ಜಿಲ್ಲಾ ಶಿಶು ಕಲ್ಯಾಣ ಮಂಡಳಿಯ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಚಮನ್ ಸಾಬ್
ದಾವಣಗೆರೆ, ನ. 24- ಎಲ್ಲಾ ಧರ್ಮಗಳೂ ಮಾನವನ ಒಳಿತನ್ನೇ ಬಯಸುತ್ತವೆ. ಧರ್ಮ-ಧರ್ಮಗಳ ನಡುವೆ ವಿಶ್ವಾಸ ಬೆಳೆಯಬೇಕಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಆಶಿಸಿದರು.
ಜಿಲ್ಲಾ ಶಿಶು ಕಲ್ಯಾಣ ಮಂಡಳಿಯಿಂದ ನಗರದ ವನಿತಾ ಸಮಾಜದ ಶ್ರೀ ಸತ್ಯಸಾಯಿ ರಂಗ ಮಂದಿರದಲ್ಲಿ ಭಾನುವಾರ ಸಂಜೆ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಣದಲ್ಲೂ ಧರ್ಮ ಬೆರೆತು, ಇಂದು ಶಿಕ್ಷಣವೂ ಕಲುಷಿತವಾಗಿದೆ. ಧಾರ್ಮಿಕ ಮೂಲ ಭೂತವಾದಿಗಳು ಧರ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಧರ್ಮ-ಧರ್ಮಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ. ಇದಕ್ಕೆ ಜನರು ಕಿವಿಗೊಡಬಾರದು ಎಂದು ಹೇಳಿದರು.
ನೆಹರು ಅವರು ದೇಶಕ್ಕಾಗಿ 9 ವರ್ಷ ಜೈಲು ವಾಸ ಅನುಭವಿಸಿದರು. ಆದರೆ ಈಗ 9 ಗಂಟೆ ದೇಶಕ್ಕಾಗಿ ಸಮಯ ನೀಡದವರು ಸುಳ್ಳು ಹೇಳುತ್ತಾ ವಿಜೃಂಭಿಸುತ್ತಿದ್ದಾರೆ. ಜನರು ಇತಿಹಾಸ ಓದಬೇಕು. ಸತ್ಯವನ್ನು ಅರಿಯಬೇಕು ಎಂದರು.
ನಾಗಮ್ಮ ಕೇಶವಮೂರ್ತಿ ಹಾಗೂ ಸಿ.ಕೇಶವಮೂರ್ತಿ ಅವರ ಜೊತೆ ನನಗೆ ಒಡನಾಟವಿತ್ತು ಎಂದ ಚಮನ್ ಸಾಬ್, ಅವರು ಮಾಡಿದ ಸೇವೆಯನ್ನು ಇಂದು ನಾವೆಲ್ಲಾರೂ ನೆನೆಯುತ್ತೇವೆ. ಯಾರು ಸಮಾಜಕ್ಕಾಗಿ ತ್ಯಾಗ ಮಾಡುತ್ತಾರೋ, ಅವರನ್ನು ಇತಿಹಾಸ ಸ್ಮರಿಸುತ್ತದೆ. ಅದಕ್ಕೆ ಉದಾಹರಣೆ ನಾಗಮ್ಮ ಎಂದರು.
ನೆಹರು ಅವರು ಬರೆದಷ್ಟು ಪುಸ್ತಕಗಳನ್ನು ಯಾವ ರಾಜಕಾರಣಿಯೂ ಇದುವರೆಗೆ ಬರೆದಿಲ್ಲ. ಮುಂದೆಯೂ ಬರೆಯುವುದಿಲ್ಲ. ಕೇವಲ ನೆಹರೂ ಅವರ ಭಾವಚಿತ್ರಕ್ಕೆ ಹಾರ ಹಾಕಿ ಮಕ್ಕಳ ದಿನಾಚರಣೆ ಆಚರಿಸಿದರೆ ಸಾಲದು, ಅವರ ಪುಸ್ತಕಗಳನ್ನು ಓದುವ ಮೂಲಕ ನೆಹರೂ ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯಾ ನಂತರವೂ ದೇಶ ಅನೇಕ ಒಕ್ಕೂಟಗಳಾಗಿತ್ತು. ಅವುಗಳನ್ನೆಲ್ಲಾ ಒಗ್ಗೂಡಿಸಿದ ಕೀರ್ತಿ ನೆಹರೂ ಅವರದ್ದು. ದೇಶದಾದ್ಯಂತ ಉತ್ತಮ ರಸ್ತೆ, ಬ್ರಿಡ್ಜ್‌ಗಳು, ಕಾಲೇಜುಗಳನ್ನು ನಿರ್ಮಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ನೆಹರು ಕೊಂಡೊಯ್ದಿದ್ದರು ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿದ ಶೇ.80ರಷ್ಟು ಮಂದಿಯೇ ಇಂದು ಉತ್ತಮ ಹುದ್ದೆಗಳಲ್ಲಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಶ್ರಮ ವಹಿಸಿದರೆ ಭವಿಷ್ಯ ಉಜ್ವಲವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲೂ ಪಾಲ್ಗೊಳ್ಳ ಬೇಕು. ಆಸಕ್ತಿ ಇರುವ ಕ್ಷೇತ್ರದಲ್ಲಿ ಹೆಚ್ಚಿನ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ನಾಗಮ್ಮ ಕೇಶವಮೂರ್ತಿ ಅವರು ದಾವಣಗೆರೆ ಜಿಲ್ಲೆಯ ಮದರ್ ಥೆರೇಸಾ ಇದ್ದಂತೆ. 52 ಸಂಸ್ಥೆಗಳನ್ನು ಕಟ್ಟಿ ವಿವಿಧೆಡೆಯಿಂದ ಅನುದಾನ ತಂದು ಬೆಳೆಸಿದರು. ಆಡಿಟೋರಿಯಂ ನಿರ್ಮಿಸು ವುದು ಅವರ ನಾಗಮ್ಮ ಕೇಶವಮೂರ್ತಿ ಅವರ ಆಸೆ ಯಾಗಿತ್ತು. ಇದೀಗ ಅದರ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿರುವುದು ಶ್ಲ್ಯಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಯಶಸ್ವಿನಿ ಕೆ.ಪಿ. ಅವರಿಗೆ ವರ್ಷದ ಉತ್ತಮ ಪ್ರೌಢಶಾಲೆ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಷಾ ರಂಗನಾಥ್ ಅತಿಥಿಗಳನ್ನು ಸ್ವಾಗತಿಸಿದರು. ಸುನೀತಾ ವೀರನಾರಾಯಣ ಅತಿಥಿಗಳನ್ನು ಪರಿಚ ಯಿಸಿದರು. ಶೋಭಾ ರವಿ ಹಾಗೂ ನಾಗಶ್ರೀ ಬಹುಮಾನ ವಿತರಣೆ ನಡೆಸಿಕೊಟ್ಟರು. ಗಾಯತ್ರಿ ಜಗನ್ನಾಥ್ ನಿರೂಪಿಸಿದರೆ, ಪ್ರಭಾ ರವೀಂದ್ರ ವಂದಿಸಿದರು.