ರೈತರ ಬೇಡಿಕೆಗೆ ಸ್ಪಂದನೆ..!
ಕಾರ್ಯದರ್ಶಿ ಎಚ್.ಸಿ.ಎಂ. ರಾಣಿ ಅವರು ರೈತರ ಮನವಿ ಸ್ವೀಕರಿಸಿ, ಅವರ ಬೇಡಿಕೆಗಳನ್ನು ಆಲಿಸಿದ ಬಳಿಕ ನಾಳೆಯಿಂದಲೇ ಭತ್ತ ಖರೀದಿ ವಹಿವಾಟನ್ನು ಟೆಂಡರ್ ಪದ್ಧತಿ ಮೂಲಕ ಮಾಡಲಾಗುವುದು. ರೈತರಿಗೆ ಸೂಕ್ತ ಭದ್ರತೆ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ರೈತರಿಗಾಗುವ ಶೋಷಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಭರವಸೆ ನೀಡಿದರು.
ದಾವಣಗೆರೆ, ನ.21- ಭತ್ತ ಹಾಗೂ ಮೆಕ್ಕೆಜೋಳ ಖರೀದಿ ವಹಿವಾಟನ್ನು ಟೆಂಡರ್ ಪದ್ದತಿ ಮೂಲಕ ಮಾಡುವುದು ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ರೈತ ಒಕ್ಕೂಟವು ಗುರುವಾರ ಎಪಿಎಂಸಿಗೆ ಒತ್ತಾಯಿಸಿತು.
ನಗರದ ಎಪಿಎಂಸಿ ಆವರಣದಲ್ಲಿ, ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಮನವಿ ಅರ್ಪಿಸಿ. ಬೇಡಿಕೆ ಈಡೇರಿಸುವಂತೆ ರೈತರು ಆಗ್ರಹಿಸಿದರು.
ಈ ವೇಳೆ ರೈತ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ 1.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆದಿದ್ದು, ಬೆಳೆ ಚೆನ್ನಾಗಿದ್ದರಿಂದ ಉತ್ತಮ ಇಳುವರಿಯನ್ನು ನಿರೀಕ್ಷಿಸಿದ್ದೇವೆ. ಆದರೆ, ಭತ್ತದ ದರ ಕುಸಿದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಕುರಿತು ನ.15ರಂದು ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ, ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದ್ದೆವು ಎಂದರು.
ಎಪಿಎಂಸಿಯಲ್ಲಿ ಭತ್ತ, ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಟೆಂಡರ್ ಮೂಲಕ ನಡೆಸಬೇಕೆಂಬ ಒಕ್ಕೂಟದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆಯುವ ಭರವಸೆ ನೀಡಿದ್ದರು. ಮಾರನೆ ದಿನವೇ ಎಪಿಎಂಸಿಯಲ್ಲಿ ಮೆಕ್ಕೆಜೋಳ ಖರೀದಿ ವಹಿವಾಟು ಮಾಡಲು ಟೆಂಡರ್ ಪದ್ಧತಿ ಜಾರಿಗೆ ತಂದಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳಿಗೆ ರೈತರು ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಪ್ರತಿ ಭತ್ತದ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ಮಾಡಬೇಕೆಂಬ ನಿಯಮವಿದ್ದರೂ ಮನಬಂದಂತೆ ಖರೀದಿ ವಹಿವಾಟು ಮಾಡಲಾಗುತ್ತಿದೆ. ಇದರಿಂದ ಖರೀದಿದಾರರು-ವ್ಯಾಪಾರಸ್ಥರು ಒಳಸಂಚು ರೂಪಿಸಿ, ಭತ್ತದ ಧಾರಣೆ ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ನ್ಯಾಯಯುತ ಖರೀದಿ ವಹಿವಾಟು ಆಗಲು ಟೆಂಡರ್ ಪದ್ದತಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ದಲಾಲರು ದಲಾಲಿ ಪಡೆಯುವುದು, ತೂಕದಲ್ಲಿ ವಂಚಿಸುವುದು, ಹಮಾಲರು ಸ್ಯಾಂಪಲ್ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ರೀತಿಯಲ್ಲಿ ರೈತರನ್ನು ಶೋಷಿಸಲಾಗುತ್ತಿದೆ. ಇಂತಹ ಶೋಷಣೆ ಸಂಪೂರ್ಣ ನಿಲ್ಲಬೇಕೆಂದು ಹೇಳಿದರು.
ಎಪಿಎಂಸಿ ಪ್ರಾಂಗಣದ ಮಂಡಿಗಳಲ್ಲಿ ರೈತರು ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾ ಡುವುದು, ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಒಕ್ಕೂಟದ ಬೇಡಿಕೆ ಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ರೈತ ಒಕ್ಕೂಟದ ನಿಯೋಗದಲ್ಲಿ ರೈತ ಮುಖಂಡರುಗಳಾದ ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ಆಲೂರು ನಿಂಗರಾಜು, ಕರಿಲಕ್ಕೇನಳ್ಳಿ ಜಿ.ಬಿ. ಓಂಕಾರಗೌಡ್ರು, 6ನೇ ಕಲ್ಲು ವಿಜಯಕುಮಾರ್, ಶಿವನಳ್ಳಿ ರಮೇಶ್, ಹೆಚ್.ಎನ್. ಶಿವಕುಮಾರ್, ಶಿವರಾಜ ಪಾಟೀಲ್, ಹೆಚ್.ಎನ್. ಗುರುನಾಥ್, ಆರುಂಡಿ ಪುನೀತ್, ಎನ್.ಹೆಚ್. ಹಾಲೇಶ್, ಅನಿಲಕುಮಾರ್ ನಾಯ್ಕ್, ರಮೇಶನಾಯ್ಕ, ಆನೆಕೊಂಡ ರೇವಣಸಿದ್ದಪ್ಪ, ಗುಮ್ಮನೂರು ಬಸವರಾಜು, ಚಿಕ್ಕಬೂದಿಹಾಳ ಭಗತಸಿಂಹ, ಅಣಜಿ ಗುಡ್ಡೇಶ, ಹೆಬ್ಬಾಳ್ ಮಹೇಂದ್ರ, ಕುಂದುವಾಡದ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಹೊಸಹಳ್ಳಿ ಶಿವಮೂರ್ತಿ ಮತ್ತಿತರರಿದ್ದರು.