ಸೇವಾ ಸಾಧನೆಯಲ್ಲಿ ಆನಂದ ಕಂಡ ಆರ್. ರಮಾನಂದ್

ಸೇವಾ ಸಾಧನೆಯಲ್ಲಿ ಆನಂದ ಕಂಡ ಆರ್. ರಮಾನಂದ್

ದಶಕಗಳ ಹಿಂದೆ ದಾವಣಗೆರೆ ನಗರವು ಜವಳಿ ಕೈಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, `ಮ್ಯಾಂಚೆಸ್ಟರ್ ಆಫ್ ಮೈಸೂರ್’ ಎಂದು ಕರೆಸಿಕೊಳ್ಳುವಲ್ಲಿ, ಪ್ರಸ್ತುತ `ಕೇಂಬ್ರಿಡ್ಜ್ ಆಫ್ ಕರ್ನಾಟಕ’ ಎಂದು ಶೈಕ್ಷಣಿಕವಾಗಿ ಗುರುತಿಸಿಕೊಳ್ಳುವಲ್ಲಿ ರಾಜನಹಳ್ಳಿ, ಚಿಗಟೇರಿ, ಗುಂಡಿ ಮುಂತಾದ ಮನೆತನ ಗಳವರ ಪಾತ್ರವೂ ಮಹತ್ತರವಾಗಿದೆ. 

ಅಂತಹ ಪ್ರತಿಷ್ಠಿತ ರಾಜನಹಳ್ಳಿ ಮನೆತನದ ಭೀಮರಾಯಪ್ಪನವರ ಮಗ ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಕಿರಿ ಸಹೋದರರಾದ ಶ್ರೀಯುತ ಲಕ್ಷ್ಮಣ ಶೆಟ್ಟರು ಶ್ರೀಮತಿ ಸುಂದರಮ್ಮ (ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪನವರ ಕಿರಿ ಸಹೋದರ) ರವರ ಸುಪುತ್ರ ಆರ್.ರಮಾನಂದ್‌ರವರು, ಸೇವಾ ಸಾಧನೆಯಲ್ಲಿ ಆನಂದ ಕಂಡವರು.

ಸ್ವಾತಂತ್ರ್ಯ ಪೂರ್ವದಲ್ಲಿ 1939ರ ಸೆಪ್ಟೆಂಬರ್ ಹತ್ತರಂದು ಜನಿಸಿದ ರಮಾನಂದ ಅವರು, ಶ್ರೀಮಂತ  ಕುಟುಂಬದವರಾದರೂ ಬಾಲ್ಯದಲ್ಲಿ ಶಿಸ್ತುಬದ್ಧ ಅಚ್ಚುಕಟ್ಟಿನ ಜೀವನವನ್ನು ತಂದೆ ಹಾಗೂ ದೊಡ್ಡಪ್ಪಂದಿರಿಂದ ರೂಢಿಸಿಕೊಂಡವರು. ಬಾಲ್ಯದ ವಿದ್ಯಾರ್ಥಿ ದೆಸೆಯಲ್ಲಿ ಸ್ಕೌಟ್, ಸೇವಾದಳ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗಿ ಶಿಸ್ತು ಅಳವಡಿಸಿ ಕೊಂಡವರು. 

ನಗರದ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪ ಅಂದರೆ ಬಿ.ಡಿ.ಟಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದವರು. ಏರೋನಾಟಿಕಲ್ ಇಂಜಿನಿಯರಿಂಗ್ ಮಾಡಿ, ಭಾರತೀಯ ವಾಯು ಸೇನೆಯಲ್ಲಿ ಏರ್ ಕಮಾಂಡರ್ ಆಗಬೇಕೆಂಬ ಕನಸು ಕಂಡವರು ರಮಾನಂದ್. ಆದರೆ, ಕೈಗಾರಿಕೋದ್ಯಮ ಸ್ಥಾಪಿಸುವ ಅನಿವಾರ್ಯತೆ ಬಂದು 1961 ರಿಂದ 63 ಅವಧಿಯಲ್ಲಿ ಹಾಲೆಂಡ್, ಸ್ವಿಡ್ಜರ್‌ಲ್ಯಾಂಡ್ ಮುಂತಾಗಿ ಇಡೀ ಯುರೋಪ್ ಖಂಡ ಹಾಗೂ ಅಮೇರಿಕಾ, ಸ್ಕ್ಯಾಂಡಿನೇವಿಯ ಪ್ರವಾಸ ಮಾಡಿ, ಕೈಗಾರಿಕೋದ್ಯಮದ ಅನುಭವ ಪಡೆದವರು `ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬಂತೆ ದಾವಣಗೆರೆಯಲ್ಲಿ ಸಹೋದರರೊಂದಿಗೆ ಪಾಲುದಾರಿಕೆಯಲ್ಲಿ ಯಂತ್ರೋಪಕರಣಗಳ ತಯಾರಿಕೆಯ ರಾಜನಹಳ್ಳಿ ಇಂಟರೆಸ್ಟ್ರಿಯಲ್ ಎಂಟರ್ಪ್ರೈಸಸ್, ಸನ್ಮ್ಯಾಕ್ ಎಂಟರ್ಪ್ರೈಸಸ್, ಪ್ರೀಮಿಯರ್ ಇಂಡಸ್ಟ್ರೀಸ್ ಎಂಬ ಸ್ಟೀಲ್ ಫೌಂಡರಿಯ ನಿರ್ದೇಶಕರಾಗಿ, ರಾಸಾಯನಿಕ ಘಟಕವಾದ ಲಕ್ಷ್ಮಣ್ ಕೆಮಿಕಲ್ಸ್ ನ ನಿರ್ದೇಶಕರಾಗಿ, ಬೆಂಗಳೂರಿನ ಮಫತ್ ಲಾಲ್ ಪ್ಲೇವುಡ್ ಇಂಡಸ್ಟ್ರೀಸ್ ಲಿಮಿಟೆಡ್ ನ ನಿರ್ದೇಶಕ ರಾಗಿ ಕೈಗಾರಿಕಾ ರಂಗದಲ್ಲಿ ಸೇವಾ ಸಾಧನೆ ಮಾಡಿದ ರಮಾನಂದರವರು, ಆರ್.ಲಕ್ಷ್ಮಣ ಶೆಟ್ಟಿ ಅಂಡ್ ಕೋ ಹಾಗೂ ಶಾಮನೂರು ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮೂಲಕ ವಾಣಿಜ್ಯೋದ್ಯಮ ದಲ್ಲೂ ತೊಡಗಿಸಿ ಕೊಂಡವರು.  

ಶೈಕ್ಷಣಿಕ ರಂಗದ ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆಯ ಮಾನ್ಯ ಗೌರವ ಕಾರ್ಯದರ್ಶಿಗಳಾದ ಡಾ. ಶಾಮನೂರು ಶಿವಶಂಕರಪ್ಪ ಅವರ ಮಾರ್ಗದರ್ಶನದಲ್ಲಿ ಬಾಪೂಜಿ ಆಡಳಿತ ಮಂಡಳಿ ನಿರ್ದೇಶಕರಾಗಿ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಬಾಲಕರ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿ, ಬಾಪೂಜಿ ಫಾರ್ಮಸಿ ಕಾಲೇಜಿನ ಅಧ್ಯಕ್ಷರಾಗಿ, ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ದೇಹ ದಾನ ಸಮಿತಿ ಸದಸ್ಯರಾಗಿ, ತಾಂತ್ರಿಕ ಶಿಕ್ಷಣದ ಭಾರತೀಯ ಸಂಘ ಅಂದರೆ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್‌ನ ಆಜೀವ ಸದಸ್ಯರಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ನ  ಸದಸ್ಯರಾಗಿ, ಎಸ್.ಆರ್. ಎಲ್.ಎಂ ವಿದ್ಯಾ ಶಾಲಾ ಕಾರ್ಯದರ್ಶಿಗಳಾಗಿ ಪ್ರಸ್ತುತ ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷರೂ ಆಗಿ  ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ರಮಾನಂದರವರು, ಸಾರ್ವಜನಿಕ  ಸೇವಾ ಸಕ್ತಿಯಿಂದಾಗಿ ಇವರು ದಾವಣಗೆರೆ ಆರೋಗ್ಯಧಾಮ ಸ್ಥಾಪಿಸಿ, ಅದರ ಅಧ್ಯಕ್ಷರಾಗಿ, ಬುದ್ಧಿಮಾಂದ್ಯ ಮಕ್ಕಳ ಪುನಶ್ಚೇತನಕ್ಕಾಗಿ ಅಂಗವಿಕಲರ ಆಶಾಕಿರಣ ಟ್ರಸ್ಟಿನ ಉಪಾಧ್ಯಕ್ಷರಾಗಿ, ಭಾರತ ಸೇವಾದಳದ ಉಪಾಧ್ಯಕ್ಷರಾಗಿ, ರಾಜನಹಳ್ಳಿ ಚಾರಿಟಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿ, ನಗರದ ಡಿಸಿಎಂ ಟೌನ್ ಶಿಪ್‌ನ ವಾಸವಿ ಸೇವಾ ಸಂಘದ ಅಧ್ಯಕ್ಷರಾಗಿ, ವಾಸವಿ ಕ್ಲಬ್  ಇಂಟರ್‌ನ್ಯಾಷನಲ್ ದಾವಣಗೆರೆ ಶಾಖೆಯ ಅಧ್ಯಕ್ಷರಾಗಿ, ಕೇಂದ್ರ ಅಬಕಾರಿ ಮತ್ತು ಸಣ್ಣ ಕೈಗಾರಿಕಾ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರಾಗಿ, ಚಿತ್ರದುರ್ಗ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾಗಿ, ರೋಟರಾಕ್ಟಿನ ಮಾಜಿ ಅಧ್ಯಕ್ಷರಾಗಿ, ರೋಟರಿಯ ಮಾಜಿ ನಿರ್ದೇಶಕರಾಗಿ ತಮ್ಮ ಸೇವಾಸಕ್ತಿಯನ್ನು ಸಾರ್ಥಕ ಗೊಳಿಸಿಕೊಂಡ ವರು. ತೋಟಗಾರಿಕೆ, ಅಪರೂಪದ ನಾಣ್ಯ ಸಂಗ್ರಹ, ಫೋಟೋಗ್ರಫಿ, ಶಾಸ್ತ್ರೀಯ ನೃತ್ಯ, ಸಂಗೀತ, ಲಲಿತ ಕಲೆಗಳಲ್ಲಿ ಆಸಕ್ತಿ ಅಭಿರುಚಿ ಹೊಂದಿದ ಇವರು, ದಶಕಗಳ ಹಿಂದೆ ಅಮೆರಿಕೆಯಲ್ಲಿದ್ದಾಗ ಪಾಶ್ಚಿಮಾತ್ಯ ನೃತ್ಯವನ್ನೂ ಕಲಿತವರಾಗಿದ್ದರು. 

ಕ್ರೀಡಾಪಟುವಾಗಿ ಹಾಕಿ, ಬೇಸ್ಬಾಲ್, ಟೆನ್ನಿಸ್, ಕ್ರಿಕೆಟ್ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದರು.

ದಾನಿಗಳ ನಗರವೆಂದು ಪ್ರಸಿದ್ಧವಾಗಿ ರುವ ದಾವಣಗೆರೆಯಲ್ಲಿ ರಾಜನಹಳ್ಳಿ ಮನೆತನದವರ ದಾನ ಕಾರ್ಯಗಳು ಪ್ರಖ್ಯಾತವಾಗಿದ್ದು, ಆರ್.ರಮಾನಂದ ರವರು ಸಹಾ ನಗರದ ಡಿಸಿಎಂ ಟೌನ್‌ಶಿಪ್‌ನ ಕಲ್ಯಾಣ ಮಂಟಪಕ್ಕೆ 50 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದು, ಅವೋಪಾ ಸಂಸ್ಥೆಗೂ 30 ಲಕ್ಷ ರೂಪಾಯಿಗಳ ದೇಣಿಗೆ ನೀಡಿದವರಾಗಿದ್ದು, ಇದೇ ರೀತಿಯ ದೊಡ್ಡ ಮೊತ್ತದ ದೇಣಿಗೆಯನ್ನು ಈಶ್ವರಮ್ಮ ಟ್ರಸ್ಟ್ ಶಾಲೆಗೂ ಸಹ ನೀಡಿದವರಾಗಿದ್ದಾರೆ. ಸಾಮಾನ್ಯವಾಗಿ ಜನೋಪಯೋಗಿಯಾದ ಉತ್ತಮ ಕಾರ್ಯ ಮತ್ತು ಯೋಜನೆಗಳಿಗೆ ಯಾರೇ ಕೇಳಿ ಬಂದರೂ ಗರಿಷ್ಠ ಒಂದು ಲಕ್ಷ ರೂಪಾಯಿಗೂ ಕಡಿಮೆ ಇಲ್ಲದಂತೆ ದಾನ ಮತ್ತು ದೇಣಿಗೆ ನೀಡುವ ಪರಿಪಾಠವನ್ನು ರಮಾನಂದ ರೂಡಿಸಿಕೊಂಡಿದ್ದರು. 

ದಾವಣಗೆರೆ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಮದ್ದೂರಾಯಪ್ಪ ಲಕ್ಷ್ಮಣ ಶೆಟ್ಟಿ ಟ್ರಸ್ಟ್‌ನಿಂದ ಭೂದಾನ ನೀಡುವಲ್ಲೂ ಇವರ ಹಾಗೂ ಇವರ ಸಹೋದರರ ಪಾತ್ರ ಸ್ಮರಣೀಯವಾಗಿದೆ.

ದೊಡ್ಡಪ್ಪಂದಿರಾದ ರಾಜನಹಳ್ಳಿ ಹನುಮಂತಪ್ಪನವರು, ಮದ್ದೂರಾಯಪ್ಪನವರು, ತಂದೆ ಲಕ್ಷ್ಮಣ ಶೆಟ್ಟರ್ ಅವರ ಮಾರ್ಗದರ್ಶನವನ್ನು ಸದಾಸ್ಮರಿಸುತ್ತಿದ್ದ ರಮಾನಂದರವರು, ತಮ್ಮ ತಾಯಿಯ ಅನಾರೋಗ್ಯದ ಸಂದರ್ಭದಲ್ಲಿ ಸಹೋದರ – ಸಹೋದರಿಯರ ಒಡಗೂಡಿ ತಾಯಿಯ ಶುಶ್ರೂಷೆ ಆರೈಕೆಯಲ್ಲಿ ಧನ್ಯತೆಯನ್ನು ಕಂಡವರು.

ಸುಸಂಸ್ಕೃತಿಯ ಪ್ರೇಮಾರನ್ನು ಅರ್ಧಾಂಗಿ ಯಾಗಿ ವರಿಸಿ, ನಾಲ್ವರು ಸುಪುತ್ರಿಯರನ್ನೂ ಸುಜ್ಞಾನಿಗಳನ್ನಾಗಿ ಬೆಳೆಸಿ, ಸುಸಂಸ್ಕೃತ ಮನೆತನದ ಯೋಗ್ಯರಿಗೆ ಕನ್ಯಾದಾನ ಮಾಡಿದವರು.                           ಬಿಐಇಟಿ ಬಾಲಕರ ಹಾಸ್ಟೆಲ್‌ನ ಯಾವುದೇ ಕಾರ್ಯಕ್ರಮದಲ್ಲೂ ಬೇರೆ ರಾಜ್ಯದಿಂದ ಬಂದ ವಿದ್ಯಾರ್ಥಿಗಳಿಗೆ `ಬೇಗನೇ ಕನ್ನಡ ಕಲಿಯಿರಿ, ಇದು ನಿಮ್ಮ ಮಾತೃಭಾಷಾ ಕಿರೀಟಕ್ಕೆ ಗರಿ ಇಟ್ಟಂತೆ’ ಎಂದು ಯಾವಾಗಲೂ ಹೇಳುತ್ತಿದ್ದ ರಮಾನಂದ್, ಕನ್ನಡಾಭಿಮಾನಿಗಳು ಅಷ್ಟೇ ಸಂಸ್ಕೃತದ ಬಗೆಗೂ ಅಪಾರ ಗೌರವಾದರ ಇಟ್ಟುಕೊಂಡವರಾಗಿದ್ದರು. ವಯೋಮಾನ ವೃದ್ಧಿಸುತ್ತಾ ಬಂದಂತೆ ಅಧ್ಯಾತ್ಮ, ಧ್ಯಾನ ಹಾಗೂ ಯೋಗ ಅನುಷ್ಠಾನದಲ್ಲಿ ಹೆಚ್ಚು ಸಂತೃಪ್ತಿಯನ್ನು ಕಂಡವರು.

– ಹೆಚ್.ಬಿ.ಮಂಜುನಾಥ,
ಹಿರಿಯ ಪತ್ರಕರ್ತರು

error: Content is protected !!