ಕುಂಬಳೂರಿನ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಡಾ. ಶ್ರೀನಿವಾಸ್ ಕಿವಿಮಾತು
ಮಲೇಬೆನ್ನೂರು, ನ. 14 – ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂಬ ಮಾತು ಪೋಷಕರಿಂದಲೇ ಕೇಳಿ ಬರುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಅಷ್ಟು ಸೂಕ್ತವಲ್ಲ. ಆದ್ದರಿಂದ ಮೊಬೈಲ್ ಬಳಕೆ ಬಿಟ್ಟು, ಬಾಲ್ಯ ಸಂಭ್ರಮಿಸುವ ಕಡೆ ಗಮನ ಕೊಡಿ ಎಂದು ಮಕ್ಕಳ ತಜ್ಞ ಡಾ. ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಂಬಳೂರು ಹೊರವಲಯದಲ್ಲಿರುವ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಆಟ, ಪಾಠದ ಜೊತೆಗೆ ಇತರೆ ಮಕ್ಕಳ ಜೊತೆ ಮತ್ತು ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಬಾಲ್ಯವನ್ನು ಸಂತಸದಿಂದ ಕಳೆಯಬೇಕು. ಮಕ್ಕಳಿಗೆ ಟಿವಿ ಗಿಂತ ಮೊಬೈಲ್ ಅಪಾಯಕಾರಿಯಾಗಿದ್ದು, ಮಕ್ಕಳನ್ನು ಆದಷ್ಟು ಮೊಬೈಲ್ ನಿಂದ ದೂರ ಇಡಿ ಎಂದು ಶ್ರೀನಿವಾಸ್ ಪೋಷಕರಿಗೆ ಹೇಳಿದರು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ನಮ್ಮ ಹಿರಿಯರ ಶ್ರಮ ಮತ್ತು ಕಾಳಜಿಯನ್ನು ಅರಿತು ನಾವು ಭಾಷಾಭಿಮಾನ ಬೆಳೆಸಿಕೊಳ್ಳಬೇಕು.
ರಾಜ್ಯೋತ್ಸವ ಕುರಿತು ಮಾತನಾಡಿದ ಕನ್ನಡ ಅಧ್ಯಾಪಕ ವೀರಭದ್ರಾಚಾರ್, ಕನ್ನಡ ಸಿಹಿಯಾದ ಭಾಷೆ. ನಮ್ಮ ನಾಡು ನುಡಿ, ಪರಂಪರೆ, ಸಂಸ್ಕೃತಿಗೆ ಬಹಳಷ್ಟು ಅನ್ಯ ಭಾಷಿಗರು ಸಾಕಷ್ಟು ಕೊಡುಗೆ ನೀಡಿ ಅಭಿಮಾನ ಮೆರೆದಿದ್ದಾರೆ. ಮೂಲ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಸರಿಯಾಗಿ ಬಳಸಿದರೆ ಸಾಕು ಕನ್ನಡ ತಂತಾನೇ ಉಳಿಯುತ್ತದೆ – ಬೆಳೆಯುತ್ತದೆ ಎಂದರಲ್ಲದೆ ದ. ರಾ ಬೇಂದ್ರೆ, ಕುವೆಂಪು ಸೇರಿದಂತೆ ಇತರೆ ಕವಿಗಳ ಸಾಹಿತ್ಯ ಶ್ರೇಷ್ಟತೆಯನ್ನು ಕೆಲ ಉದಾಹರಣೆಯೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ನಾಡು -ನುಡಿಯ ವೈಭವ ಸಾರುವ ವಿವಿಧ ಹಾಡುಗಳಿಗೆ ಮಕ್ಕಳು ಮಡಿದ ನೃತ್ಯ ಗಮನ ಸೆಳೆಯಿತು. ಮಾಡಿದರು. ಅಂತೆಯೇ ವೇದಿಕೆ ಮುಂಭಾಗದಲ್ಲಿ ಛದ್ಮವೇಷ ಧರಿಸಿ ಕುಳಿತಿದ್ದ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಧನಲಕ್ಷ್ಮೀ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಚಿಟ್ಟಕ್ಕಿ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಎಸ್ ಕೆ ಕುಮಾರ್, ಪ್ರಾಂಶುಪಾಲರಾದ ಚೇತನಕುಮಾರ್, ಉಪ ಪ್ರಾಂಶುಪಾಲರಾದ ಕು. ಅಖಿಲೇಶ್ವರಿ, ಸಂಯೋಜಕರಾದ ಹಬೀಬ್ ವೇದಿಕೆಯವೇದಿಕೆಯಲ್ಲಿದ್ದರು.
ಶ್ರೇಯಾ ಪ್ರಾರ್ಥಿಸಿದರು. ಶಿಕ್ಷಕ ವಿಕಾಸ್ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ನಿರೂಪಿಸಿದರೆ, ಶಿಕ್ಷಕ ಹಾಗೂ ಸಾಹಿತಿ ಬಿ ಎಲ್ ಗಂಗಾಧರ್ ನಿಟ್ಟೂರು ವಂದಿಸಿದರು.