ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ
ದಾವಣಗೆರೆ, ನ.22- ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ತಿಂಗಳಿಗೇ ಸೀಮಿತ ವಾಗದೇ ವರ್ಷ ವಿಡೀ ಆಚರಿಸುವಂತಾಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಬರಲು ದಾವಣಗೆರೆ ಜಿಲ್ಲೆ ಕೂಡ ಪ್ರಮುಖ ಕಾರಣವಾಗಿದೆ. ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಜಿಲ್ಲೆಯ ಜನರು ಮಹತ್ತರ ಪಾತ್ರ ವಹಿಸಿದ್ದಾರೆಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದ ಶಿವಯೋಗಾಶ್ರಮದ ಆವರಣದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ 69 ನೇ ಕರ್ನಾಟಕ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಜನರು ಕನ್ನಡದ ಬಗ್ಗೆ ಅತೀವ ಭಾಷಾಭಿಮಾನ ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಹ ಕನ್ನಡ ನಾಡು, ನುಡಿ, ನೆಲ, ಜಲ, ಗಡಿ ರಕ್ಷಣೆಯಲ್ಲಿ ಬಿಗಿ ಕ್ರಮ ಕೈಗೊಂಡಿದೆ. ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಅನುಷ್ಠಾನಗೊಳ್ಳ ಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಸಿಎಂ ಸಿದ್ದರಾಮಯ್ಯ ಮಾಡಿರುವುದು ಅವರಲ್ಲಿನ ಕನ್ನಡ ಭಾಷೆ ಬಗೆಗಿನ ಕಾಳಜಿ, ಪ್ರೀತಿ, ಅಭಿಮಾನವನ್ನು ತೋರಿಸುತ್ತದೆ ಎಂದರು.
ಹೃದಯದಿಂದ ಕೆಲಸ ಮಾಡಿದಾಗ ಮಾತ್ರ ಅಂತಹ ಸಂಘಟನೆ, ಕಾರ್ಯಕ್ಕೆ ಬೆಲೆ ಬರುತ್ತದೆ. ನೊಂದ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಬೆಂಗಳೂರಿಗಿಂತ ದಾವಣಗೆರೆ ಕರ್ನಾಟಕದ ರಾಜಧಾನಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಹಿಂದಿನ ಹಿರಿಯರ ದೂರದೃಷ್ಟಿಯ ಕೊರತೆಯಿಂದಾಗಿ ಅವಕಾಶ ವಂಚಿತವಾಗಿದೆ. ಈಗಲೂ ಸರ್ಕಾರ ಈ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದರು.
ಪರಭಾಷಿಗರಿಂದ ತುಂಬಿರುವ ಬೆಂಗಳೂರಿನಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರು ಸುರಕ್ಷಿತವಾಗಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳನ್ನು ಕೇಂದ್ರವನ್ನಾಗಿಟ್ಟುಕೊಂಡು ನೂತನ ರಾಜಧಾನಿ ಯನ್ನಾಗಿ ಮಾಡುವಂತೆ ಆಗ್ರಹಪಡಿಸಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿದರು. ಜಿಲ್ಲಾಧಿಕಾರಿ ಜಿ.ಎನ್. ಗಂಗಾಧರಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ಕೆಲಸ ತುರ್ತು ಆಗಬೇಕಿದೆ. ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದರೂ ಅವರಿಗೆ ಕನ್ನಡ ನಾಡು, ನುಡಿ, ನೆಲ, ಜಲ, ಗಡಿ ರಕ್ಷಣೆ ಬಗ್ಗೆ ತಿಳಿಸಿಕೊಡಬೇಕೆಂದು ಕರೆ ನೀಡಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ವಕೀಲ ರಜ್ವಿಖಾನ್ ಮಾತನಾಡಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್, ಮಾಜಿ ಮೇಯರ್ ಎಂ.ಎಸ್. ವಿಠಲ್, ಮಾಜಿ ಉಪ ಮೇಯರ್ ಅಬ್ದುಲ್ ಲತೀಫ್, ಹಾಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಹೆಚ್.ಜೆ.ಮೈನುದ್ದೀನ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಗುರುಕುಲ ವಿದ್ಯಾಸಂಸ್ಥೆಯ ಆರ್. ಅಬ್ದುಲ್, ಬಿ.ಎನ್.ಇರ್ಷಾದ್ ಅಹಮದ್, ಸಂತೋಷ್ ದೊಡ್ಡಮನಿ, ಬಿ.ಇ. ದಯಾನಂದ್, ಅಮ್ಜದ್, ಮೆಹಬೂಬ್, ಸಿದ್ದೇಶ್, ಭೀಮಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ಪತ್ರಕರ್ತ ರಮೇಶ್ ಜಹಗೀರ್‌ದಾರ್, ಜೆ.ಎಸ್. ವೀರೇಶ್, ಶಿವರಾಜ ಈಳಿಗೇರ್, ಎ. ಪ್ರಭಾ ಕರ್, ಡಾ. ಅಶೋಕ ಕುಮಾರ್ ಪಾಳೇದ, ಬಲ್ಲೂರು ರವಿಕುಮಾರ್, ಹೆಚ್. ಮಲ್ಲೇಶ್, ಹೊಸಹಳ್ಳಿ ಮಲ್ಲೇಶ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಕೆ.ಎನ್. ವೆಂಕಟೇಶ್, ಓಂಕಾರಯ್ಯ ತವನಿಧಿ, ಪಿ.ಬಿ. ರವಿಕುಮಾರ್, ಡಾ. ಅನಿಸ್, ಫಾರೂಖ್ ಹಷ್ಕಿ, ಎಸ್. ಪುಣ್ಯಶ್ರೀ, ಸುಜನ್ ಆಚಾರ್ಯ, ಪಿ.ಬಸವರಾಜಪ್ಪ, ಎಂ.ಡಿ. ಮುಲ್ಲಾ, ಸುರೇಶ್ ಕುಮಾರ್ ಜೈನ್ ಮತ್ತಿತರರನ್ನು ಗೌರವಿಸಲಾಯಿತು.