ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಇನ್ಫ್ಲುಯೆಂಜಾ (ಫ್ಲೂ) ಮಹಾಮಾರಿ

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಇನ್ಫ್ಲುಯೆಂಜಾ (ಫ್ಲೂ) ಮಹಾಮಾರಿ

ನಮ್ಮ ದೇಶದಲ್ಲಿ ಫ್ಲೂ ಬರಲು ಗುರುತಿಸಿಕೊಂಡಿರುವ ಎರಡು ಕಾಲಗಳಿವೆ ಅವುಗಳು ತಮಗೆಲ್ಲಾ ತಿಳಿದಿರುವಂತೆ,1) ಮಳೆಗಾಲ ಮುಗಿದ ತಕ್ಷಣ ಬರುವ ಫ್ಲೂ 2) ಜನವರಿಯಿಂದ ಮಾರ್ಚ್ ವರೆಗೆ ಬರುವ ಫ್ಲೂ. 

ಈಗ ಸದ್ಯಕ್ಕೆ ನಾವು ಫ್ಲೂ ಕಾಲದಲ್ಲಿ ಇರುವೆವು ಹಾಗೂ ಇದು ಮಾರ್ಚ್ ತಿಂಗಳ ತನಕ ಮುಂದುವರೆಯಲಿದೆ.

ಫ್ಲೂ ಎಂದರೇನು? 

ಇದು ಒಂದು ವೈರಸ್ ಮೂಲಕ ಹರಡುವ ಕಾಯಿಲೆ ಆಗಿದ್ದು, ಪ್ರಾಣಿ, ಪಕ್ಷಿಗಳಿಂದ ಮಾನವರಿಗೆ ಹರಡುತ್ತದೆ. ಉದಾಹರಣೆಗೆ ನಾವು ಈ ಮೊದಲೇ ಕೇಳಿರುವ ಹಕ್ಕಿ ಜ್ವರ ಮತ್ತು ಹಂದಿ ಜ್ವರ. ಇದು ಮಾನವನಿಂದ ಮಾನವನಿಗೆ ಡ್ರಾಪ್ ಲೆಟ್ ಇನ್ಫೆಕ್ಷನ್ ಅಂದರೆ ಕಾಯಿಲೆ ಇರುವ ವ್ಯಕ್ತಿ ಒಬ್ಬ ಕೆಮ್ಮಿದಾಗ/ಸೀನಿದಾಗ ಅವನಿಂದ ಇನ್ನೊಬ್ಬರ ಮೂಗಿಗೆ ಹಾಗೂ ಬಾಯಿಗೆ ತಲುಪಿ ಹರಡುತ್ತದೆ.

ಈಗ ನಿಮಗೆ ಕೋವಿಡ್‌ ಕಾಯಿಲೆ ನೆನಪು ಬಂದಿರಬಹುದು ಅಲ್ಲವಾ? ಹಾಗಿದ್ದರೆ ಅದು ಕೂಡ ಇನ್ಫ್ಲುಯೆಂಜಾ (ಫ್ಲೂ) ಆಗಿತ್ತಾ? 

ಕೊರೊನಾ ಕಾಯಿಲೆ ಇದೇ ರೀತಿ ಫ್ಲೂ ಥರದ ಕಾಯಿಲೆಯೇ ಆಗಿದ್ದರೂ ಕೊಂಚ ವಿಭಿನ್ನ ಆಗಿತ್ತು ಮತ್ತು ಭಯಾನಕ ಆಗಿತ್ತು. ಆದರೆ ಇವು ಎರಡೂ ಹರಡುವ ರೀತಿ ಒಂದೇ ಆಗಿತ್ತು.

ಸೀಸನಲ್ ಫ್ಲೂ ಪ್ರತಿ ವರ್ಷ ಬರುತ್ತದೆ ಮತ್ತು ಕೊರೋನಾ ರೀತಿಯ ಕಾಯಿಲೆ ಶತಮಾನಕ್ಕೆ ಒಮ್ಮೆ ಬರುತ್ತದೆ. ಸೀಜನಲ್ ಫ್ಲೂ  H_N_ ನಿಂದ ನಾಮಕರಣ ಮಾಡಲಾಗುತ್ತದೆ. ಉದಾಹರಣೆಗೆ ನಾವು ತುಂಬಾ ಕೇಳಿರುವ H1N1, ಆದರೆ ಪ್ರತಿವರ್ಷ ಇದು ಬೇರೆ ಬೇರೆ ಆಗಿ ರೂಪಾಂತರಗೊಂಡು ಬರುತ್ತದೆ. ಅಂದರೆ H3N2, H2N4 ಇತ್ಯಾದಿ ಮತ್ತು ನಮ್ಮ ಭೂಗೋಳವನ್ನು ಚೆಂಡನ್ನು ನಡುವೆ ಚಾಕುವಿನಿಂದ ಕೊಯ್ದ ರೀತಿ ಉತ್ತರ ಗೋಳ ಹಾಗೂ ದಕ್ಷಿಣ ಗೋಳ ಆಗಿ ವಿಭಜಿಸಲಾಗಿದೆ. ಈ ಎರಡು ಭಾಗಗಳ ಫ್ಲೂ ವೈರಸ್ ಗಳು ವಿಭಿನ್ನವಾಗಿ ಇರುತ್ತವೆ. ಭೂ ಮಧ್ಯ ರೇಖೆ ಇವನ್ನು ವಿಭಜನೆ ಮಾಡುತ್ತದೆ.ಹಾಗಾಗಿ ಫ್ಲೂ ನ ವ್ಯಾಕ್ಸಿನ್ ಕೂಡ ಎರಡು ರೀತಿ. ಈ ಎರಡು ಕತ್ತರಿಸಿದ ಗೋಳಗಳಲ್ಲಿ ಬೇರೆ ಬೇರೆ ಆಗಿರುತ್ತದೆ (ಉತ್ತರ ಗೋಳ/ ದಕ್ಷಿಣ ಗೋಳ).

ಫ್ಲೂ ಕಾಯಿಲೆಯ ಲಕ್ಷಣಗಳೇನು? 

ಸಾಮಾನ್ಯ ರೀತಿ: ಕೆಮ್ಮು,ನೆಗಡಿ,ಜ್ವರ,ಮೈ ಕೈ ನೋವು, ತೆಳು ಭೇದಿ. 

ವಿಪರೀತ ರೀತಿ: ಶ್ವಾಸಕೋಶದ ನ್ಯುಮೋನಿಯಾ, ಉಬ್ಬಸ,ಮೆದುಳು ಕಿಡ್ನಿ ನರಗಳ ಹಾನಿ ಹಾಗೂ ARDS ನಿಂದಾ ವೆಂಟಿಲೇಟರ್ ತಲುಪುವ ಪ್ರಕ್ರಿಯೆ. 

ಚಿಕಿತ್ಸೆ: ಸಾಮಾನ್ಯವಾಗಿ ಆಂಟಿವೈರಸ್ (ಉದಾಹರಣೆ: ಓಸೆಲ್ಟಮಿವಿರ್ ಅಥವಾ ಝನಮಿವಿರ್ ಮಾತ್ರೆ), ವೈರಸ್ ಜೊತೆಗೆ ಬ್ಯಾಕ್ಟೀರಿಯಾ ಕೂಡ ಅವಕಾಶವಾದಿ ಆಗಿ ಜೊತೆಗೆ ದಾಳಿ ಮಾಡಿದರೆ ಆಂಟಿಬಯೋಟಿಕ್, ಸಿಕ್ಕಾಪಟ್ಟೆ ದ್ರವ ಸೇವನೆಯಿಂದ ದೇಹವು ನಿರ್ಜಲ (ಡಿಹೈಡ್ರೇಷನ್) ಆಗುವುದನ್ನು ತಪ್ಪಿಸುವುದು, ಲಕ್ಷಣಗಳ ಅನುಸಾರ ಜ್ವರ ಹಾಗೂ ನೆಗಡಿ ಔಷಧಿಗಳು, ವಿಟಮಿನ್ ಗಳು ಕೊಡುವುದು, ತುಂಬಾ ವಿಪರೀತ ಆಗಿ ಕೈ ಮೀರಿ ಹೋದರೆ, ತಕ್ಷಣ ದಾಖಲಾತಿ (ಅಡ್ಮಿಟ್) ಮಾಡಿ ಚಿಕಿತ್ಸೆ ನೀಡುವುದು.

ಯಾರು ತುಂಬಾ ಮುನ್ನೆಚ್ಚರಿಕೆಯಿಂದ ಇರಬೇಕು?

ಸಾಮಾನ್ಯವಾಗಿ ಬಹಳ ಜನಕ್ಕೆ (70%) ಇದು ವಾರ, ಎರಡು ವಾರಗಳಲ್ಲಿ ಅಡ್ಮಿಟ್ ಇಲ್ಲದೆ ವೈದ್ಯರ ಚಿಕಿತ್ಸೆಯಿಂದ ಒಪಿಡಿ ಅಲ್ಲೇ ಗುಣ ಆಗುತ್ತದೆ, ಆದರೆ 2 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಹಿರಿಯರಿಗೆ ಫ್ಲೂ ಕಂಡು ಬಂದರೆ, ಅವರು ತಕ್ಷಣ ಅಲಕ್ಷ್ಯ ಮಾಡದೇ ಅಡ್ಮಿಟ್ ಆಗುವುದು ತುಂಬಾ ಶ್ರೇಷ್ಟ.ಇವರ ಜೊತೆಗೆ ಯಾರಿಗೆ ಅಸ್ತಮಾ, ಅಲರ್ಜಿ ಕೆಮ್ಮು/ನೆಗಡಿ ಇದೆಯೋ, ಈ ಮೊದಲು ಟಿಬಿ ಕಾಯಿಲೆ ಬಂದು ಗುಣ ಆದವರು, ಸಿ ಓ ಪಿ ಡಿ ಕಾಯಿಲೆ ಇರುವವರು, ಸಕ್ಕರೆ ಕಾಯಿಲೆ, ಬಿಪಿ ಕಾಯಿಲೆ, ಹೃದ್ರೋಗ ಕಾಯಿಲೆ ಇರುವವರು, ಅಂಗಾಂಗ ಕಸಿಗೆ (ಟ್ರಾನ್ಸ್‌ಪ್ಲಾಂಟೇಷನ್‌) ಒಳಗಾದವರು, ಹೆಚ್ ಐ ವಿ, ಕ್ಯಾನ್ಸರ್ ರೋಗಿಗಳು ಕೂಡ ಫ್ಲೂ ಬಂದ ತಕ್ಷಣ ಅಡ್ಮಿಟ್ ಆಗುವುದು ತುಂಬಾ ಒಳ್ಳೆಯದು. 

ಫ್ಲೂ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ಹೇಗೆ? 

ಫ್ಲೂ ಕಾಯಿಲೆ ಮನೆಯಲ್ಲಿ/ಕೆಲಸ ಮಾಡುವ ಸ್ಥಳಗಳಲ್ಲಿ/ಶಾಲೆ, ಕಾಲೇಜ್ ಗಳಲ್ಲಿ  ಒಬ್ಬರಿಗೆ ಆದರೆ ಅವರನ್ನು ಸಂಪೂರ್ಣ ಬೇರೆ ಕೊಠಡಿಯಲ್ಲಿ ಇಡುವುದು ಮತ್ತು ಅವರಿಗೆ ರಜೆ ನೀಡುವುದು ಸೇರಿದ ಹಾಗೆ ಮಾಸ್ಕ್ ಎಲ್ಲರೂ ಬಳಸುವುದು ಮತ್ತು ಅವರು ಉಪಯೋಗಿಸಿದ ವಸ್ತು ಮುಟ್ಟದೇ ಇರುವುದು ತುಂಬಾ ಮುಖ್ಯ. 

ಫ್ಲೂ ಕಾಯಿಲೆ ತಡೆಗಟ್ಟುವುದು ಹೇಗೆ? 

ಇದಕ್ಕೆ ಇರುವಂತಹ ಏಕ ಮಾತ್ರ ಉತ್ತರ ಇನ್‌ಪ್ಲ್ಯೂಯಂಜಾ ವ್ಯಾಕ್ಸಿನ್. ಹೌದು, ಇದು ಪ್ರತಿ ವರ್ಷ ಬದಲು ಆಗುವಂತಹ ಉತ್ತರ ಹಾಗೂ ದಕ್ಷಿಣ ಗೋಳಗಳ ವ್ಯಾಕ್ಸೀನ್ ಹಾಗೂ ಇದನ್ನು ಪ್ರತಿ ವರ್ಷ ತುಂಬಾ ರಿಸ್ಕ್ ಅಲ್ಲಿ ಇರುವಂತಹ ಈ ಮೇಲೆ ಹೇಳಿದಂತಹ ಜನರು ತೆಗೆದುಕೊಳ್ಳಬೇಕು. 

ಫ್ಲೂ ಕಾಯಿಲೆ ಕೋವಿಡ್‌ ರೀತಿ ಮಾರಣಾಂತಿಕವೇ? 

ಖಂಡಿತಾ ಇಲ್ಲ, ಈ ಮೇಲೆ ಹೇಳಿದ ರಿಸ್ಕ್ ಅಲ್ಲಿ ಇರುವ ಜನಸಂಖ್ಯೆ ಹೊರತು ಪಡಿಸಿ ಇದು ಓಪಿಡಿ ವೈದ್ಯರ ಚಿಕಿತ್ಸೆಯಿಂದ 70% ರೋಗಿಗಳಲ್ಲಿ ಒಂದು ಅಥವಾ ಎರಡು ವಾರಗಳಲ್ಲಿ ಗುಣ ಆಗುವುದು. 

ಮಾಹಿತಿ ಹಾಗೂ ಮುನ್ನೆಚ್ಚರಿಕೆಯೇ ಫ್ಲೂ ಕಾಯಿಲೆಗೆ ಮಹಾಮದ್ದು. 

– ಡಾ.ಎನ್.ಹೆಚ್.ಕೃಷ್ಣ, ದಾವಣಗೆರೆ.  ಇಮೇಲ್ ಐಡಿ: [email protected]

error: Content is protected !!