ಕಾಯಿಲೆಗಳು ಬರದಂತೆ ತಡೆಯಲು ಪ್ರಕೃತಿ ಚಿಕಿತ್ಸಾ ಕೇಂದ್ರಗಳು ಹೆಚ್ಚಾಗಬೇಕು

ಕಾಯಿಲೆಗಳು ಬರದಂತೆ ತಡೆಯಲು ಪ್ರಕೃತಿ ಚಿಕಿತ್ಸಾ ಕೇಂದ್ರಗಳು ಹೆಚ್ಚಾಗಬೇಕು

ದಾವಣಗೆರೆ, ನ.19– ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಭಾರತೀಯ ಪರಂಪರೆಯ ಚಿಕಿತ್ಸೆಯಾಗಿದ್ದು, ಇದು ಕೇವಲ ಪಾರ್ಶ್ವವಾಯು, ಸಯಾಟಿಕ, ಬೊಜ್ಜುತನ, ಸಂಧಿವಾತ ಇತ್ಯಾದಿ ದೀರ್ಘಕಾಲಿಕ ತೊಂದರೆಗಳನ್ನು ಸರಿಮಾಡುವ ಪದ್ದತಿಯಾಗಿರದೆ, ರೋಗವು ಬರದಂತೆ ತಡೆಯುವ ಮತ್ತು ಆರೋಗ್ಯವನ್ನು ವೃದ್ದಿಸುವ ಚಿಕಿತ್ಸಾ ಪದ್ದತಿಯಾಗಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಸ್ಥಳೀಯ ವಿದ್ಯಾನಗರದ ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಪ್ರಕೃತಿ ಚಿಕಿತ್ಸೆಯನ್ನು ಪಡೆಯಬೇಕೆಂದರೆ ದೊಡ್ಡ-ದೊಡ್ಡ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂಬ ಕಲ್ಪನೆಯಿಂದ ಹೊರಬಂದು, ಕ್ಲಿನಿಕ್‍ಗಳಲ್ಲಿಯೇ ಪ್ರಕೃತಿ ಚಿಕಿತ್ಸಾ ಪದ್ದತಿಯನ್ನು ಬಳಸಿ ನೀಡುವಂತಹ ಚಿಕಿತ್ಸೆಯಿಂದ ನಾವು ನಮ್ಮ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದು ಹೇಳಿದರು. 

ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳಿಗೆ ಹೋಗಿ ಒಂದು ತಿಂಗಳ ಕಾಲ ತಂಗುವುದು ಕಷ್ಟ ಸಾಧ್ಯವಾದ್ಯವಾದ ಮಾತಾಗಿರುವು ದರಿಂದ, ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಂತಹ ಕ್ಲಿನಿಕ್‍ಗಳು ಹೆಚ್ಚಿದರೆ ಕಾಯಿಲೆಗಳು ಬರದಂತೆ ತಡೆಯಲು ಸಾಧ್ಯ. ಮಾತ್ರವಲ್ಲದೇ, ಬಂದಂತಹ ಕಾಯಿಲೆಗಳನ್ನು ಸರಿಪಡಿಸಿಕೊಳ್ಳಲು ಕೂಡ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಈ ವೈದ್ಯ ಪದ್ದತಿಯು ಕಾಯಿಲೆಯ ಮೂಲವನ್ನು ಕಂಡುಹಿಡಿದು ಕಾಯಿಲೆಯನ್ನು ಪರಿಪೂರ್ಣವಾಗಿ ಸರಿಪಡಿಸುತ್ತದೆ ಹಾಗಾಗಿ ಇಂತಹ ಪದ್ದತಿಯ ಕ್ಲಿನಿಕ್‍ಗಳು ಹೆಚ್ಚುವುದರಿಂದ ಸಾರ್ವಜನಿಕರ ಆರೋಗ್ಯವನ್ನು ಇಮ್ಮಡಿಗೊಳಿಸ ಬಹುದೆಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಡಾ. ವಿಂಧ್ಯ ಗಂಗಾಧರ ವರ್ಮ ಮಾತನಾಡಿ, ಪ್ರಕೃತಿ ಚಿಕಿತ್ಸೆಯು ನಿರೌಷಧ ಚಿಕಿತ್ಸಾ ಪದ್ದತಿಯಾಗಿದ್ದು, ಇದು ಬಹಳಷ್ಟು ದೀರ್ಘಕಾಲಿಕ ತೊಂದರೆಗಳಿಗೆ ರಾಮಬಾಣವಾದ ಚಿಕಿತ್ಸಾ ಪದ್ದತಿಯಾಗಿದೆ ಎಂದು ತಿಳಿಸಿದರು. 

ಪ್ರಕೃತಿ ಚಿಕಿತ್ಸೆಯ ಸಿದ್ದಾಂತದ ಪ್ರಕಾರ ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹಣೆಯಿಂದಾಗಿ ಕಾಯಿಲೆಗಳು ಬರುತ್ತವೆ. ಪ್ರಕೃತಿ ಚಿಕಿತ್ಸಾ ವೈದ್ಯರುಗಳು ಕಾರಣವನ್ನು ಹುಡುಕಿ ಇಡೀ ದೇಹ ಶುದ್ದೀಕರಣ ಗೊಳಿಸುವ ಚಿಕಿತ್ಸೆಯನ್ನು ನೀಡುತ್ತಾರೆ. ಮಾತ್ರವಲ್ಲದೆ ಅಕ್ಯುಪಂಕ್ಚರ್, ಮಸಾಜ್ ಚಿಕಿತ್ಸೆ, ಫಿಸಿಯೋಥೆರಪಿ ಯಂತಹ ಚಿಕಿತ್ಸೆಗಳಿಂದ ತ್ವರಿತ ರೋಗ ಲಕ್ಷಣಗಳನ್ನು ಹರಿಸುವ ಚಿಕಿತ್ಸೆಗಳನ್ನೂ ನೀಡುತ್ತಾರೆ. ಪ್ರಕೃತಿ ಚಿಕಿತ್ಸೆಯನ್ನು ಬಳಸಿಕೊಂಡು ಸರಿಯಾಗುವ ಎಲ್ಲ ಕಾಯಿಲೆಗಳು ಮತ್ತೆ ಮರಳಿ ಬರದಷ್ಟರ ಮಟ್ಟಿಗೆ ಗುಣ ಕಾಣಿಸಿಕೊಳ್ಳುತ್ತವೆ ಎಂದು ಡಾ. ವಿಂಧ್ಯ ಗಂಗಾಧರ ವರ್ಮ ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ಪುತ್ತೂರು ಶಲ್ಯ ವೈದ್ಯ ಬಿ. ರಾಮರಾಜು ಮಾತನಾಡಿ, ಈ ಪ್ರಕೃತಿ ಚಿಕಿತ್ಸಾ ಪದ್ದತಿಯು ಹಳೇ ತಲೆಮಾರಿನಿಂದ ನಡೆದುಕೊಂಡು ಬಂದಿರುವ ಚಿಕಿತ್ಸಾ ಪದ್ದತಿಯಾಗಿದ್ದು, ಈ ಚಿಕಿತ್ಸೆಯು ಮನೆಮದ್ದಿನ ರೂಪದಲ್ಲಿ ಅದೆಷ್ಟೋ ಭಾರತೀಯರ ದೈನಂದಿನ ಭಾಗವಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ಪದ್ದತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸಲು ಇದೊಂದು ಮಾಧ್ಯಮವಾಗಿದೆ ಎಂದು ತಿಳಿಸಿದರು.

ಶ್ರೀಮತಿ ತುಳಸಿ ಅವರು ಮಾತನಾಡಿ, ನಾವು ತಿನ್ನುವ ಹಣ್ಣುಗಳ ಬೀಜಗಳನ್ನು ಮಣ್ಣಿಗೆ ಹಾಕುವ ಮುಖಾಂತರ ಮತ್ತಷ್ಟು ಗಿಡ-ಮರಗಳನ್ನು ಪ್ರಕೃತಿಯಲ್ಲಿ ಹೆಚ್ಚಿಸಿದರೆ ಮಾತ್ರ ಪ್ರಕೃತಿ ಚಿಕಿತ್ಸಾ ಪದ್ದತಿಗೆ ಉಳಿಗಾಲ. ಪ್ರಕೃತಿಯೇ ಇಲ್ಲದ ಪ್ರಕೃತಿ ಚಿಕಿತ್ಸೆ ವ್ಯರ್ಥವೆಂದು ತಿಳಿಸಿದರು.

ಡಾ. ಗಂಗಾಧರ ವರ್ಮ ಮಾತನಾಡಿ, ಪ್ರಕೃತಿ ಚಿಕಿತ್ಸೆಯಿಂದ ಮೂಳೆ, ನರ, ಶ್ವಾಸಕೋಶ, ಜೀರ್ಣಾಂಗ ವ್ಯೂಹ, ಚರ್ಮ, ದೀರ್ಘಕಾಲಿಕ, ಮುಟ್ಟಿನ ಸಮಸ್ಯೆಗಳು ಔಷಧಗಳ ಪ್ರಮೇಯವೇ ಇಲ್ಲದೆ ಸಂಪೂರ್ಣ ಗುಣವಾಗುತ್ತವೆಯೆಂಬುದು ನನ್ನ ಇಷ್ಟು ವರ್ಷಗಳ ಅನುಭವ ಎಂದು ಹೇಳಿದರು  

ಶ್ರೀಮತಿ ಕನಕ ಬಿಂದು ಕಾರ್ಯಕ್ರಮ  ನಿರೂಪಿಸಿದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರಹ್ಲಾದ್, ಸುಧಾ ಜಾಧವ್, ಪವಿತ್ರಾ, ನಾಗಣ್ಣ, ಗಾಯತ್ರಿ, ಶಿಲ್ಪಾ, ಶ್ರೀಧರ್, ಅಬ್ದುಲ್ ಸಾಬ್ ಹಾಗೂ ಇತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!