ಪ್ರಸಕ್ತ ಬಿತ್ತನೆ, ಬೆಳೆ ನಿರ್ವಹಣೆ ಕುರಿತ ಅನುಭವದ ಸಲಹೆ

ಪ್ರಸಕ್ತ  ಬಿತ್ತನೆ, ಬೆಳೆ ನಿರ್ವಹಣೆ ಕುರಿತ ಅನುಭವದ ಸಲಹೆ

ಹಿಂಗಾರು ಮತ್ತು ಬೇಸಿಗೆಯ ಈ ಸಂಕ್ರಮಣ ಕಾಲದಲ್ಲಿ, ಸಕ್ಷಮ ಬೆಳೆ ಇಳುವರಿ ಪಡೆಯಲು ಹಿಂದಿನ ವರ್ಷಗಳ ಅನುಭವ  ಆಧರಿಸಿ   ವರದಾ ಕೃಷಿಕರ ವೇದಿಕೆಯ ಆರ್.ಜಿ ಗೊಲ್ಲರ್ ಅವರು    ಪ್ರಸಕ್ತ ಅವಧಿಯಲ್ಲಿ ಬಿತ್ತನೆ, ಬೆಳೆ ನಿರ್ವಹಣೆ ಕುರಿತ ಕೆಲವು ಸಲಹೆಗಳನ್ನಿಲ್ಲಿ ನೀಡಿದ್ದಾರೆ.

ಹವಾಮಾನ ಸ್ಥಿತಿ ಅನಿರೀಕ್ಷಿತವಾಗಿ ಬದಲಾ ದಲ್ಲಿ  ಬೆಳೆ ನಿರ್ವಹಣಾ ತಂತ್ರಗಳಲ್ಲಿ ಅಗತ್ಯ ಅಥವಾ ಸೂಕ್ತ ಬದಲಾವಣೆ  ಕುರಿತು ಸಲಹೆಗಳನ್ನು ಮಾತ್ರ ಪಡೆಯಬಹುದು ಎಂದು ಅವರು ಸೂಚಿಸಿದ್ದಾರೆ.

ತಪ್ಪದೇ ಮಾಡಬೇಕಾದ ಕ್ರಮ:  ಎಲ್ಲ ಬೆಳೆಗಳ ಪ್ರತಿ ಕೆಜಿ ಬೀಜಗಳನ್ನು 3 ಮಿಲೀ ಕ್ಲೋರ್ ಪೈರಿಫಾಸ್ ಮತ್ತು 3 ಗ್ರಾಂ ಕಾರ್ಬಡೈಜಿಂಗಳಿಂದ ಉಪಚರಿಸಬೇಕು. ಕೀಟ, ರೋಗ ಬಾಧೆ ಕುರಿತು ನಿರ್ದಿಷ್ಟ ಅನುಭವ ಇದ್ದಲ್ಲಿ ಅಥವಾ ಹೊಸದಾಗಿ ಬೆಳೆ ಬೆಳೆಯುವವರು ವಿಶೇಷ  ಉಪಚಾರಗಳಿಗಾಗಿ ಮುಂಚಿತವಾಗಿಯೇ ತಜ್ಞರ, ವಿಶೇಷಜ್ಞರ ಸಲಹೆ ಪಡೆಯತಕ್ಕದ್ದು.

ಕತ್ತರಿ ಸಾಲು/ ಒತ್ಸಾಲು / ಚೆಲ್ಲಿಕೆ (ಗೋಧಿ, ಶೇಂಗಾ, ರಾಗಿ ಇತ್ಯಾದಿ) ಬಿತ್ತನೆ ಮಾಡುವವರು ಜಮೀನಿಗೆ ಕೊಡಬೇಕಾದ ರಸಗೊಬ್ಬರ ಮತ್ತು ಇತರ ಪೋಷಕಾಂಶಗಳನ್ನು ಬಿತ್ತನೆಗೆ ಮೊದಲೇ ಕೊಡಬೇಕು. ಯಾವುದೇ ಕಾರಣಕ್ಕೂ, ರಂಜಕ ಯುಕ್ತ ಗೊಬ್ಬರಗಳೊಂದಿಗೆ ಲಘು ಪೋಷಕಾಂಶ ಯುಕ್ತ ಗೊಬ್ಬರಗಳನ್ನು ಬೆರೆಸಬಾರದು.

ಬಹುತೇಕವಾಗಿ ಜಿಂಕ್ ಸಲ್ಫೇಟ್, ಬೋರಾನ್ ಬಳಕೆ ಅಗತ್ಯ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸಲೇಬಾರದು.

ಎಲ್ಲ ಬೆಳೆಗಳಲ್ಲಿ ಕೊಟ್ಟಿಗೆ ಗೊಬ್ಬರ ಬಳಕೆ ಅತ್ಯಗತ್ಯ. ಸಗಣಿ ರಾಡಿ ಬಳಸುವ ಕುರಿತು ವಿಶೇಷಜ್ಞ ರ ಸಲಹೆ ಪಡೆಯಬಹುದು.

ಎಲ್ಲ ಬೆಳೆಗಳಲ್ಲಿ ಬಿತ್ತನೆಯಾದ 20-25 ದಿನಗಳ ನಂತರ ಹೂ ಬಿಡುವವರೆಗೆ ಎರಡು ವಾರಗಳಿಗೊಮ್ಮೆ 13:0:45, 19 ಆಲ್ ಮತ್ತು ಲಘು ಪೋಷಕಾಂಶ ಮಿಶ್ರಣ ಇವುಗಳ ಸಿಂಪಡಣೆ ಅತ್ಯಗತ್ಯ. ಹೂವಾಡುವ ಹಂತದ ನಂತರ 0:52:34, 19 ಆಲ್ ಸಿಂಪಡಣೆಯನ್ನು ಸಹ ಎರಡು ವಾರಗಳಿಗೊಮ್ಮೆ ಮಾಡಬೇಕು.

ಈಗ ಬಿತ್ತಬಹುದಾದ ಬೆಳೆಗಳು:  ಶೇಂಗಾ, ಸೋಯಾ ಅವರೆ ಬಿತ್ತನೆ ಬೇಗ ಮಾಡಬೇಕು. ತಡವಾದಂತೆ ಇಳುವರಿ ಕಡಿಮೆಯಾಗುತ್ತಾ ಹೋಗು ವುದು. ಅಲಸಂದೆ, ಹೆಸರು, ಉದ್ದು ಇವುಗಳ ಬಿತ್ತನೆ ಯನ್ನು ಡಿಸೆಂಬರ್ ಅಂತ್ಯದವರೆಗೆ ಮಾಡಬಹುದು.ಜೋಳ, ಗೋವಿನಜೋಳ ಬಿತ್ತನೆಯನ್ನು ಡಿಸೆಂಬರ್ ಎರಡನೇ ವಾರದೊಳಗೆ ಮಾಡಿ ಮುಗಿಸ ಬೇಕು. ನೀರಾವರಿ ಗೋಧಿ ಬಿತ್ತನೆಯನ್ನು ಈಗ ಮಾಡಬಹುದು.

ತೊಗರಿ ಮತ್ತು ಹತ್ತಿ ನಿರ್ವಹಣೆ:  ಎರಡೂ ಬೆಳೆಗಳಲ್ಲಿ ಕಾಯಿಕೊರಕ ಹತೋಟಿ ಕುರಿತು ಕ್ಲೋರಂಟ್ರಿನಿಲಿಪೋಲ್  @ 0.4 ಮಿಲೀ/ ಲೀ  (ಅಥವಾ ತತ್ಸಮಾನ ಪರಿಣಾಮ ನೀಡುವ ರಾಸಾಯನಿಕ) ಸಿಂಪಡಣೆ ಅತ್ಯಗತ್ಯ.

ಕಬ್ಬು ಬೆಳೆ ನಿರ್ವಹಣೆ:   ನಾಟಿ ಅಥವಾ ಲಾವಣಿ ಕಬ್ಬು ಬೆಳೆಗಿಂತ ಕೂಳೆ ಕಬ್ಬು ಬೆಳೆಯ ಇಳುವರಿ ಸಾಮಾನ್ಯವಾಗಿ ಕಡಿಮೆಯಾಗುತ್ತಿದೆ.

ಇದನ್ನು ಪರಿಹರಿಸಿದರೆ ಮಾತ್ರ, ಕೂಳೆ ಕಬ್ಬು ಸಾಗುವಳಿಯನ್ನು ಸಹನೀಯವಾಗಿಸಲು ಸಾಧ್ಯ.  ಈ ಕುರಿತು ಅನುಸರಿಸಬೇಕಾದ ಕೆಲ ಮಹತ್ವದ ಅಂಶಗಳನ್ನು  ಇಂತಿವೆ.

* ಮುಖ್ಯ ಬೆಳೆಯ ಕಟಾವಿನ ನಂತರ, ಟ್ರ್ಯಾಶ್ ಕಟ್ಟರ್ ಅಥವಾ ಟ್ರ್ಯಾಶ್ ಶ್ರೆಡ್ಡರ್ ಬಳಸಿ ರವುದಿಯನ್ನು ಪುಡಿ ಮಾಡಬೇಕು.

* ರೋಗ (ಕೆಂಪು ಕೊಳೆ, ಕಾಡಿಗೆ, ನಂಜು .. ರೋಗ) ಬಾಧಿತ ಬುಡಗಳನ್ನು ಕಿತ್ತು ತೆಗೆದು‌ ನಾಶಪಡಿಸಬೇಕು.

* ಕಬ್ಬು ಬೆಳೆಯ ಕೊನೆಯ ಸಾಲುಗಳಿಂದ ಆರೋಗ್ಯಯುತ ಬುಡಗಳನ್ನು ಪೂರ್ಣವಾಗಿ ಎತ್ತಿ ತೆಗೆದು ಗ್ಯಾಪ್ ಇರುವಲ್ಲಿ ನೆಡಬೇಕು.

* ಬೇರೆಡೆಯಿಂದ ಕಿತ್ತು ನೆಟ್ಟ ಬುಡಗಳಿಗೆ, ನೀರು, ಸಗಣಿ ರಾಡಿ ಸುರಿದು ಅವು ಚೆನ್ನಾಗಿ ಬೆಳೆಯಲು ಅವಕಾಶ ಮಾಡಬೇಕು.

* ಯಾವುದೇ ಕಾರಣಕ್ಕೂ ಗ್ಯಾಪ್ ತುಂಬಲು ಸಸಿ ಅಥವಾ ಕಬ್ಬಿನ ತುಂಡು ಬಳಸಬಾರದು.ಮರಿಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಯಾಗುವುದು.

* ಕೂಳೆ ಬೆಳೆಯ ಸಾಲುಗಳ ಪಕ್ಕ ನೇಗಿಲು ಸಾಲು ತೆಗೆದು ಸಾರಂಪೊ ಗೊಬ್ಬರ ಕೊಡಬೇಕು.

* ರವುದಿಯ ಮೇಲೆ ಜಿಪ್ಸಂ, ಜಿಂಕ್, ಬೊರಾನ್, (ಎಕರೆಗೆ ಕ್ರಮವಾಗಿ 200, 4, 1 ಕೆಜಿ ಪ್ರಮಾಣದಲ್ಲಿ,) ಕೊಡಬೇಕು.

* ಬೆಳೆಯ ಬೆಳವಣಿಗೆಗೆ  ಅನುಗುಣವಾಗಿ, ಎಡೆ ಹೊಡೆಯುವುದು, ಗೊಬ್ಬರ ಕೊಡುವುದು      (ನೇಗಿಲು ಸಾಲು ಮಾಡುವಾಗ 46:30:26,  ದಿನಗಳ ನಂತರ 40:00:24,  60 ದಿನಗಳ ನಂತರ 40:00:25 ಕೆಜಿ/ ಎ).

* ಬೆಳೆಯು 30 ದಿನಗಳದ್ದಾದ ನಂತರ, 13:0:45 + 19:19:19 + ಲಘು ಪೋಷಕಾಂಶ ಮಿಶ್ರಣ ಬೆರೆಸಿದ ದ್ರಾವಣವನ್ನು ಪ್ರತಿ 12-15 ದಿನಗಳಿಗೊಮ್ಮೆ ಸಿಂಪಡಣೆ ಮಾಡಬೇಕು.

* ಆರಂಭದ ಸುಳಿ ಕೊರಕ (ಸುಳಿ ಸಾಯು ವುದು) ಬಾಧೆ ಕಾಣಿಸಿದರೆ.. ಸತ್ತ ಸುಳಿಗಳನ್ನು ಕಿತ್ತು ತೆಗೆದು ನಾಶಪಡಿಸಬೇಕು. ಸುಳಿ ಮತ್ತು‌ ಬುಡ‌ ನೆನೆಯುವಂತೆ ಕ್ಲೋರಂಟ್ರಿ ನಿಲಿಪೋಲ್ ( @ 0.4 ಮಿಲೀ/ ಲೀ) ದ್ರಾವಣವನ್ನು ಸಿಂಪಡಿಸಬೇಕು ಮತ್ತು ಸುರಿಯಬೇಕು.

* ಹಸಿರೆಲೆ ಗೊಬ್ಬರ ಬೆಳೆ ಬೆಳೆದ ಜಮೀನಿನಲ್ಲಿ ಕಬ್ಬು ನಾಟಿ ಮಾಡಬಹುದು. ಆದಷ್ಟು ಬೇಗ ನಾಟಿ ಕಾರ್ಯ ಮಾಡಿದರೆ ಒಳ್ಳೆಯದು. ನಾಟಿಗೆ ಮುನ್ನ ಕಬ್ಬಿನ ತುಂಡುಗಳನ್ನು ಕ್ಲೋರ್ ಪೈರಿಫಾಸ್, ಕಾರ್ಬೆಂಡೆಜಿಂ, ಸುಣ್ಣದ ಉಪಚಾರ ಮಾಡುವ ಕುರಿತು ವಿಶೇಷಜ್ಞ ರ ಸಲಹೆ ಪಡೆಯಬೇಕು.

* ಎಡೆ ಹೊಡೆಯುವುದು, ಬೋದು ಏರಿಸುವ ಕಾರ್ಯವನ್ನು ಬೆಳೆಯು 3 ತಿಂಗಳದ್ದು ಆಗುವ ವರೆಗೆ ಕೈಗೊಳ್ಳಬೇಕು.

* ಕಾಲಕಾಲಕ್ಕೆ ತಜ್ಞರ ಅಥವಾ ಕಾರ್ಖಾನೆಯ ಕಬ್ಬು ಸಿಬ್ಬಂದಿ ಮೂಲಕ ಅರಿತು ಬೆಳೆಯ ನಿರ್ವಹಣೆ ಮಾಡಬೇಕು. 

– ಆರ್.ಜಿ. ಗೊಲ್ಲರ್, ದಾವಣಗೆರೆ.

error: Content is protected !!