ಎರಡು ತಿಂಗಳಲ್ಲಿ ನಾಯಿ ದಾಳಿಗೆ ತುತ್ತಾದವರ ಸಂಖ್ಯೆ 281
ದಾವಣಗೆರೆ: `281′ ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಯಿ ಕಡಿತದಿಂದ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಇದು. ಇದಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರೂ ಇರಬಹುದು.
ಒಟ್ಟಾರೆ ಬೀದಿ ನಾಯಿಗಳ ಹಾವಳಿಗೆ ದಾವಣಗೆರೆ ನಗರವೂ ಸೇರಿದಂತೆ ಜಿಲ್ಲೆಯ ಜನತೆ ರೋಸಿ ಹೋಗಿದ್ದಾರೆ. ಇವುಗಳ ಉಪಟಳಕ್ಕೆ ಪರಿಹಾರವೇ ಇಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ. ದಂಡಿಗೆ, ದಾಳಿಗೆ ಹೆದರದೇ ಇದ್ರೂ, ಬೀದಿ ನಾಯಿಗಳಿಗೆ ಹೆದರಬೇಕಾದ ಪರಿಸ್ಥಿತಿ ದಾವಣಗೆರೆ ಜನತೆಯದ್ದು.
ಪ್ರತಿ ದಿನ ಎರಡರಿಂದ ಮೂರು ಪ್ರಕರಣಗಳು ಜಿಲ್ಲಾಸ್ಪತ್ರೆಯಲ್ಲಿ ಕಾಣಿಸಿಕೊಳ್ಳುತ್ತವೆ. 2024ರಲ್ಲಿ ಜನವರಿಯಿಂದ ಅಕ್ಟೋಬರ್ ಕೊನೆಯವರಗೆ 735 ಜನರು ನಾಯಿ ಕಚ್ಚಿದಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಕಳೆದ 2023ರ ಜನವರಿ ಯಿಂದ ಡಿಸೆಂಬರ್ವರೆಗೆ 434 ಜನರು ನಾಯಿ ಕಡಿತಕ್ಕೊಳಗಾಗಿ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಆಶ್ಚರ್ಯವೆಂದರೆ ಕಳೆದ ಆಗಸ್ಟ್ ತಿಂಗಳಲ್ಲಿ 77, ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಅಂದರೆ 166 ಹಾಗೂ ಅಕ್ಟೋಬರ್ ತಿಂಗಳಲ್ಲಿ 115 ಜನರಿಗೆ ನಾಯಿಗಳು ಕಚ್ಚಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಕಳೆದ ಕೆಲವು ತಿಂಗಳಿನಿಂದ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಈ ವರ್ಷ 2 ಸಾವು
ಕಳೆದ ಮಾರ್ಚ್ 14ರಂದು ಜಗಳೂರು ತಾಲ್ಲೂಕಿನ ಹನುಮಾಪುರದ ಹಳ್ಯಪ್ಪ ರಂಗಪ್ಪ ಎಂಬ 33 ವರ್ಷದ ಯುವಕ ನಾಯಿ ಕಚ್ಚಿ ರೇಬಿಸ್ನಿಂದ ಮೃತಪಟ್ಟಿದ್ದ. ಇನ್ನು ಕಳೆದ ಅಕ್ಟೋಬರ್ನಲ್ಲಿ ನಾಯಿ ಕಚ್ಚಿ ದಾವಣಗೆರೆ ಆಜಾದ್ ನಗರದಲ್ಲೂ ಒಂದು ಸಾವು ಸಂಭವಿಸಿದೆ. ಆದರೆ ಅದು ರೇಬಿಸ್ನಿಂದ ಎಂಬುದು ಇನ್ನೂ ದೃಢಪಟ್ಟಿಲ್ಲ.
ಪರಿಹಾರಕ್ಕೆ ಪ್ರಚಾರದ ಕೊರತೆ
ಸರ್ಕಾರವು ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಐದು ಸಾವಿರ ಹಾಗೂ ಮೃತಪಟ್ಟವರಿಗೆ 5 ಲಕ್ಷ ರೂ.ಪರಿಹಾರ ನೀಡುವಂತೆ ಆದೇಶಿಸಿದೆ.
ಆದರೆ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಪರಿಹಾರ ಪಡೆದವರು ಮಾತ್ರ ಐದು ಜನ. ಪರಿಹಾರ ಸಿಗುವ ಬಗ್ಗೆ ಅನೇಕರಿಗೆ ಅರಿವಿಲ್ಲ. ಅರಿವು ಮೂಡಿಸುವ ಬಗ್ಗೆ ಪಾಲಿಕೆ ಅಧಿಕಾರಿಗಳೂ ಮುಂದಾಗಿಲ್ಲ. ನಾಯಿ ಕಚ್ಚಿ ಚಿಕಿತ್ಸೆ ಪಡೆದವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆ ಸರ್ಕಾರಿ ಆಸ್ಪತ್ರೆಯಿಂದ ಮೆಡಿಕಲ್ ರಿಪೋರ್ಟ್ ಬೇಕು. ಪೊಲೀಸ್ ಇಲಾಖೆಯಿಂದ ಎನ್ಸಿಆರ್ ವರದಿ ಪಡೆದು ಸಲ್ಲಿಸಬೇಕು. ಇನ್ನು ಪರಿಹಾರ ಪ್ರಕ್ರಿಯೆಗಳೂ ವಿಳಂಬ ಈ ಕಾರಣಕ್ಕಾಗಿ ಜನರೂ ಸಹ ಅರ್ಜಿ ಸಲ್ಲಿಸದೇ ಇರುವುದಕ್ಕೆ ಕಾರಣ ಇರಬಹುದು.
ನಾಯಿ ಕಡಿದರೆ ನಿರ್ಲಕ್ಷ್ಯ ಬೇಡ
ರೇಬಿಸ್ ಸೋಂಕು ತಗುಲಿದರೆ ಸಾವು ನಿಶ್ಚಿತ. ರೇಬಿಸ್ ನಾಯಿ ಕಡಿತದಿಂದ ಶೇ 97ರಷ್ಟು ಪ್ರಮಾಣದಲ್ಲಿ ಬಂದರೆ, ಬೆಕ್ಕು ಹಾಗೂ ಕಾಡುಪ್ರಾಣಿಗಳ ಕಚ್ಚುವಿಕೆಯಿಂದ ಇನ್ನುಳಿದ ಶೇ 3ರಷ್ಟು ಬರುತ್ತದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಬೇಕು. ಸಾಕು ಪ್ರಾಣಿಗಳಿಗೂ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಬೇಕು ಎನ್ನುತ್ತಾರೆ ವೈದ್ಯರು.
ನಾಯಿ, ಬೆಕ್ಕು ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದರೂ ಆ ಜಾಗವನ್ನು ಮೊದಲು ಸೋಪು ಇಲ್ಲವೇ ಡೆಟಾಲ್ ಹಚ್ಚಿ ಚೆನ್ನಾಗಿ ತೊಳೆಯಬೇಕು. ಅಲ್ಲಿಯೇ ಯಾವುದೇ ಪಟ್ಟಿ ಕಟ್ಟುವುದು ಸಲ್ಲದು. ನಾಟಿ ವೈದ್ಯರ ಬಳಿಗೆ ಹೋಗದೇ, ಏಳು ದಿನಗಳ ಒಳಗೆ ರೇಬಿಸ್ ಪ್ರತಿರೋಧಕ ಚುಚ್ಚುಮದ್ದು ಪಡೆಯಬೇಕು.
ಸ್ಮಾರ್ಟ್ ಸಿಟಿ ದಾವಣಗೆರೆ ನಗರದಲ್ಲಂತೂ ಹತ್ತಾರು ನಾಯಿಗಳ ಹಿಂಡು ಪ್ರತಿ ಬಡಾವಣೆಯ ಪ್ರತಿ ಬೀದಿಗಳಲ್ಲೂ ಕಾಣ ಸಿಗುತ್ತವೆ. ರಾತ್ರಿಯಾಗುತ್ತಲೇ ಸೈಕಲ್, ಬೈಕ್ ಸವಾರರ ಬೆನ್ನತ್ತುವೆ. ಅಂದ ಹಾಗೆ ಈ ಬೀದಿ ನಾಯಿಗಳಿಗೆ ಪೊಲೀಸ್, ಪತ್ರಕರ್ತ, ಪಾಲಿಕೆ ಸದಸ್ಯ, ಅಧಿಕಾರಿ, ಸಾಮಾನ್ಯ ನಾಗರಿಕ ಎಂಬ ಯಾವ ಬೇಧವೂ ಇಲ್ಲ ಅನ್ನಿ. ಎಲ್ಲರೂ ನಾಯಿ ಉಪಟಳ ಅನುಭವಿಸಿದವರೇ.
ಚಿಕ್ಕಮಕ್ಕಳು, ವೃದ್ಧರಂತೂ ಬೀದಿಯಲ್ಲಿ ಓಡಾಡಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಮಾಧ್ಯಮಗಳು ಎಚ್ಚರಿಸಿದರೂ, ಮಹಾನಗರ ಪಾಲಿಕೆಯಿಂದ ಮಾತ್ರ `ನಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ’ ಎಂಬ ಉತ್ತರ ಬರುತ್ತದೆ.
ಪಾಲಿಕೆ ಸಿಬ್ಬಂದಿಗಳಿಂದಲೇ ನಡೆದಿರುವ ಇತ್ತೀಚಿನ ಸರ್ವೇ ಪ್ರಕಾರ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 16 ಸಾವಿರ ನಾಯಿಗಳಿವೆ. ಪ್ರತಿ ವರ್ಷ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ವ್ಯಾಕ್ಸಿನ್ ಕೊಡಲು ಟೆಂಡರ್ ಕರೆಯಲಾಗುತ್ತದೆ. ನಿರಂತರವಾಗಿ ಸಂತಾನ ಹರಣ ಚಿಕಿತ್ಸೆ ನೀಡುತ್ತಿರುವುದರಿಂದ ಸದ್ಯ ಬೆಳವಣಿಗೆ ನಿಂತಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗುವ ಎಲ್ಲರೂ ಪಾಲಿಕೆ ವ್ಯಾಪ್ತಿಯಲ್ಲಿ ಇರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಬಹುದು. ಆದರೆ ಬಹುತೇಕವಾಗಿ ದಾಖಲಾಗುವ ಪ್ರಕರಣಗಳು ಪಾಲಿಕೆ ವ್ಯಾಪ್ತಿಯಲ್ಲಿವೇ ಹಾಗೂ ನಗರದ ಐದಾರು ಕಿಲೋ ಮೀಟರ್ ಸುತ್ತಲಿನ ಪ್ರದೇಶಗಳಿಂದ ಬಂದವರೇ ಎನ್ನುತ್ತವೆ ಆಸ್ಪತ್ರೆಯ ಮೂಲಗಳು.
ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ [email protected]