ಜಗಳೂರು, ನ.25- ಬೆಳಗಾವಿ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ 1924ನೇ ಇಸ್ವಿ ಡಿ.25 ರಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸವಿನೆನಪಿಗಾಗಿ ರಾಜ್ಯಾದ್ಯಂತ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ 100 ಗಾಂಧಿ ಭವನಗಳನ್ನು ನಿರ್ಮಿಸಲಾಗುವುದು. ಈ ಹಿನ್ನೆಲೆಯಲ್ಲಿ ಪಟ್ಟಣದ ಬೃಂದಾವನ ಲೇಔಟ್ ನಲ್ಲಿ ನಿವೇಶನ ಗುರುತಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಜನಸಂಪರ್ಕ ಕಛೇರಿ ಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೊರತುಪಡಿಸಿದರೆ 6 ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಕಛೇರಿಗಳಿಲ್ಲ. ಆದ್ದರಿಂದ ಹೊನ್ನಾಳಿ, ಚನ್ನಗಿರಿ, ಜಗಳೂರು ತಾಲ್ಲೂಕುಗಳಲ್ಲಿ ನಿವೇಶನ ನಿಗದಿಯಾಗಿವೆ. ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ, ವರಿಷ್ಠರು ನನ್ನನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ ಎಂದರು.
ಡಿ.25ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವರಿಷ್ಠರು ನೂರು ಗಾಂಧಿ ಭವನಗಳ ಶಂಕುಸ್ಥಾಪನೆಗೆ ಚಾಲನೆ ನೀಡಲಿದ್ದಾರೆ. ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಟ್ರಸ್ಟ್ ಗಳ ಮೂಲಕ ಹಣ ವಿನಿಯೋಗಿಸಿ ಸುಸಜ್ಜಿತ ಕಟ್ಟಡ ಹಾಗೂ ಆಯಾ ಸ್ಥಳೀಯ ನಗರಾಡಳಿತ ಸಂಸ್ಥೆಯಿಂದ ಸಿಎ ನಿವೇಶನ ಖರೀದಿಸಲಾಗುವುದು. ಇದಕ್ಕೆ ಸ್ಥಳೀಯ ಶಾಸಕರು ಸಹಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಜಗಳೂರಿನಲ್ಲಿ ಗಾಂಧಿಭವನ ನಿರ್ಮಾಣಕ್ಕೆ ನಿವೇಶನ ನಿಗದಿಪಡಿಸಿದ್ದು, ಭವನ ನಿರ್ಮಾಣ ಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ದಾವಣಗೆರೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ದ್ಯಾಮಣ್ಣ, ಮುಖಂಡರಾದ ಹೊನ್ನಮರಡಿ ಕೃಷ್ಣಪ್ಪ, ತಿಪ್ಪೇಸ್ವಾಮಿ ಗೌಡ, ಚಿತ್ತಪ್ಪ, ಜೀವಣ್ಣ, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಇದ್ದರು.