ಪಾಲಿಕೆ ಸಾಮಾನ್ಯ ಸಭೆಯಲ್ಲಿ `ಗುಂಡಿ’ ವಾಕ್ಸಮರ, ಹಂದಿ-ನಾಯಿ ಹಾವಳಿ ಪ್ರಸ್ತಾಪ
ದಾವಣಗೆರೆ, ನ.21- ನಗರದ ರಸ್ತೆಗಳಲ್ಲಿರುವ ಗುಂಡಿಗಳ ಬಗ್ಗೆ ಗುರುವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಚರ್ಚೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರಕ್ಕೂ ಕಾರಣವಾಯಿತು.
ಸಭೆಯ ಆರಂಭದಲ್ಲಿಯೇ ವಿಪಕ್ಷ ನಾಯಕ ಕೆ.ಪ್ರಸನ್ನ ಕುಮಾರ್ ಶೂನ್ಯ ಅವಧಿಯಲ್ಲಿ ಸಮಸ್ಯೆಗಳ ಕುರಿತು ಪ್ರಸ್ತಾಪಿಸಲು ಅನುಮತಿ ಕೇಳಿದರು. ಮೇಯರ್ ಒಪ್ಪಿಗೆ ನೀಡುತ್ತಿದ್ದಂತೆ, ರಸ್ತೆಯಲ್ಲಿ ಗುಂಡಿ ಕುರಿತು `ಜನತಾವಾಣಿ’ಯಲ್ಲಿ ಪ್ರಕಟವಾಗಿದ್ದ ಸುದ್ದಿ ಪ್ರದರ್ಶಿಸುತ್ತಾ, ಮಾಧ್ಯಮಗಳಲ್ಲಿ ಗುಂಡಿಗಳ ಬಗ್ಗೆ ವರದಿಯಾಗಿ ತಿಂಗಳಾದರೂ ಗುಂಡಿ ಮುಚ್ಚಿಸಿಲ್ಲ ಎಂದು ಆರೋಪಿಸಿದರು.
ಕಳೆದ ಸಾಮಾನ್ಯ ಸಭೆಯಲ್ಲಿಯೇ 20 ದಿನಗಳಲ್ಲಿ ಗುಂಡಿಗಳನ್ನು ಮುಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ತಿಂಗಳಾದರೂ ಗುಂಡಿಗಳು ಹಾಗೆಯೇ ಇವೆ ಎಂದಾಗ, ಇದಕ್ಕೆ ಸದಸ್ಯರಾದ ಕೆ.ಎಂ. ವೀರೇಶ್, ಶಿವಾನಂದ ಪಾಟೀಲ್ ದನಿಗೂಡಿಸಿದರು.
ಪಾಲಿಕೆ ಸದಸ್ಯ ಎ.ನಾಗರಾಜ್, ಪಾಲಿಕೆ ವ್ಯಾಪ್ತಿಯಲ್ಲಿನ ಬಹುತೇಕ ಗುಂಡಿಗಳನ್ನು ಮುಚ್ಚಿಸಲಾಗಿದೆ. ಕೆಲವು ರಸ್ತೆಗಳು ಪಿಡಬ್ಲ್ಯೂಡಿ ವ್ಯಾಪ್ತಿಯಲ್ಲಿವೆ. ಪ್ರಚಾರ ಪಡೆಯಲು ಪತ್ರಿಕೆ ಹಿಡಿದು ಆರೋಪಿಸುವುದು ಸರಿಯಲ್ಲ ಎಂದರು. ಗಡಿಗುಡಾಳ್ ಮಂಜುನಾಥ್, ಜಲಸಿರಿ ಕಾಮಗಾರಿ ನಡೆಯುತ್ತಿರುವುದರಿಂದ ಹಲವು ರಸ್ತೆಗಳಲ್ಲಿ ಗುಂಡಿಗಳಾಗುತ್ತಿವೆ ಎಂದಾಗ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಪಾಲಿಕೆ ಅಭಿಯಂತರರು ಮಾತನಾಡಿ, ಪತ್ರಿಕೆಯಲ್ಲಿ ಬಂದ ಗುಂಡಿ ರಸ್ತೆಗಳಲ್ಲಿ ಅನೇಕ ರಸ್ತೆಗಳು ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ್ದು ಅವರಿಗೆ ಲಿಖಿತವಾಗಿ ತಿಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಕರೆದು ಗುಂಡಿ ಮುಚ್ಚಿಸಲು ಆರಂಭಿಸಿದಾಗ ಮತ್ತೆ ಮಳೆ ಬಂತು. ನಂತರ ಗುತ್ತಿಗೆದಾರ ಅಕಾಲಿಕ ಮರಣ ಹೊಂದಿದ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ ಎಂದರು. ಮೇಯರ್ ಚಮನ್ ಸಾಬ್ ಮಾತನಾಡಿ, ವಾರದೊಳಗೆ ಗುಂಡಿ ಮುಚ್ಚಿಸಲು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ವಾರ್ಡ್ ರೌಂಡ್ಸ್ ಮತ್ತೆ ಆರಂಭ: ಚಮನ್ ಸಾಬ್
ವಾರ್ಡ್ಗಳಿಗೆ ಭೇಟಿ ನೀಡಿದಾಗ ಜನರ ಸಮಸ್ಯೆ ಬಗೆಹರಿಸಲು ನಿಮ್ಮಿಂದ ಆಗುವುದಾದರೆ ಮಾತ್ರ ವಾರ್ಡ್ಗಳಿಗೆ ಭೇಟಿ ಕೊಡಿ. ಇಲ್ಲದಿದ್ದರೆ ನಿಮ್ಮ ಗೌರವ ಕಡಿಮೆಯಾಗುತ್ತದೆ ಎಂದು ಪಾಲಿಕೆ ಮಾಜಿ ಮೇಯರ್ ವಿನಾಯಕ ಪೈಲ್ವಾನ್, ಮೇಯರ್ ಚಮನ್ ಸಾಬ್ ಅವರನ್ನುದ್ದೇಶಿಸಿ ಹೇಳಿದರು.
ಪಾಲಿಕೆಯಲ್ಲಿ ದಪ್ಪ ಚರ್ಮದ ಅಧಿಕಾರಿಗಳಿದ್ದಾರೆ. ಅವರಿಗೆ ಜನರ ಸಮಸ್ಯೆಗಳು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿಯೇ ಅಧಿಕಾರಿಗಳೊಂದಿಗೆ ವಾರ್ಡ್ ಗಳಿಗೆ ಭೇಟಿ ನೀಡಲಾಗುತ್ತಿದೆ. ವಾರ್ಡ್ ಭೇಟಿಗೆ ಆಯುಕ್ತರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಚಮನ್ ಸಾಬ್ ಹೇಳಿದರು.
ಈಗಾಗಲೇ ಹಲವು ವಾರ್ಡ್ಗಳಿಗೆ ಭೇಟಿ ನೀಡಿದ್ದೇನೆ. ರಾಜ್ಯೋತ್ಸವದ ತಯಾರಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಾರ್ಡ್ ಭೇಟಿ ಸ್ಥಗಿತಗೊಳಿಸಲಾಗಿದ್ದು, ರಾಜ್ಯೋತ್ಸವ ಕಾರ್ಯಕ್ರಮದ ನಂತರ ಮತ್ತೆ ವಾರ್ಡ್ಗಳಿಗೆ ಭೇಟಿ ನೀಡಲಾಗುವುದು ಎಂದರು.
ಹಣದ ಕೊರತೆ ನಡುವೆಯೂ ನಾನು ಅಧಿಕಾರಕ್ಕೆ ಬಂದ ಮೇಲೆ 3 ಕೋಟಿ ರೂ ಟೆಂಡರ್ ಕರೆಯಲಾಗಿದೆ. ವಾರ್ಡ್ ಭೇಟಿ ವೇಳೆ ಹಲವಾರು ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ತುರ್ತು ಕಾಮಗಾರಿಗಳಿಗಾಗಿ ಹಣ ಬೇಕಾಗುತ್ತದೆ. ಹೀಗಾಗಿ ಹಣ ಮೀಸಲಿಗೆ ಕೌನ್ಸಿಲ್ ಅನುಮತಿಗೆ ವಿಷಯ ಪ್ರಸ್ತಾಪಿಸಲಾಗುವುದು ಎಂದರು.
ಪೌರ ಕಾರ್ಮಿಕರ ಸಮಸ್ಯೆ, ಪಕ್ಷ-ಭೇದ ಮರೆತು ಪ್ರಸ್ತಾಪ
ಸದಸ್ಯ ಶಿವಪ್ರಕಾಶ್, ವಾರ್ಡ್ನಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. ಇದ್ದವರೂ ಹೆಚ್ಚು ದಿನ ರಜೆ ಮಾಡುತ್ತಿದ್ದಾರೆ. ಇದರಿಂದ ಅನಾನುಕೂಲವಾಗುತ್ತಿದೆ ಎಂದರು. ಇದಕ್ಕೆ ಸದಸ್ಯರು ಪಕ್ಷ ಭೇದ ಮರೆತು ಸಹಮತ ವ್ಯಕ್ತಪಡಿಸಿದರು.
ಆಯುಕ್ತರಾದ ರೇಣುಕಾ ಮಾತನಾಡಿ, ಪ್ರಸ್ತುತ ಪಾಲಿಕೆಯಲ್ಲಿ 419 ಜನ ಪೌರ ಕಾರ್ಮಿಕರಿದ್ದು, ಈ ಪೈಕಿ ಹಲವಾರು ಕಾರಣಗಳಿಂದಾಗಿ ಶೇ.20ರಷ್ಟು ಜನರಿಗೆ ಕೆಲಸ ಮಾಡಲು ಶಕ್ತಿ ಇಲ್ಲ. ಪದೇ ಪದೇ ರಜೆ ಹಾಕುವವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದರು.
ಈಗಾಗಲೇ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ನೀಡುವುದಾಗಿ ಹೇಳಿದ್ದಾರೆ. ಅಲ್ಲಿವರೆಗೂ ಒಂದು ವಾರ್ಡ್ನಿಂದ ಮತ್ತೊಂದು ವರ್ಡ್ಗೆ ಶಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಸದಸ್ಯರು ಸಹಕರಿಸಬೇಕಿದೆ ಎಂದು ಹೇಳಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಜನಸಂಖ್ಯೆಗನುಗುಣವಾಗಿ ಪೌರ ಕಾರ್ಮಿಕರ ಅಗತ್ಯವಿದೆ. ಪ್ರಸ್ತಾವನೆ ಸಲ್ಲಿಸಿದ್ದೀರಿ. ನೇಮಕಾತಿ ತಡವಾಗಬಹುದು. ಆದರೆ ಸದ್ಯ ಇರುವವರು ಎಷ್ಟು ಜನ ? ಎಷ್ಟು ಗಂಟೆ ಕೆಲಸ ಮಾಡುತ್ತಿದ್ದಾರೆ ? ಹೇಗೆ ಬಳಸಿಕೊಳ್ಳಬಹುದು ಎಂದು ಚಿಂತಿಸಿ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
33ನೇ ವಾರ್ಡ್ನಲ್ಲಿ ವಾರಕ್ಕೆರಡು ಬಾರಿ ಕಸ ಸಂಗ್ರಹಣೆ
33ನೇ ವಾರ್ಡ್ನಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಕಸ ಸಂಗ್ರಹ ವಾಹನಗಳು ಬರುತ್ತಿವೆ. ಒಬ್ಬೊಬ್ಬರು ಎಂಟು ಬಕೆಟ್ ಕಸ ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದ ಸದಸ್ಯ ಆರ್.ಎಲ್. ಶಿವಪ್ರಕಾಶ್ ಕೂಡಲೇ ಅಲ್ಲಿ ನಿತ್ಯ ಕಸ ಸಂಗ್ರಹ ವಾಹನ ಬರುವ ವ್ಯವಸ್ಥೆ ಆಗಬೇಕು. ಇಲ್ಲದಿದ್ದರೆ ಪಾಲಿಕೆ ಎದುರು ಕಸ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಮನ್ ಸಾಬ್, ಪೌರಕಾರ್ಮಿಕರ ಕೊರತೆಯಿದ್ದು ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲಿಯವರೆಗೂ ಹೆಚ್ಚಿನ ಬಾರಿ ವಾಹನ ಕಳುಹಿಸಲು ಕ್ರಮ ವಹಿಸಲಾಗುವುದು ಎಂದರು.
ರಾಜ್ಯೋತ್ಸವದಲ್ಲಿ ಕುಸ್ತಿ ಪಂದ್ಯ ಆಯೋಜಿಸಿ
ಪಾಲಿಕೆಯಿಂದ ನಾಡ ಹಬ್ಬ ರಾಜ್ಯೋತ್ಸವ ಆಚರಣೆ ವೇಳೆ 50 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ನಶಿಸಿ ಹೋಗುತ್ತಿರುವ ಕುಸ್ತಿ ಕ್ರೀಡೆಯನ್ನೂ ಉಳಿಸಿ ಬೆಳಸಬೇಕಾಗಿದ್ದು, ಇದಕ್ಕಾಗಿ ಹಣ ಮೀಸಲಿಡುವಂತೆ ಸದಸ್ಯ ಕೆ.ಎಂ. ವೀರೇಶ್ ಸಭೆಯಲ್ಲಿ ಪ್ರಸ್ತಾಪಿಸಿದರು. ರಾಜ್ಯೋತ್ಸವದ ಅಂಗವಾಗಿ ಈ ಹಿಂದೆಲ್ಲಾ ಕುಸ್ತಿ ಪಂದ್ಯ ಆಯೋಜಿಸಲಾಗುತ್ತಿತ್ತು. ಮುಂದೆಯೂ ಆಯೋಜಿಸುವಂತೆ ಹೇಳಿದರು.
ಪೇಪರ್ ಎಲ್ಲೋಯ್ತು ? ಅಲ್ಲೆಂಗೋಯ್ತು ?
ಸಭೆಯಲ್ಲಿ `ಜನತವಾಣಿ’ ಪತ್ರಿಕೆ ಪ್ರದರ್ಶಿಸಿ ಗುಂಡಿ ಸಮಸ್ಯೆ ಬಗ್ಗೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್ ಮಾತನಾಡಿದರು. ತುಸು ಸಮಯದ ನಂತರ ಅದೇ ಪತ್ರಿಕೆ ಎ.ನಾಗರಾಜ್ ಅವರ ಕೈ ಸೇರಿತ್ತು. ಇದರಿಂದ ಸಿಡಿಮಿಡಿಗೊಂಡ ಪ್ರಸನ್ನ ಕುಮಾರ್, ನನ್ನ ಟೇಬಲ್ ಮೇಲಿದ್ದ ಪತ್ರಿಕೆ ಅವರ ಕೈ ಸೇರಿದ್ದು ಹೇಗೆ? ಯಾರು ಕೊಟ್ಟರು? ತನಿಖೆ ಮಾಡಿ, ಕೊಟ್ಟವರ ಮೇಲೆ ಕ್ರಮವಾಗಲಿ ಎಂದು ಆಗ್ರಹಿಸಿದರು.
ರಾಜ್ಯೋತ್ಸವದಲ್ಲಿ ಕುಸ್ತಿ ಪಂದ್ಯ ಆಯೋಜಿಸಿ
ಪಾಲಿಕೆಯಿಂದ ನಾಡ ಹಬ್ಬ ರಾಜ್ಯೋತ್ಸವ ಆಚರಣೆ ವೇಳೆ 50 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ನಶಿಸಿ ಹೋಗುತ್ತಿರುವ ಕುಸ್ತಿ ಕ್ರೀಡೆಯನ್ನೂ ಉಳಿಸಿ ಬೆಳಸಬೇಕಾಗಿದ್ದು, ಇದಕ್ಕಾಗಿ ಹಣ ಮೀಸಲಿಡುವಂತೆ ಸದಸ್ಯ ಕೆ.ಎಂ. ವೀರೇಶ್ ಸಭೆಯಲ್ಲಿ ಪ್ರಸ್ತಾಪಿಸಿದರು. ರಾಜ್ಯೋತ್ಸವದ ಅಂಗವಾಗಿ ಈ ಹಿಂದೆಲ್ಲಾ ಕುಸ್ತಿ ಪಂದ್ಯ ಆಯೋಜಿಸಲಾಗುತ್ತಿತ್ತು. ಮುಂದೆಯೂ ಆಯೋಜಿಸುವಂತೆ ಹೇಳಿದರು.
ನಗರದಲ್ಲಿ ನಾಯಿ, ಹಂದಿ ಕಾಟ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಬೇಕು. ಒಂದಿಷ್ಟು ದಿನ ನಗರದಲ್ಲಿ ಹಂದಿ ಕಾಟ ಕಡಿಮೆಯಾಗಿತ್ತು. ಈಗ ಮತ್ತೆ ಹಂದಿಗಳು ಕಾಣುತ್ತಿವೆ ಎಂದು ಸದಸ್ಯ ಶಿವಾನಂದ್ ಆರೋಪಿಸಿದರು.
ಕಾಂಗ್ರೆಸ್ ಸದಸ್ಯ ಎ. ನಾಗರಾಜ್ ಮಾತನಾಡಿ, ವಿವಿಧ ಕಾರಣಗಳಿಂದಾಗಿ ನಗರದಲ್ಲಿ ಹಂದಿ ಕಾಟ ಕಡಿಮೆ ಯಾಗಿತ್ತು. ಈಗ ಮತ್ತೆ ಶುರುವಾಗಿದೆ. ನಾಯಿ ಕಾಟವೂ ಅತಿಯಾಗಿದೆ. ಈ ಕುರಿತು ತಕ್ಷಣ ಕ್ರಮವಹಿಸಬೇಕಾಗಿದೆ. ನಾಯಿಗಳನ್ನು ಹಿಡಿಯವ ಮೊದಲು ಸಾರ್ವಜನಿಕರಿಗೆ ಸಾಕು ನಾಯಿಗಳನ್ನು ಮನೆ ಕಾಂಪೌಂಡ್ ಒಳಗೆ ಇಟ್ಟು ಕೊಳ್ಳುವಂತೆಯೂ ಸೂಚನೆ ನೀಡಬೇಕು ಎಂದರು. ಪ್ರತಿಪಕ್ಷದ ನಾಯಕ ಪ್ರಸನ್ನಕುಮಾರ್ ಮಾತನಾಡಿ, ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೂ ತಿಳಿ ಹೇಳಬೇಕಿದೆ ಎಂದರು.
ಆರೋಗ್ಯ ನಿರೀಕ್ಷಕರು ಮಾತನಾಡಿ, ನಾಯಿಗಳ ಹಾವಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಬಿಟ್ಟರೆ, ಬೇರೆ ಏನೂ ಕ್ರಮ ಕೈಗೊಳ್ಳುವಂತಿಲ್ಲ ಎಂದಾಗ, ಏನಾದರೊಂದು ಪರಿಹಾರ ಹುಡುಕಲೇ ಬೇಕಿದೆ ಎಂದು ನಾಗರಾಜ್ ಹೇಳಿದರು.
ಹಂದಿಗಳ ಸ್ಥಳಾಂತರಕ್ಕೆ ಹಾಗೂ ಸಾಕು ನಾಯಿಗಳನ್ನು ಮನೆಯೊಳಗೆ ಕಟ್ಟಿಕೊಳ್ಳುವಂತೆ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವಂತೆಯೂ, ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಕೂಡಲೇ ಆರಂಭಿಸುವಂತೆಯೂ ಮೇಯರ್ ಚಮನ್ ಸಾಬ್ ಅಧಿಕಾರಿಗಳಿಗೆ ಸೂಚಿಸಿದರು.
ನಾಮನಿರ್ದೇಶಿತ ಸದಸ್ಯ ಸಾಗರ್ ಮಾತನಾಡಿ, ಇದ್ದಾಗ ಸಿಬ್ಬಂದಿಯಿಂದ ಕೆಲಸ ಮಾಡಿಸಿಕೊಳ್ಳುವ ಪಾಲಿಕೆ ಅಧಿಕಾರಿಗಳು, ಅವರು ಮೃತಪಟ್ಟಾಗ ಸಾಂತ್ವನ ಹೇಳಿ ಮಾನವೀಯತೆ ಮೆರೆಯಬೇಕು. ಮೊನ್ನೆ ನೌಕರ ಲಕ್ಷ್ಮಣ್ ಆತ್ಮಹತ್ಯೆ ಮಾಡಿಕೊಂಡಾಗ ಸಹಾಯಕ ಅಭಿಯಂತರರು ಯಾರೂ ಮನೆಗೆ ತೆರಳಿ ಸಾಂತ್ವನ ಹೇಳಲಿಲ್ಲ. ಪೌರ ಕಾರ್ಮಿಕರು ಮೃತಪಟ್ಟಾಗ ಅಂತ್ಯಕ್ರಿಯೆಗೆ ನೀಡುವ ಹಣವನ್ನೂ ತಡವಾಗಿ ಕೊಡಲಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ನಾನಾ ಕೌಟುಂಬಿಕ ಕಾರಣಗಳಿಂದ ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಅವಲಂಬಿತರಿಗೆ ಅಂತ್ಯಕ್ರಿಯೆಗಾಗಿ 15 ಸಾವಿರ ರೂ. ಕೊಡಲಾಗಿದೆ ಎಂದರು. ಜತೆಗೆ ಪಾಲಿಕೆ ನೌಕರರಿಗಾಗಿ ಆರೋಗ್ಯ ವಿಮೆ ಮಾಡಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದರು.
ಸದಸ್ಯ ಕೆ.ಎಂ. ವೀರೇಶ್ ಮಾತನಾಡಿ, ಟಿವಿ ಸ್ಟೇಷನ್ ಕರೆ ಏರಿಯ ದುರಸ್ತಿ ಕಾಮಗಾರಿ ಬಗ್ಗೆ ಆಕ್ಷೇಪಿಸಿ, ವಾಯುವಿಹಾರಿಗಳು ಗುಂಡಿಗೆ ಬೀಳುವಂತಾಗಿದೆ. ಅಲ್ಲದೇ ಬೀದಿ ದೀಪಗಳೂ ಇಲ್ಲದಂತಾಗಿವೆ ಎಂದರು.
ಉಪ ಮೇಯರ್ ಸೋಗಿ ಶಾಂತಕುಮಾರ್ ವೇದಿಕೆಯಲ್ಲಿದ್ದರು. ಇತ್ತೀಚೆಗೆ ನಿಧನರಾದ ನಗರಸಭೆ ಮಾಜಿ ಸದಸ್ಯ ಹೇಮಂತರಾಜ್, ಪಾಲಿಕೆ ನೌಕರ ಲಕ್ಷ್ಮಣ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.