ಹರಪನಹಳ್ಳಿ : ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿ ಹುರಕಡ್ಲಿ ಶಿವಕುಮಾರ್ ವ್ಯಾಕುಲತೆ
ಹರಪನಹಳ್ಳಿ, ನ. 28- ಧರ್ಮ ಮತ್ತು ರಾಜಕೀಯ ಮನುಷ್ಯರಲ್ಲಿ ಭಯ ಉಂಟು ಮಾಡಿದರೆ, ಕಾವ್ಯ ಮನುಷ್ಯರನ್ನು ನಿರ್ಭೀತರನ್ನಾಗಿ ಮಾಡುತ್ತದೆ ಎಂದು ಬಾಚಿಗೊಂಡನಹಳ್ಳಿ ಕವಿ, ಸಾಹಿತಿ ಹುರಕಡ್ಲಿ ಶಿವಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಜನದನಿ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಯುವ ವಿದ್ಯಾರ್ಥಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮೃದ್ಧ ಸಾಹಿತ್ಯಿಕ ವಾತಾವಾರಣವಿರುವ ಕರುನಾಡಿನಲ್ಲಿ ಅನೇಕ ಕವಿಗಳು, ಸಾಹಿತಿಗಳು ಕನ್ನಡದ ಕಂಪನ್ನು ಚೆಲ್ಲಿದ್ದಾರೆ. ನಾವು ಭಾಷೆಯನ್ನು ಹೊತ್ತು ತಿರುಗುವುದಲ್ಲ. ಭಾಷೆಯೇ ನಮ್ಮನ್ನು ಆಡಿಸುತ್ತದೆ. ನಮ್ಮನ್ನು ಉತ್ಸಾಹಿಗಳನ್ನಾಗಿ ಮಾಡಲು ಸಹಕಾರ ನೀಡುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಸಮಾಜವನ್ನು ತಿದ್ದುವ ಕೆಲಸವನ್ನು ಕಾವ್ಯಗಳು ಮಾಡುತ್ತವೆ. ಇತ್ತೀಚಿಗೆ ಸದಾ ಮೊಬೈಲ್ ನಲ್ಲಿ ಮುಳುಗಿ ಓದುವ ಬರೆಯುವ ಅಭ್ಯಾಸ ಕಡಿಮೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ನಾಡು- ನುಡಿ, ನೆಲ, ಜಲ, ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಕೊಳ್ಳಬೇಕು ಎಂದರು.
ಹಿಂದೆ ಕವಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಿ, ಕಾವ್ಯದ ಮೂಲಕ ಸಮಾಜ ತಿದ್ದಿದ್ದರು. ಅನ್ಯಾಯಕ್ಕೆ ಒಳಗಾದವರಿಗೆ, ದಮನಿತರಿಗೆ ಧ್ವನಿಯಾಗಿದ್ದರು. ಆದರೆ, ಈಗ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಕವಿಗಳ ಸಂಖ್ಯೆ ಕಡಿಮೆಯಾಗಿದೆ. ಸಾಹಿತ್ಯ ನಮ್ಮೆಲ್ಲರ ನಿತ್ಯದ ಬದುಕಿನ ಅವಿಭಾಜ್ಯ ಅಂಗ. ಕಾಲ ಬದಲಾದಂತೆ ಸಾಹಿತ್ಯದ ಅಭಿವ್ಯಕ್ತಿ, ಅಭಿರುಚಿಯೂ ಬದಲಾಗಿದೆ. ಆದರೆ, ಕವಿತೆಗಳು ಈಗಲೂ ಆಪ್ತ ಹಾಗೂ ಚೇತೋಹಾರಿ ಅನಿಸುತ್ತದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಕೆ.ಸತೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ಸಂಘಟನೆ ಕಟ್ಟುವ ಸಾಹಸದ ಕೆಲಸದಲ್ಲಿ ಯುವ ಕವಿಗಳನ್ನು ಒಂದೆಡೆ ಸೇರಿಸಿ ಕಾವ್ಯ ವಾಚನ ಮಾಡುವ ಕೆಲಸ ಅಮೋಘವಾಗಿದ್ದು ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ಕ್ರೀಡೆ ಸಾಹಿತ್ಯ, ಸಂಸ್ಕೃತಿ, ಜನಪದ ಕಲೆ ಮತ್ತು ರಂಗಭೂಮಿಯಲ್ಲಿ ವಿದ್ಯಾರ್ಥಿಗಳು ತೊಡಗಿಸಿ ಕೊಳ್ಳಬೇಕು ಎಂದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ವ್ಯರ್ಥವಾಗುವುದಿಲ್ಲ ಕೊರಳಿನ ಬಾಷೆಗಿಂತ ಕರುಳಭಾಷೆ ಶ್ರೇಷ್ಠವಾಗಿದ್ದು, ಪುಸ್ತಕಗಳು ಧರ್ಮಗ್ರಂಥಗಳಾಗಬೇಕು. ನಿಮ್ಮ ಕಣ್ಣು ಮುಂದೆ ಭಾರತವಿದ್ದು ಜಾತಿರೋಗದ ಭೀತಿ ಕಳಚಿ ನೀತಿ
ವಂತರಾಗಬೇಕು. ಸಹಬಾಳ್ವೆ, ಸಹಕಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಬರದಂತೆ ಜೀವನ ನಡೆಸಬೇಕಾಗಿದೆ ಎಂದರು.
ನಿವೃತ್ತ ಎಸ್.ಬಿ.ಐ ಅಧಿಕಾರಿ ಗಣೇಶ್ ಹವಾಲ್ದಾರ್ ಮಾತನಾಡಿ, ವೃತ್ತಿಗಿಂತ ಪ್ರವೃತ್ತಿ ತೃಪ್ತಿಯನ್ನು ನೀಡುತ್ತದೆ. ಓದು ನಮ್ಮದಾಗಬೇಕು ಅದಕ್ಕೆ ಪೂರಕವಾಗಿ ಸತತ ಅಭ್ಯಾಸ ಮಾಡಬೇಕು.ಮನೆಯ ಚೌಕಟ್ಟಿನೊಳಗೆ ಅಮ್ಮನ ಭಾಷೆ, ಭಾವನೆ ಜೊತೆಗೆ ಮಾತೃಭಾಷೆ ಬರುತ್ತದೆ. ನಮ್ಮ ಭಾಷೆ ಪ್ರೀತಿ ಮಾಡುವುದರ ಜೊತೆಗೆ ಇತರೆ ಭಾಷೆಗಳನ್ನು ದ್ವೇಷಿಸಬಾರದು. ಭಾವನೆಗಳನ್ನು ಹಂಚಿಕೊಳ್ಳಲು ಭಾಷೆ ಅಡ್ಡಿಯಾಗದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಡಿ.ರಾಮನಮಲಿ, ಸುಭದ್ರಮ್ಮ ಮಾಡ್ಲಿಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ. ಬಸವರಾಜ ಸಂಗಪ್ಪನವರ್, ಸಾಹಿತಿ ಬಾಗಳಿ ರಾಜಶೇಖರ್ ಬಣಕಾರ್, ಉಪನ್ಯಾಸಕರಾದ ಎನ್.ಎಂ.ನಾಗರಾಜ, ಬುಳ್ಳಪ್ಪ, ಕೆ.ಎಂ.ಉಚ್ಚರಾಯಪ್ಪ, ಮಲ್ಲೇಶಪ್ಪ, ಪುನೀತರಾಜ್, ಶಂಭುಲಿಂಗಪ್ಪ, ಶಿಕ್ಷಕ ಸಿ.ಗಂಗಾಧರ್, ಶೇಖರ್ ನಾಯ್ಕ, ನಿಲಯ ಪಾಲಕ ಎನ್.ಜಿ.ಬಸವರಾಜ, ಅರಸಿಕೆರೆ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ಎಂ.ಸುರೇಶ, ಹೇಮಣ್ಣ ಮೋರಗೆರೆ, ಮಲ್ಲೇಶಪ್ಪ ಸೇರಿದಂತೆ ಇತರರು ಇದ್ದರು.