ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಸವಂತಪ್ಪ
ದಾವಣಗೆರೆ, ನ.26- ಸಂವಿಧಾನದಿಂದ ಎಲ್ಲಾ ಸಮುದಾಯದವರಿಗೆ ನ್ಯಾಯ ಸಿಗಲಿದ್ದು, ಈ ಹಿನ್ನಲೆಯಲ್ಲಿ ವಿವಿಧತೆಯಲ್ಲಿಯೂ ಏಕತೆಯನ್ನು ಕಾಪಾಡಿಕೊಳ್ಳಲಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ. ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರವು ಜಾತ್ಯತೀತ, ಸಾಮರಸ್ಯ ದೇಶವಾಗಲು ಸಂವಿಧಾನದಡಿ ಆಡಳಿತ ನಡೆಸಿ ದಾಗ ಮಾತ್ರ ಸಾಧ್ಯವಾಗಲಿದೆ. ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ವಾಚಿಸಲಾಗುತ್ತಿದೆ. ಸಂವಿಧಾನ ಪೀಠಿಕೆ ಓದಿದರೆ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬಹುದಾಗಿದೆ ಎಂದರು.
ಎಲ್ಲಾ ಧರ್ಮಗಳ ಮೇರು ಗ್ರಂಥವಾಗಿದ್ದು ಸಮಾಜದಲ್ಲಿ ಶಾಂತಿ ಇರಬೇಕೆಂದರೆ ಸಂವಿಧಾನದ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ. ಅಂತಹ ಸಂವಿಧಾನವನ್ನು ಬರೆದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಾಗಿದ್ದು, ಅವರ ಅನುಯಾಯಿಗಳಾದವರು ಎಂದಿಗೂ ಭ್ರಷ್ಟರಾಗದೇ ಪ್ರಾಮಾಣಿಕರಾಗಿರಬೇಕು ಎಂದರು. ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಲು ದಾರಿದೀಪವಾಗಿದೆ. ದೂರದೃಷ್ಟಿ ಹೊಂದಿದ್ದ ನಮ್ಮ ಸಂವಿಧಾನದ ಶಿಲ್ಪಿಗಳು ಭಾರತದ ರಾಷ್ಟ್ರೀಯತೆಯ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದರು ಎಂಬುದನ್ನು ಇದು ತೋರಿಸುತ್ತದೆ. ಸಂವಿಧಾನದ ಮೂಲಕ ವಿಶ್ವದ ಅತಿ ದೊಡ್ಡ ಮತ್ತು ಯಶಸ್ವಿ ಪ್ರಜಾಪ್ರಭುತ್ವ ಎಂಬ ಗೌರವ ನಮಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್ ಕೆ ಮಾತನಾಡಿ. ಸಂವಿಧಾನ ಇಲ್ಲದೆ ದೇಶ ಮುನ್ನಡೆಯಲು ಅಸಾಧ್ಯ, ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶ-ವಿದೇಶಗಳಿಗೆ ಹೋಗಿ ಓದಿಕೊಂಡು ನಮಗೆ ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಅವರು ಎಲ್ಲಾ ಧರ್ಮಗಳ ಒಳಿತಿಗಾಗಿ ಸಂವಿಧಾನವನ್ನು ಬರೆದಿದ್ದಾರೆ ಎಂದು ತಿಳಿಸಿದರು.
ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವಂತಹ ಸಂವಿಧಾನ ಕಾರಣ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಅನೇಕ ಹೋರಾಟಗಳ ಮೂಲಕ ದೇಶ ಸ್ವಾತಂತ್ರ್ಯ ಹೊಂದಿತು. ಈ ಅವಧಿಯಲ್ಲಿ ಬ್ರಿಟಿಷರು ಅನೇಕ ಕಾನೂನು, ಕಾಯಿದೆಗಳನ್ನು ಜಾರಿಗೆ ತಂದರು. ಜಾತ್ಯತೀತ ದೇಶದಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವನ್ನು ಡಾ; ಬಿ.ಆರ್.ಅಂಬೇಡ್ಕರ್ ರವರು ಬರೆದಿದಿದ್ದು ಪ್ರಪಂಚದಲ್ಲಿ ಮಾದರಿಯಾಗಿದೆ ಎಂದರು.
ನಿವೃತ್ತ ಕೆ.ಎ.ಎಸ್ ಅಧಿಕಾರಿ ರುದ್ರಪ್ಪ ಹನಗವಾಡಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾದ ಪ್ರೊ.ಮಲ್ಲಿಕಾರ್ಜುನ್ ಆರ್ ಹಲಸಂಗಿ ಉಪನ್ಯಾಸ ನೀಡಿದರು.
ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ್, ಆಯುಕ್ತರಾದ ರೇಣುಕಾ, ಸದಸ್ಯರಾದ ಮಂಜುನಾಥ ಗಡಿಗುಡಾಳ್, ಪಾಲಿಕೆ ಸದಸ್ಯರಾದ ಸವಿತಾ ಹುಲ್ಲುಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಮೀನಾಕ್ಷಿ ಜಗದೀಶ್, ಗೋಣಪ್ಪ, ಆಶಾ ಉಮೇಶ್, ನಿವೃತ್ತ ಪ್ರಾಧ್ಯಾಪಕರಾದ ಎ.ಬಿ.ರಾಮಚಂದ್ರಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.