ದೇಶಕ್ಕೆ ಸಂವಿಧಾನವೇ ಶ್ರೇಷ್ಠ ಗ್ರಂಥ : ದೇವೇಂದ್ರಪ್ಪ

ದೇಶಕ್ಕೆ ಸಂವಿಧಾನವೇ ಶ್ರೇಷ್ಠ ಗ್ರಂಥ : ದೇವೇಂದ್ರಪ್ಪ

ಅಸ್ಪೃಶ್ಯತಾ ನಿವಾರಣೆ, ಜಾಗೃತಿ ಕಾರ್ಯಕ್ರಮದಲ್ಲಿ ಜಗಳೂರು ಶಾಸಕರ ಅಭಿಮತ

ಜಗಳೂರು, ಡಿ.1- ವೈವಿಧ್ಯತೆಯಲ್ಲಿ ಏಕತೆ ಸಾರುವ ದೇಶದಲ್ಲಿ ಸಂವಿಧಾನವೇ ಪವಿತ್ರ ಗ್ರಂಥ ವಾಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಂದಾಯ, ಪೊಲೀಸ್, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಸ್ಪೃಶ್ಯತಾ ನಿವಾರಣೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ. ಮೀಸಲಾತಿ ಹಕ್ಕುಗಳಿಂದ ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬಂದಿವೆ ಎಂದರು.

ಕೇವಲ ಹೋರಾಟದಿಂದ ನ್ಯಾಯ ಸಿಗದು. ಛಲ, ಪರಿಶ್ರಮ ಹಾಗೂ ಶಿಕ್ಷಣದಿಂದ ಮಾತ್ರ ಬದಲಾವಣೆ ಹಾಗೂ ಗುರಿ ಸಾಧಿಸಬಹುದು ಎಂದು ಹೇಳಿದರು.

`ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಆಚರಣೆ ಕಂಡುಬಂದರೆ ಅಂಗನವಾಡಿ, ಆಶಾ ಕಾರ್ಯಕರ್ತೆ ಯರು ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೊಡಿ. ಎಷ್ಟೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ಶಿಕ್ಷೆ ‌ಕೊಡಿಸಲು ಬದ್ಧನಾಗಿರುವೆ ಎಂದು ಹೇಳಿದರು.

ಅಂಗನವಾಡಿ ಆಶಾ‌ ಕಾರ್ಯಕರ್ತೆಯರು ಸರ್ಕಾರದ‌ ಯೋಜನೆಗಳ ಅನುಷ್ಠಾನಕ್ಕೆ ನಿರಂತರ ಸೇವೆಗೈಯ್ಯುತ್ತಿದ್ದು, ಅವರ ಗೌರವ ವೇತನ ಹೆಚ್ಚಳಕ್ಕಾಗಿ ಅಧಿವೇಶನದಲ್ಲಿ ಧ್ವನಿಯಾಗುವೆ ಎಂದು ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತ ನಾಡಿ, ಅಂಬೇಡ್ಕರ್ ಅವರ ಸಂವಿಧಾನ ಜಾರಿಗೊಂಡು 7ದಶಕಗಳು ಗತಿಸಿದರೂ ಅಸ್ಪೃಶ್ಯತೆ ಕುರಿತು ಜಾಗೃತಿ ಮೂಡಿಸುವ ಅಗತ್ಯವಿರುವುದು ಬೇಸರದ ಸಂಗತಿ ಎಂದರು. ತಾ.ಪಂ.ಇಓ ಕೆಂಚಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಎಸ್.ಟಿ ಇಲಾಖೆ ಸಹಾಯಕ‌ ನಿರ್ದೇಶಕ ಮಂಜುನಾಥ್, ಬಿಇಓ ಹಾಲಮೂರ್ತಿ, ಪಿಐ ಶ್ರೀನಿವಾಸ್ ರಾವ್, ಪ.ಪಂ ಸದಸ್ಯೆ ನಿರ್ಮಲಕುಮಾರಿ, ವಕೀಲ ಪಂಪಣ್ಣ, ಬಿ. ಮಹೇಶ್ವರಪ್ಪ, ಹಟ್ಟಿ ತಿಪ್ಪೇಸ್ವಾಮಿ, ಸಾಧನ ಕಲಾ ತಂಡದ‌ ಓಬಣ್ಣ, ಲತಾ ಪಟೇಲ್ ಇತರರು ಇದ್ದರು.

error: Content is protected !!