ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ
ದಾವಣಗೆರೆ, ನ.29- ಜನತೆಯ ಆರೋಗ್ಯ ಸಬಲೀಕರ ಣಕ್ಕಾಗಿ ಹಲವಾರು ಕಾರ್ಯ ಕ್ರಮಗಳನ್ನು 2019 ರಿಂದ ಎಸ್. ಎಸ್. ಕೇರ್ ಟ್ರಸ್ಟ್ ಮೂಲಕ ಆಯೋಜಿಸುತ್ತಾ ಬಂದಿದ್ದೇವೆ. ನಮ್ಮೆಲ್ಲರ ನಡೆ ಆರೋಗ್ಯದ ಕಡೆ ಎಂಬ ಧ್ಯೇಯ ವಾಕ್ಯದಂತೆ ಕೆಲಸ ಮಾಡುತ್ತಾ ಬರಲಾಗುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಕೆ.ಆರ್ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿ.ಪಂ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಕಚೇರಿ, ಎನ್ ಸಿಡಿ ಕೋಶ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಉಚಿತ ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲಿ ಆರೋಗ್ಯದ ಕೊರತೆ ಇದೆ? ಜನರಿಗೆ ಯಾವ ಆರೋಗ್ಯದ ಸಮಸ್ಯೆಯಿದೆ? ಅವರಿಗೆ ಯಾವ ರೀತಿ ಆರೋಗ್ಯ ಸೇವೆ ಒದಗಿಸಬಹುದು? ಎಂಬುದು ಸೇರಿದಂತೆ ನಮ್ಮ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾವ ರೀತಿ ಕೆಲಸ ಮಾಡಬಹುದು ಎಂಬ ಬಗ್ಗೆ ಕಳೆದ ಆರು ವರ್ಷಗಳಿಂದ ಸಭೆ ನಡೆಸಿ ಸಿದ್ದತೆ ಕೈಗೊಳ್ಳಲಾಗಿದೆ. ಎಸ್ ಎಸ್ ಕೇರ್ ಟ್ರಸ್ಟ್ ನಡಿ ಈಗಾಗಲೇ ಟಿಬಿ ಬಗ್ಗೆ ಅರಿವು ಮೂಡಿಸಲು, ಚಿಕಿತ್ಸೆ ನೀಡಲು ಜಾಥಾ ಮಾಡಲಾಗಿದೆ.ಈಗಾಗಲೇ ಎಸ್ ಎಸ್ ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯುನಿಟ್ ಇದ್ದು, ಎಸ್.ಎಸ್. ಕೇರ್ ಟ್ರಸ್ಟ್ ನಿಂದ ಇಲ್ಲಿಯವರೆಗೂ 20 ಸಾವಿರ ಉಚಿತ ಡಯಾಲಿಸಿಸ್ ಮಾಡಲಾಗಿದೆ ಎಂದರು.
ಕ್ಯಾನ್ಸರ್ ಬಗ್ಗೆ ಸ್ಪಂದನಾ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಸ್ಪಂದನಾ ಕಾರ್ಯಕ್ರಮದ ಮೂಲಕ ಈಗಾಗಲೇ 180 ಆಶಾ ಕಾರ್ಯಕರ್ತರೊಂದಿಗೆ ವರ್ಕ್ ಶಾಪ್ ಮಾಡಲಾಗಿದೆ. ಅವರಿಗೆ ಸ್ತನದ ಕ್ಯಾನ್ಸರ್, ಗರ್ಭದ ಕ್ಯಾನ್ಸರ್ ಯಾವ ರೀತಿ ಬರುತ್ತದೆ ಅದನ್ನು ತಡೆಯುವ ಕ್ರಮದ ಕುರಿತು ಹಾಗೂ ಆರೋಗ್ಯಕರ ಜೀವನ ಶೈಲಿ ಕುರಿತು ಆರಂಭಿಕ ಹಂತದಲ್ಲಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲಾಗಿತ್ತು ಇದರ ಜೊತೆ ಎಲ್ಲಾ ಆಶಾ ಕಾರ್ಯಕರ್ತರಿಗೂ ಕೂಡ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಅವರಿಗೆ ಸಂಪೂರ್ಣವಾಗಿ ಮಾಹಿತಿ ನೀಡಿ ತಯಾರು ಮಾಡಲಾಗಿದೆ.
ಮಹಿಳಾ ಗುಂಪುಗಳಿಗೆ ಸ್ಪಂದನಾ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ಕ್ಯಾನ್ಸರ್ ತಪಾಸಣೆ ಮಾಡಿಸಿಕೊಂಡಿದ್ದಾರೆ. 30 ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಎಸ್ ಹೆಚ್ ಇ ಗುಂಪುಗಳಿಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೂವತ್ತೈದು ವರ್ಷ ಮೇಲ್ಪಟ್ಟ ಮಹಿಳೆ ಯರು ಆರೋಗ್ಯದ ದೃಷ್ಟಿಯಿಂದ ತಪಾಸಣೆ ಮಾಡಿಸುವುದು ಮುಖ್ಯ ಎಂದು ಆರೋಗ್ಯದ ಕಾಳಜಿ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಡಿಹೆಚ್ಒ ಡಾ.ಷಣ್ಮುಖಪ್ಪ, ಡಾ.ರಾಘವನ್, ಡಾ.ದೇವರಾಜ್, ಡಾ.ಶುಕ್ಲಾಶೆಟ್ಟಿ, ಡಾ.ಸೋಮಶೇಖರ್, ಡಾ.ಅನುರೂಪ, ಡಾ.ನಂದೀಶ್ವರ್, ಡಾ.ಲತಾ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.