ಸಾಂಸ್ಕೃತಿಕ ಪರಂಪರೆಗೆ ದಾಸರ ಕೊಡುಗೆ ಅನನ್ಯ

ಸಾಂಸ್ಕೃತಿಕ ಪರಂಪರೆಗೆ ದಾಸರ ಕೊಡುಗೆ ಅನನ್ಯ

ಹರಿಹರ: ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ ಹರೀಶ್‌ 

ಹರಿಹರ, ನ.18- ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರ ಕೊಡುಗೆ ಅನನ್ಯವಾಗಿದೆ ಎಂದು ಶಾಸಕ ಬಿ.ಪಿ. ಹರೀಶ್‌ ಹೇಳಿದರು.

ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಕನಕದಾಸ ಜಯಂತಿ’ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕನಕದಾಸರು 16ನೇ ಶತಮಾನದ ಸಾಮಾಜಿಕ ವ್ಯವಸ್ಥೆಯಲ್ಲಿನ ಜಾತಿ ಪದ್ಧತಿ ಹೋಗಲಾಡಿಸಲು ಹಾಗೂ ಸಾಮಾಜಿಕ ಮಡಿವಂತಿಕೆ ವಿರುದ್ಧ ತಮ್ಮ ಕೀರ್ತನೆಗಳಲ್ಲಿ ವಿಡಂಬಿಸಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದರು ಎಂದು ಸ್ಮರಿಸಿದರು.

ಕೀರ್ತನೆಗಳು, ಹಾಡುಗಳು ಹಾಗೂ ಉತ್ತಮ ಸಂದೇಶಗಳ ಮೂಲಕ ಕನಕರು ಶಾಶ್ವತವಾಗಿ ನಮ್ಮೊಂದಿಗಿದ್ದಾರೆ. ಜೀವನದ ಕೊನೆ ಉಸಿರಿರುವವರೆಗೂ ಅವರು ಸಂಗೀತ, ಸಾಹಿತ್ಯದ ದಾಸರಾಗುವ ಜತೆಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಒಂದು ಜಾತಿ, ಧರ್ಮ ಮತ್ತು ಪ್ರದೇಶಕ್ಕೆ ಸೀಮಿತವಾಗದ ಕನಕದಾಸರ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದು ಹೇಳಿದರು.

ಪ್ರಸ್ತುತ ದಿನಮಾನಕ್ಕೆ ಕನಕರ ಸಂದೇಶಗಳು ಮುಖ್ಯವಾಗಿ ಬೇಕಿದ್ದು, ಯುವಕರು ಅವರ ತತ್ವ ಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ವನ್ನು ನಡೆಸುವಂತಾಗಲಿ ಎಂದು ಹೇಳಿದರು.

ಈ ವೇಳೆ ತಹಶೀಲ್ದಾರ್ ಗುರುಬಸವರಾಜ್, ತಾ.ಪಂ ಇಓ ಸುಮಲತಾ, ಸಿಪಿಐ ಸುರೇಶ್ ಸಗರಿ, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕೆ ಇಲಾಖೆಯ ಶಶಿಧರಯ್ಯ, ಪಶುಪಾಲನೆ ಇಲಾಖೆಯ ಸಿದ್ದೇಶ್, ಸರ್ವೆ ಇಲಾಖೆಯ ವಿಜಯಕುಮಾರ್, ಪಿಎಸ್‌ಐ ಶ್ರೀಪತಿ ಗಿನ್ನಿ, ವಿ.ಎ. ಹೇಮಂತ್ ಕುಮಾರ್, ಕನ್ನಡ ಪರ ಸಂಘಟನೆಗಳು, ವಿವಿಧ ನಿಗಮ ಮಂಡಳಿಯ ಮುಖಂಡರಿದ್ದರು.

error: Content is protected !!