ಅಜಾಗರೂಕ ಚಾಲನೆ, ಅನುಚಿತ ವರ್ತನೆ

ಅಜಾಗರೂಕ ಚಾಲನೆ, ಅನುಚಿತ ವರ್ತನೆ

ಬಸ್, ಆಟೋ ಚಾಲಕರಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಎಚ್ಚರಿಕೆ

ದಾವಣಗೆರೆ, ನ. 15 – ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರು ಅಜಾಗರೂಕತೆಯಿಂದ ವಾಹನ ಚಲಾಯಿಸುವ ಮೂಲಕ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಚಾಲಕರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದಾರೆ. ಇಂತಹ ಬಸ್‌ಗಳನ್ನು ಮುಲಾಜಿಲ್ಲದೇ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರಿಗೆ ಈ ಬಗ್ಗೆ ಅರಿವು ಮೂಡಿಸಲು ಸಭೆ ಕರೆಯಬೇಕು. ಇಷ್ಟಾದ ನಂತರವೂ ಬೇಜವಾಬ್ದಾರಿಯಿಂದ ಬಸ್ ಚಲಾಯಿಸಿದರೆ, ಬಸ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಈ ರೀತಿಯ ಕಠಿಣ ಕ್ರಮ ತೆಗೆದುಕೊಂಡರೆ, ಅದು ಉಳಿದವರಿಗೂ ಎಚ್ಚರಿಕೆಯಾಗಲಿದೆ. ನಾಲ್ಕೈದು ದಿನ ಬಸ್‌ಗಳನ್ನು ವಶಕ್ಕೆ ತೆಗೆದುಕೊಂಡರೆ ಮಾಲೀಕರಿಗೆ ಅರಿವಾಗಲಿದೆ ಎಂದು ಗಂಗಾಧರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ನನ್ನ ಮಕ್ಕಳೇ ಇತ್ತೀಚೆಗೆ ಖಾಸಗಿ ಬಸ್‌ ಒಂದರ ಬೇಜವಾಬ್ದಾರಿ ಚಾಲನೆಯಿಂದ ಅಪಾಯಕ್ಕೆ ಸಿಲುಕಿದ್ದರು. ಮಕ್ಕಳು ಉಳಿದಿದ್ದೇ ಪುಣ್ಯ ಎಂದು ಹೇಳಿದರು.

ಆಟೋ ರಿಕ್ಷಾದ ಹಲವಾರು ಚಾಲಕರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಜನನಿಬಿಡ ತಾಣಗಳಲ್ಲಿ ಮಹಿಳೆಯರ ಎದುರಿಗೇ ವಾಹನ ಚಾಲಕರು ಮೂತ್ರ ವಿಸರ್ಜನೆ ಮಾಡುವ ವಿಡಿಯೋ ಒಂದನ್ನು ಸಾರ್ವಜನಿಕರೊಬ್ಬರು ಇತ್ತೀಚೆಗೆ ತಮಗೆ ಕಳಿಸಿ ದೂರು ನೀಡಿದ್ದರು. ಸರಿಯಾಗಿ ವರ್ತಿಸುವುದನ್ನೂ ಕಲಿಸಿ ಕೊಡಬೇಕಾ? ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಪ್ರಶ್ನಿಸಿದರು.

ಕೆಲ ಆಟೋಗಳಲ್ಲಿ ಮಿತಿ ಮೀರಿ ಮಕ್ಕಳು ಹಾಗೂ ಜನರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಮೀಟರ್‌ಗಳನ್ನೂ ಅಳವಡಿಸಿಕೊಳ್ಳುತ್ತಿಲ್ಲ. ನಗರದಲ್ಲಿ ಸಂಚರಿಸುವ ಆಟೋಗಳ ಪಟ್ಟಿಯನ್ನು ಕೊಡುವಂತೆ ಆಟೋ ಸಂಘದವರಿಗೆ ತಿಳಿಸಿದರೆ ಇನ್ನೂ ಪಟ್ಟಿ ಕೊಟ್ಟಿಲ್ಲ. ಇಂತಹ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆಟೋಗಳ ನಿಲುಗಡೆ ಜಾಗಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ನಿಲುಗಡೆ ಇಲ್ಲದ ಸ್ಥಳಗಳಲ್ಲಿ ಆಟೋಗಳು ನಿಂತು ಜನರಿಗೆ ಸಮಸ್ಯೆಯಾಗಬಾರದು. ಈ ಬಗ್ಗೆ ಪಾಲಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಬಹಳಷ್ಟು ಆಟೋಗಳಿಗೆ ಎಫ್.ಸಿ. ಇಲ್ಲ, ಇವುಗಳು 15 ವರ್ಷ ಮೀರಿವೆ ಎಂದು ಆರ್.ಟಿ.ಒ. ಪ್ರಮುತೇಶ್ ತಿಳಿಸಿದಾಗ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಗಳೂರು ರಸ್ತೆ ಕಿಷ್ಕಿಂಧೆಯಂತಾಗಿದೆ. ಈ ಸಮಸ್ಯೆ ಬಗೆಹರಿಸಲು ರಿಂಗ್ ರಸ್ತೆ ನಿರ್ಮಿಸಬೇಕಿದೆ. ಇಲ್ಲವೇ ಮುಖ್ಯ ರಸ್ತೆಯಲ್ಲಿ ವಾಹನಗಳ ನಿಲುಗಡೆ ತಪ್ಪಿಸಿ, ಬೇರೆಡೆ ನಿಲುಗಡೆಗೆ ವ್ಯವಸ್ಥೆ ಮಾಡಬೇಕಿದೆ. ಈ ಬಗ್ಗೆ ಶಾಸಕರ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಎಎಸ್‌ಪಿ ವಿಜಯ ಕುಮಾರ್ ಸಂತೋಷ್, ಸೈಬರ್ ಅಪರಾಧ ಠಾಣೆಯ ಡಿವೈಎಸ್‌ಪಿ ಪದ್ಮಶ್ರೀ ಮತ್ತಿತರರು ಉಪಸ್ಥಿತರಿದ್ದರು.

error: Content is protected !!