂ ಕೂಡ ಅಶ್ಲೀಲವಿಲ್ಲ ಎಂಬುದು ನಾವು ಅಧ್ಯಯನದಿಂದ ಅರಿಯಬಹುದಾಗಿದೆ. ಒಂದರ್ಥ ದಲ್ಲಿ ಮಹಾರಸಿಕ ಕವಿ ಆನಂದಕಂದರು ಆಗಿದ್ದಾರೆ ಎಂದು ಹೇಳಿದರು. ಹಾಗಿದ್ದರೂ ವಿಮರ್ಶೆ ವಲಯ ಬೆಟಗೇರಿ ಕೃಷ್ಣಶರ್ಮರನ್ನು ಕಡೆಗಣಿಸಿರುವುದು ಖೇದಕರ ಸಂಗತಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾ.ಮ. ಬಸವ ರಾಜಯ್ಯ ಮಾತನಾಡಿ, ಕಾಲೇಜು ಮಟ್ಟದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಕನ್ನಡ ಸಾಹಿತ್ಯದ ಉದ್ದೇಶ ಮತ್ತು ಮಹತ್ವವನ್ಮು ಅರಿಯುವಂತಾಗುತ್ತದೆ. ಅಲ್ಲದೇ ನಮ್ಮ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎಂದರು ಹೇಳಿದರು.

ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ. ಆರ್.ಆರ್. ಶಿವಕುಮಾರ್ ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಣಧೀರ ಆಧುನಿಕ ಕಾಲದಲ್ಲಿ ಯುವ ಜನಾಂಗ ಹುಸಿ ಪ್ರೀತಿಯಲ್ಲಿ ಮುಳುಗಿ, ಅದೇ ಜೀವನದ ನಿಜವಾದ ಅನುಭೂತಿ ಎಂದು ಅಂದುಕೊಂಡಿದೆ. ಆದರೆ ನಮ್ಮ ಹಿರಿಯ ಸಾಹಿತಿಗಳು ತಮ್ಮ ಬರಹಗಳ ಮೂಲಕ ಬದುಕಿನ ನಿಜವಾದ ಅನುಭೂತಿಯನ್ನು ದಾಖಲಿಸಿ ಹೋಗಿದ್ದಾರೆ. ಅದನ್ನು ಮರೆತರೆ ನಾವು  ಕ್ಷಣಿಕ ತೃಪ್ತಿಯಲ್ಲೇ ಅಸುನೀಗುತ್ತೇವೆ. ಆದರೆ ಹಾಗಾಗದೆ ನಿತ್ಯದ ಸುಖದ ಅನುಭೂತಿಯನ್ನು ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲ ಸೊಪ್ಪಿನ್ ಮಾತನಾಡಿ, ನಮ್ಮ ವಿದ್ಯಾರ್ಥಿನಿಯರಿಗೆ ಇಂದಿನ ಕಾರ್ಯಕ್ರಮದಿಂದ ಬದುಕಿನ ಸುಖದ ಕ್ಷಣಗಳು ಎಲ್ಲಿವೆ ಎಂದು ಅರಿವಾಗಿದೆ. ಸಾಹಿತ್ಯ ಯಾವಾಗಲೂ ಬದುಕಿನ ಅನುಭವದಿಂದ ಕೂಡಿರುವಂತಹದ್ದು. ಅಂತಹ ಸಾಹಿತ್ಯದ ಅಧ್ಯಯನವೂ ನಮಗೆ ಅನೇಕ ಕಷ್ಟಕರ ಸಂದರ್ಭದಲ್ಲಿ ಧೈರ್ಯವನ್ನು ನೀಡುತ್ತವೆ ಎಂದರು. 

ವೇದಿಕೆ ಕಾರ್ಯಕ್ರಮ ಮುಗಿದ ನಂತರ ಆನಂದಕಂದ ಗೆಳೆಯರ ಬಳಗ, ಧಾರವಾಡ ತಂಡದವರು ಆನಂದಕಂದರ ನಲ್ವಾಡುಗಳನ್ನು ಗಾಯನ ಮಾಡಿದರು. 

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಆರ್.‌ಜಿ. ಕವಿತ, ಡಾ. ಎಚ್.ಎಂ. ಲೋಹಿತ್, ಅನಂತಕುಮಾರ್ ಜಿ.ಎಸ್., ಕಾಳಾಚಾರ್ ಕೆ.ಪಿ. ಇದ್ದರು

ಕು. ಪಲ್ಲವಿ ಎಸ್.ಜಿ ಸ್ವಾಗತಿಸಿದರು. ಕು. ರೇಖಾ ಎಂ.ಪಿ. ಮತ್ತು ಕು. ಮಲ್ಲಿಕಾ ಎಂ. ನಿರೂಪಿಸಿದರು. ಕು. ಸಿ. ವಿದ್ಯಾ ವಂದಿಸಿದರು.

error: Content is protected !!