ಮಹಿಷಿ ವರದಿಯಿಂದ ಕನ್ನಡಿಗರಿಗೆ ಪೂರ್ಣ ಪ್ರಮಾಣದ ಉದ್ಯೋಗ

ಮಹಿಷಿ ವರದಿಯಿಂದ ಕನ್ನಡಿಗರಿಗೆ ಪೂರ್ಣ ಪ್ರಮಾಣದ ಉದ್ಯೋಗ

ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ

ದಾವಣಗೆರೆ, ನ. 24- ಕರ್ನಾಟಕದಲ್ಲಿ ಕನ್ನಡ ಉಳಿಸಿ, ಬೆಳೆಸಿ, ರಕ್ಷಿಸುವ ಜವಾಬ್ದಾರಿ ಎಲ್ಲಾ ಕನ್ನಡಿಗರ ಮೇಲಿದೆ. ಸರೋಜಿನಿ  ಮಹಿಷಿ ವರದಿಯನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸಿ, ರಕ್ಷಣೆ ಮಾಡಿ ಎಂಬ ನಿರಂತರ ಕೂಗಿಗೆ ತಡೆ ನೀಡಿದಂತಾಗುತ್ತದೆ ಮತ್ತು ಕನ್ನಡಿಗರಿಗೆ ಸಂಪೂರ್ಣ ಉದ್ಯೋಗ ದೊರಕಲು ಸಾಧ್ಯವಾಗುತ್ತದೆ ಎಂದು ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ 69 ನೇ ಕರ್ನಾಟಕ ರಾಜ್ಯೋತ್ಸವ, ಕನ್ನಡ ಹಬ್ಬ, ಹಾಸ್ಯ ಸಂಜೆ ಹಾಗೂ ವಿಶೇಷ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ರಾಜ್ಯದಲ್ಲಿರುವ ಕನ್ನಡ ಪರ ಸಂಘಟನೆಗಳು ಸರೋಜಿನಿ ಮಹಿಷಿ ವರದಿ ಜಾರಿಗೆ ಹೋರಾಟ ಮಾಡುವ ಮೂಲಕ ಸರ್ಕಾರದ ಕಣ್ತೆರೆಸಬೇಕಾಗಿದೆ. ವರದಿ ಜಾರಿಯಿಂದ ಪೂರ್ಣ ಪ್ರಮಾಣದ ಉದ್ಯೋಗ ಕನ್ನಡಿಗರಿಗೇ ಸಿಗುತ್ತದೆ. ಆಂಗ್ಲಭಾಷಾ ಮೋಹ ಕೂಡ ಕಡಿಮೆಯಾಗಲು ಸಾಧ್ಯ ಎಂದರು.

`ನಮ್ಮ ನಾಡು- ನಮ್ಮ ನುಡಿ’ ಕುರಿತು ಉಪನ್ಯಾಸ ನೀಡಿದ ಸುಣಕಲ್ ಬಿದರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಹೊನ್ನಪ್ಪ ಹೊನ್ನಪ್ಪನವರ್ ಅವರು, ಕನ್ನಡ ಭಾಷೆ ವಿಶ್ವದ ಅತ್ಯಂತ ಮೂರನೇ ಪ್ರಾಚೀನ ಭಾಷೆಯಾಗಿದೆ. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ಕನ್ನಡಕ್ಕೆ ದುಸ್ಥಿತಿ ಬಂದಿರುವುದು ವಿಷಾದದ ಸಂಗತಿ ಎಂದರು.

`ಕನ್ನಡಕ್ಕೆ ಇರಲಿ ಶ್ರೀರಕ್ಷೆ, ಇಂಗ್ಲಿಷ್ ಪಾದರಕ್ಷೆಯಾಗಿರಲಿ’ ಎಂದು ಕವಿಯೊಬ್ಬರು ಹೇಳಿದ್ದನ್ನು ಉಲ್ಲೇಖಿಸಿದ ಅವರು, ಬಹಳಷ್ಟು ಪದವಿ ವಿದ್ಯಾರ್ಥಿ ಗಳಿಗೆ ಕನ್ನಡ ಭಾಷಾ ಬರವಣಿಗೆ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.

ಇನ್ನೂ ಹತ್ತು ವರ್ಷಗಳು ಕಳೆದರೆ ಕನ್ನಡ ಶಾಲೆಗಳು ಸಂಪೂರ್ಣವಾಗಿ ಮುಚ್ಚುವ ಹಂತ ತಲುಪಿದರೂ ಅಚ್ಚರಿಪಡಬೇಕಿಲ್ಲ. ಮಾತೃಭಾಷೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದಷ್ಟು ಅನ್ಯ ಭಾಷೆಗಳಲ್ಲಿ ಸಾಧ್ಯವಿಲ್ಲ. ಕನ್ನಡದ ಬಗೆಗಿನ ಮೇಲಿನ ಪ್ರೀತಿ ಬೆಳೆಸಿಕೊಳ್ಳಿ, ಮಕ್ಕಳಲ್ಲಿ ಕನ್ನಡ ಭಾಷೆಯ ಬೀಜವನ್ನು ಬಿತ್ತಿ ಎಂದು ಹೇಳಿದರು.

ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್‌.ಬಡದಾಳ್ ಮಾತನಾಡಿದರು. 

ದಾವಣಗೆರೆ ಜಿಲ್ಲೆಯಲ್ಲಿ ಕೊಮಾರನಹಳ್ಳಿ, ಸಂತೇಬೆನ್ನೂರು, ನೀರ್ಥಡಿ, ಬಾಗಳಿ, ಎಲೆಬೇತೂರು, ಅಣಜಿ ಸೇರಿದಂತೆ ಇಡೀ ದಾವಣಗೆರೆ ಜಿಲ್ಲೆ ಐತಿಹಾಸಿಕ ಮಹತ್ವವನ್ನು ಹೊಂದಿ ದೆ. ಜಿಲ್ಲಾಡಳಿತ ಜನರಿಗೆ ಜಿಲ್ಲೆಯ ಐತಿಹಾಸಿಕ ಸ್ಥಳಗಳ ದರ್ಶನ ಮಾಡಿ ಸುವ ಮೂಲಕ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿನ್ನೆಲೆಯನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ವಿಶ್ವ ಭಾಷೆಗಳಲ್ಲಿ ಕನ್ನಡ ಸಮೃದ್ಧ ಭಾಷೆಯಾಗಿದೆ. ವಿಶ್ವದ ನಾನಾ ಮೂಲೆಗಳಲ್ಲಿರುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷ ಸಂಭ್ರಮದಿಂದ ಆಚರಿಸುತ್ತಾರೆ. ನಾವು ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡದ ಋಣವನ್ನು ತೀರಿಸುವ ಕೆಲಸ ಮಾಡಬೇಕೆಂದರು.

ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್,  ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಎಸ್.ಜಿ. ಸೋಮಶೇಖರ್ , ಬಾಲ ಪ್ರತಿಭೆ ರಿತಾನ್ಯ, ಜಗಳೂರಿನ ಡಾ. ಅರವಿಂದನ್  ಕನ್ನಡ ನಾಡು, ನುಡಿ, ನೆಲ, ಜಲ, ಗಡಿ ಸಂರಕ್ಷಣೆ ಕುರಿತು ಮಾತನಾಡಿದರು.

ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಜಿ. ಅಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ನಮನ ಹಾಗೂ ಬಾಲ ಪ್ರತಿಭೆ ರಿತಾನ್ಯ, ನಿವೃತ್ತ ಶಿಕ್ಷಕಿ ಕಮಲಮ್ಮ ಅವರನ್ನು ಗೌರವಿಸಲಾಯಿತು.

ಕೆ. ಜೈಮುನಿ, ಕೆ.ಹೆಚ್. ರೇವಣಸಿದ್ಧಪ್ಪ, ಜಿ.ಹೆಚ್.ನಾಗರಾಜಪ್ಪ, ಎಸ್.ಮೋಹನ್, ಎಸ್. ಶ್ರೇಯಸ್, ಅವಿನಾಶ್ ವಿ. (ಅಭಿ), ನೌಷಿನ್ ತಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದುಷಿ ಸಂಗಿತ ರಾಘವೇಂದ್ರ ನಾಡಗೀತೆ ಹಾಡಿದರು. ಗಂಗಾಧರ್ ಬಿ.ಎಲ್. ನಿಟ್ಟೂರು ನಿರೂಪಿಸಿದರು. ಮಹಾಂತೇಶ್ ನಿಟ್ಟೂರು ಸ್ವಾಗತಿಸಿದರು. ಫ್ರೆಂಡ್ಸ್ ಆರ್ಕೆಸ್ಟ್ರಾ ತಂಡದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!