ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಅಂಗವಾಗಿ ಜನ ಜಾತಿಯ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ನ. 15 – ರಾಷ್ಟ್ರದ ಸ್ವಾತಂತ್ರ್ಯ ಕ್ಕಾಗಿ ಹಾಗೂ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಬಿರ್ಸಾ ಮುಂಡಾ ಅವರಾಗಿದ್ದು ಕೇಂದ್ರ ಸರ್ಕಾರ ಬುಡಕಟ್ಟು ಜನರ ಅಭಿವೃದ್ದಿಗಾಗಿ ಅನುಷ್ಟಾನ ಮಾಡುತ್ತಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಜನರ ಅಭಿವೃದ್ದಿ ಮಾಡಲು ಕ್ರಮವಹಿಸಲಾಗುತ್ತದೆ ಎಂದು ಸಂಸದ ರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜನ ಜಾತಿಯ ಗೌರವ್ ದಿವಸ್ ಆಚರಣೆ ಸಮಾರಂಭದಲ್ಲಿ ಆದಿವಾಸಿ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಅಂಗವಾಗಿ ಜನ ಜಾತಿಯ ಗೌರವ್ ದಿವಸ್ ಎಂದು ಪ್ರತಿ ವರ್ಷ ನ. 15 ರಂದು ಆಚರಿಸಲಾಗುತ್ತದೆ.
ಜನ ಜಾತಿಯ ಗೌರವ್ ದಿವಸದಂದು ದೇಶದ ಜನ ಜಾತಿಯ ಜನರ ಸಾಧನೆಗಳು, ಸಂಸ್ಕೃತಿಗಳು, ಐತಿಹ್ಯಗಳು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು. ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರವು ಆದಿವಾಸಿಗಳ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಹಾಗೂ ಧರ್ತಿ ಆಬಾ ಜನ ಜಾತಿಯ ಉತ್ಕರ್ಷ ಅಭಿಯಾನ ಕಾರ್ಯಕ್ರಮಗಳಡಿಯಲ್ಲಿ ಆದಿವಾಸಿಗಳಿಗೆ ಹಾಗೂ ಎಸ್ಟಿ ಜನರ ಸ್ವಸಹಾಯ ಗುಂಪುಗಳಿಗೆ ಜಿಲ್ಲಾ ಪಂಚಾಯತ್ನಿಂದ ಎನ್ಆರ್ಎಲ್ಎಂ ರಡಿ ಪ್ರಧಾನ ಮಂತ್ರಿ ವನಧನ್ ಯೋಜನೆಯಡಿ ಜಿಲ್ಲೆಯಲ್ಲಿನ 5 ವನಧನ್ ವಿಕಾಸ ಕೇಂದ್ರಗಳ ಸ್ವಸಹಾಯ ಸಂಘದ ಮಹಿಳಾ ಗುಂಪುಗಳಿಗೆ 37 ಲಕ್ಷದ ವೆಚ್ಚದಲ್ಲಿ 22 ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ಸ್ವ ಉದ್ಯೋಗ ನೀಡುವ ಅಗರಬತ್ತಿ ತಯಾರಿಸುವ ಯಂತ್ರ, ಅಡಿಕೆ ಕತ್ತರಿಸುವ ಯಂತ್ರ, ಎಣ್ಣೆ ಗಾಣ, ಹಿಟ್ಟಿನ ಗಿರಣಿ, ಅಡಿಕೆ ತಟ್ಟೆ ಯಂತ್ರ, ರೊಟ್ಟಿ ಮಾಡುವ ಯಂತ್ರಗಳನ್ನು ವಿತರಣೆ ಮಾಡಲಾಗಿದೆ.
ವನಧನ್ ಯೋಜನೆ ಐದು ವರ್ಷಗಳ ಕಾರ್ಯಕ್ರಮವಾಗಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನ ಮಾಡಿ ಅತ್ಯುತ್ತಮ ಜಿಲ್ಲೆ ಎಂದು ಹೆಸರು ಗಳಿಸುವ ಮೂಲಕ ಕೇಂದ್ರದ ಹೆಚ್ಚಿನ ಅನುದಾನ ದಾವಣಗೆರೆಗೆ ಪಡೆದು ಕ್ಷೇತ್ರದಲ್ಲಿನ ಬುಡಕಟ್ಟು ಹಾಗೂ ಪ. ಪಂಗಡದ ಜನರ ಆರ್ಥಿಕಾಭಿವೃದ್ದಿ ಮತ್ತು ಇವರು ವಾಸಿಸುವ ಕಡೆ ಮೂಲಭೂತ ಸೌಕರ್ಯ, ಆಶ್ರಮ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕೆಂದು ತಿಳಿಸಿ ಸ್ವ ಉದ್ಯೋಗ ಕೈಗೊಂಡ ಮಹಿಳೆಯರು ಮುಂದಿನ ದಿನಗಳಲ್ಲಿ ತಮ್ಮ ಆರ್ಥಿಕ ಅನುಕೂಲತೆಗಳ ಮತ್ತು ಅಭಿವೃದ್ದಿ ಕುರಿತು ಯಶೋಗಾಥೆಗಳನ್ನು ಇಲಾಖೆಯೊಂದಿಗೆ ಹಂಚಿಕೆ ಮಾಡಿಕೊಳ್ಳುವಂತಾಗಬೇಕೆಂದು ಆಶಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಯೋಜನಾ ನಿರ್ದೇಶಕ ರೇಷ್ಮಕೌಸರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.