ನಮ್ಮ ಸಾಧನೆಗಳು ಮಾತುಗಳಾಗಬೇಕು

ನಮ್ಮ ಸಾಧನೆಗಳು ಮಾತುಗಳಾಗಬೇಕು

ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ

ದಾವಣಗೆರೆ, ಡಿ.1- ನಾವು ನೀವು ಕನ್ನಡ ನಾಡಿನ ಸತ್ಪ್ರಜೆಗಳು, ಕನ್ನಡ ನಾಡು ನುಡಿಯನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ `ಕರ್ನಾಟಕ ಮುಕುಟಮಣಿ’ ರಾಜ್ಯ ಪ್ರಶಸ್ತಿ ಪ್ರದಾನ, ಹೊಂಗನಸು ಕವನ ಸಂಕಲನ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಶಸ್ತಿಗಳು ನಿಮ್ಮ ಜವಾಬ್ದಾರಿಯನ್ನು, ಸ್ವಾಭಿಮಾನವನ್ನು ಹೆಚ್ಚಿಸುತ್ತವೆ. ಮಾತುಗಳು ಸಾಧನೆಗಳಾಗಬಾರದು, ಸಾಧನೆಗಳು ಮಾತಾಗಬೇಕು ಎಂದು ಪ್ರಶಸ್ತಿ ಪುರಸ್ಕೃತರಿಗೆ ಕಿವಿ ಮಾತು ಹೇಳಿದರು.

 ಮುಂದಿನ ದಿನಗಳಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ವಿವಿಧ ಕ್ಷೇತ್ರಗಳ ಹಿರಿಯ ಸಾಧಕರಿಗೆ ಸನ್ಮಾನಿಸಲಾಗುವುದು. ಏಕೆಂದರೆ ಅವು ಕಿರಿಯರಿಗೆ ಆದರ್ಶವಾಗುತ್ತವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಯುವ ಸಾಹಿತಿ ಡಾ.ಶ್ರೀದೇವಿ ಸೂರ್ಯಕಾಂತ ಸುವರ್ಣ ಖಂಡಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಭಾಷೆಗಳ ಜ್ಞಾನ ಅಗತ್ಯ. ಆದರೆ ತಾಯಿ ಭಾಷೆಯಾದ ಕನ್ನಡವನ್ನು ಮರೆಯಬಾರದು ಎಂದರು.

ಸಾವಿರಾರು ವರ್ಷಗಳ ಇತಿಹಾಸ ಇರುವ ಇಂತಹ ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವೇ ಪಾವನರು, ಪುಣ್ಯವಂತರು. ಇಂತಹ ಕಾರ್ಯಕ್ರಮಗಳಿಂದ   ಕಲೆ, ಸಾಹಿತ್ಯ, ಸಂಸ್ಕೃತಿ, ಉಳಿಯಲಿದೆ ಎಂದರು.

ರಾಯಚೂರಿನ ಬೆಳಕು ಸಾಹಿತ್ಯ, ಶೈಕ್ಷಣಿಕ ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿ ಮಾತನಾಡಿ, ಗಡಿ ಭಾಗಗಳಲ್ಲಿ ಕನ್ನಡ ಮಾಯವಾಗುತ್ತಿದೆ. ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ. ಇಂತಹ ದುಸ್ಥಿತಿಗೆ ಬೇರೆ ಯಾರೂ ಕಾರಣರಲ್ಲ. ಬೇರೆ ರಾಜ್ಯದವರಲ್ಲ, ಕನ್ನಡ ಅಳಿಸಿ ಹೋಗುತ್ತಿರುವ ಕಾಲಘಟ್ಟಕ್ಕೆ ಪ್ರಮುಖ ಕಾರಣ ಕನ್ನಡಿಗರೇ ಎಂದರು.

ನಾವು ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸುತ್ತಾ, ಉಳಿಸುತ್ತಾ ಹೋದಾಗ ಕನ್ನಡ ಶಾಲೆಗಳು ಮುಚ್ಚುವುದಿಲ್ಲ, ಭಾಷೆ ನಶಿಸಿಸುವುದಿಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಅಸ್ತಿತ್ವ, ಮಹತ್ವ ಇದೆ. ಹೀಗಾಗಿ ಕನ್ನಡ ಭಾಷೆಯ 8 ಜನ ಮಹಾನ್ ವ್ಯಕ್ತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ಎಂದರು

ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಜಾ ಮಾಲಿ ಪಾಟೀಲ್, ಡಾ.ಸುಬ್ಬಣ್ಣ ಕರಕನಹಳ್ಳಿ, ಡಾ.ವಿ.ವಿ. ಹಿರೇಮಠ, ವೆಂಕಟೇಶ್ ಎಸ್. ಸಂಪ, ಮಲ್ಲಿಕಾರ್ಜುನ ಎಸ್., ಕೆ.ಹೆಚ್. ಮಂಜುನಾಥ್,  ಹೇಮಾ ಶಾಂತಪ್ಪ ಪೂಜಾರಿ ಇತರರು ಉಪಸ್ಥಿತರಿದ್ದರು. ಶೈಲಾ ವಿನೋದ ನಿರೂಪಿಸಿದರು. ಶ್ರೀಮತಿ ಅಡಿಗ ಸ್ವಾಗತಿಸಿದರು. ಕೆ.ಸಿ.ಉಮೇಶ್ ವಂದಿಸಿದರು.

error: Content is protected !!