`ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ತಿಪ್ಪೇಸ್ವಾಮಿ
ದಾವಣಗೆರೆ, ನ.21- ವಿದ್ಯಾರ್ಥಿಗಳು ಮನಸ್ಸಿನ ಉಲ್ಲಾಸಕ್ಕೆ ಪಠ್ಯದ ಜತೆಗೆ ಸಾಹಿತ್ಯಿಕ ಪುಸ್ತಕ ಓದಬೇಕು ಎಂದು ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.
ಗ್ರಂಥಾಲಯ ಇಲಾಖೆ ಮತ್ತು ಮಾಹಿತಿ ಕೇಂದ್ರ ಹಾಗೂ ಕಾಲೇಜಿನ ಅಭಿರುಚಿ ಓದುಗರ ವೇದಿಕೆ ಸಹಯೋಗದಲ್ಲಿ ನಗರದ ಎವಿಕೆ ಕಾಲೇಜು ಆವರಣದಲ್ಲಿ ಗ್ರಂಥಾಲಯ ಸಪ್ತಾಹ ಅಂಗವಾಗಿ ಬುಧವಾರ ಏರ್ಪಡಿಸಿದ್ದ `ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪುಸ್ತಕ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಹಾಗೂ ಓದುಗರನ್ನು ಗ್ರಂಥಾಲಯಗಳತ್ತ ಸೆಳೆಯಬೇಕೆಂಬ ಸದುದ್ದೇಶದೊಂದಿಗೆ ಪ್ರತಿ ವರ್ಷ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಅಲ್ಲದೇ, ಪುಸ್ತಕದ ಟೈಟಲ್ ನೋಡಿ, ಅದನ್ನು ಓದಬೇಕೆಂಬ ಅಭಿರುಚಿ ಬೆಳೆಯಲಿ ಎಂಬ ಆಶಯದೊಂದಿಗೆ ಪುಸ್ತಕ ಪ್ರದರ್ಶನ ಸಹ ಆಯೋಜಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲೂ ಗ್ರಂಥಾಲಯಗಳಿದ್ದು, ಓದುಗರು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳು ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಡಿವೈಎಸ್ಪಿ ಟಿ.ಎಸ್. ಮುರುಗಣ್ಣವರ್ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯದಕ್ಕೆ ಮಾತ್ರ ಮೊಬೈಲ್ ಬಳಸಬೇಕು. ಕೆಟ್ಟದ್ದರ ಕಡೆ ಮನಸ್ಸು ಕೊಡಬಾರದು ಎಂದರು.
2022-23ರ ಸಾಲಿನಲ್ಲಿ ದೇಶದಲ್ಲಿ ಸೈಬರ್ ಕ್ರೈಂ ಮೂಲಕ 72ಸಾವಿರ ಕೋಟಿ ರೂ. ಮೊತ್ತ ವಂಚಿಸಲಾಗಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ನಿಮ್ಮ ಗಮನಕ್ಕೆ ಬಾರದೆಯೇ ಬ್ಯಾಂಕ್ ಖಾತೆಯಿಂದ ಹಣ ಕಟಾವಣೆಯಾಗಿದ್ದರೆ, 1930 ಸಹಾಯ ವಾಣಿಗೆ ಕರೆ ಮಾಡಿ ದೂರು ನೋಂದಾಯಿಸಿದ ಬಳಿಕ ಬ್ಯಾಂಕ್‌ಗೆ ಹೋಗಿ ನಿಮ್ಮ ಖಾತೆಯನ್ನು ಫ್ರೀಜ್ ಮಾಡಿಸಬೇಕು ಎಂದರು.
ನಿಮಗೆ ಆಮೀಷ ತೋರಿಸುವ, ಬೆದರಿಸುವ ಕರೆ ಬಂದರೆ, ಸ್ಥಳೀಯ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದು ಹೇಳಿವುದಾಗಿ ಹೇಳಿದರೆ, ವಂಚಕರು ನಿಮ್ಮ ಸಹವಾಸಕ್ಕೆ ಬರುವುದಿಲ್ಲ ಎಂದು ಮುರುಗಣ್ಣವರ್ ತಿಳಿಸಿದರು.
ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ್, ಐಕ್ಯೂಎಸಿ ಸಂಯೋಜಕ ಆರ್.ಆರ್. ಶಿವಕುಮಾರ್ ಇದ್ದರು. ಹಿರಿಯ ವಿದ್ಯಾರ್ಥಿನಿ ಮಮತಾ ಸೈಬರ್ ಕ್ರೈಂನಲ್ಲಿ ತಾನು ವಂಚನೆಗೊಳಗಾಗಿ ಬಳಿಕ ನ್ಯಾಯ ಪಡೆದ ಬಗೆಯನ್ನು ವಿವರಿಸಿದರು. ಗ್ರಂಥಪಾಲಕ ಸತೀಶ್ ಪ್ರಾಸ್ತಾವಿಕ ಮಾತನಾಡಿದರು.