ಜಗಳೂರು: ಏತನೀರಾವರಿ ಯೋಜನೆಗಳು ಯಶಸ್ವಿಗೆ ತರಳಬಾಳು ಶ್ರೀ ಸಂತಸ
ಕೇಳದಿದ್ದರೂ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ಕೊಡದೆ, ಪ್ರತಿವರ್ಷ 60,000 ಕೋಟಿ ರೂ. ಅನುದಾನ ಮೀಸಲಿಟ್ಟು ನೀರಾವರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ತರಳಬಾಳು ಜಗದ್ಗುರುಗಳು
ಜಗಳೂರು, ನ.22- ಏತನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂಬ ವದಂತಿಗಳಿದ್ದವು. ಆದರೆ ಭರಮಸಾಗರ, ಜಗಳೂರು, ಸಾಸ್ವೇಹಳ್ಳಿ ಏತ ನೀರಾವರಿಗಳು ಸಾಕಾರಗೊಂಡು ಕೆರೆಗಳು ಕೋಡಿಬಿದ್ದಿರುವುದು ಏತನೀರಾವರಿ ಯೋಜನೆಗಳು ಯಶಸ್ವಿಗೊಂಡು ರಾಜ್ಯಕ್ಕೆ ಮಾದರಿಯಾಗಿವೆ ಎಂದು ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ಹಿರೇಅರಕೆರೆ, ಮುಷ್ಟಿಗರಹಳ್ಳಿ, ಗೋಡೆ, ಮರಿಕುಂಟೆ, ಅಸಗೋಡು ಕೆರೆಗಳಿಗೆ ಬಾಗೀನ ಅರ್ಪಿಸಿ ನಂತರ ಅಸಗೋಡು ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಡಳಿತ ಸರ್ಕಾರಗಳು ಜಾರಿಗೊಳಿ ಸುವ ಯಾವುದೇ ಯೋಜನೆಗಳು ಹಳ್ಳಿ ಜನರ ದುಡಿಮೆಗೆ ಪೂರಕವಾಗಿರಲಿ ಎಂದು ಸಲಹೆ ನೀಡಿದ ಶ್ರೀಗಳು, ಹಳ್ಳಿಜನರು ಮುಗ್ಧಮಕ್ಕಳಿದ್ದಂತೆ ಶಿಕ್ಷಣದ ಕೊರತೆಯಿದ್ದರೂ ಬುದ್ದಿಶಕ್ತಿ ಹೊಂದಿದ್ದಾರೆ. ಕೇಳದಿದ್ದರೂ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ಕೊಡದೆ, ಪ್ರತಿವರ್ಷ 60,000 ಕೋಟಿ ರೂ. ಅನುದಾನ ಮೀಸಲಿಟ್ಟು ನೀರಾವರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ನೀರು ಕೊಡಿ. 5ವರ್ಷ ಗಳಲ್ಲಿ ರಾಜ್ಯವೇ ಸಂಪದ್ಭರಿತವಾಗುತ್ತದೆ ಎಂದು ಹೇಳಿದರು.
ಕೆರೆಗಳು ಭರ್ತಿಯಾಗಿ ಜಗಳೂರು ಜೌಗೂರಾಗಿ ಪರಿವರ್ತಿತಗೊಳ್ಳುತ್ತಿದೆ. ರೈತರು ಜಮೀನಿನಲ್ಲಿ ಮುತ್ತು ರತ್ನದಂತಹ ಬೆಳೆಗಳನ್ನು ಬೆಳೆಯುವ ಕಾಲ ಸನ್ನಿಹಿತವಾಗಲಿದೆ. ಶಾಲೆಗಳಲ್ಲಿ ಮಕ್ಕಳಿಗೆ ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, 57 ಕೆರೆ ತುಂಬಿಸುವ ಯೋಜನೆ, ತರಳಬಾಳು ಭವನ, ತಾಲ್ಲೂಕಿನಲ್ಲಿ ನಡೆದ ಎರಡು ತರಳಬಾಳು ಹುಣ್ಣಿಮೆಯ ಕುರುಹುಗಳಾಗಿವೆ. ನೀರಾವರಿ ಯೋಜನೆ ಸಾಕಾರಗೊಳ್ಳಲು ಮೂರು ಜನ ಶಾಸಕರು, ಮೂರು ಜನ ಮುಖ್ಯಮಂತ್ರಿಗಳು ಬದಲಾದರು. ಆದರೆ ಸಿರಿಗೆರೆ ಶ್ರೀಗಳು ಮಾತ್ರ ಒಬ್ಬರೇ ಆಗಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಮಾಜಿ ಶಾಸಕ. ಎಸ್.ವಿ.ರಾಮಚಂದ್ರ ಮಾತನಾಡಿ, ಬರದನಾಡಿನಲ್ಲಿ ಕುಡಿಯುವ ನೀರಿಗೂ ಆಹಾಕಾರವಿರುವುದನ್ನು ಕಂಡು ಹೆಣ್ಣು ಕೊಡಲು ಮುಂದಾಗುತ್ತಿರಲಿಲ್ಲ .ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಎಲ್ಲಾ ಕಾನೂನು ತೊಡಕುಗಳನ್ನು ಇತ್ಯರ್ಥಪಡಿಸಿದ ಪರಿಣಾಮ ತ್ವರಿತವಾಗಿ ಕೆರೆಗಳು ಭರ್ತಿಯಾಗಿವೆ. ಇದೀಗ ಹೆಣ್ಣು ಕೊಡಲು ತುದಿಗಾಲಲ್ಲಿ ನಿಂತಿರುವುದು ಸಂತಸದ ಸಂಗತಿ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನನ್ನ ಆಡಳಿತಾವಧಿಯಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಸಿರಿಗೆರೆ ಶ್ರೀಗಳ ಸಂಕಲ್ಪದಂತೆ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ನೀಡಿದ್ದರು. ಭರಮಸಾಗರ, ಜಗಳೂರು ಅವಳಿ ನೀರಾವರಿ ಯೋಜನೆಗಳ ಸಾಕಾರಕ್ಕೆ ಕಾಳಜಿ ವಹಿಸಿದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ,ಕುಮಾರಸ್ವಾಮಿ ಅವರಿಗೆ ಅಬಾರಿಯಾಗೋಣ ಎಂದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಜಿ.ಪಂ.ಮಾಜಿ ಸದಸ್ಯರಾದ ಕೆ.ಪಿ.ಪಾಲಯ್ಯ, ಎಸ್.ಕೆ.ಮಂಜುನಾಥ್, ಎಚ್.ಸಿ.ಮಹೇಶ್, ಡಾ.ಟಿ.ಜಿ. ರವಿಕುಮಾರ್, ಗ್ರಾ.ಪಂ.ಅಧ್ಯಕ್ಷೆ ನಾಗಮ್ಮ ಚನ್ನಬಸಪ್ಪ, ಉಪಾಧ್ಯಕ್ಷೆ ಶಕುಂತಲಾತಿಮ್ಮಪ್ಪ, ಮುಖಂಡರಾದ ರವಿಕುಮಾರ್, ಗುಡದಯ್ಯ, ಶರಣಯ್ಯ, ಬಸವರಾಜಪ್ಪ, ಶಂಭುಲಿಂಗಪ್ಪ, ಸಿದ್ದಪ್ಪ ಸೇರಿದಂತೆ ನೆರೆಹೊರೆಯ ಗ್ರಾಮಗಳ ಭಕ್ತರು ಇದ್ದರು.